ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ 'ಕೈ' ಹಾಕಬಾರದಿತ್ತು: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2018, 12:30 IST
Last Updated 18 ಅಕ್ಟೋಬರ್ 2018, 12:30 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮತ್ತೆ ಮುಂಚೂಣಿಗೆ ಬಂದಿದೆ.

ಸದಾಶಿವನಗರದಲ್ಲಿ ಗುರುವಾರ ಮಾತನಾಡಿದ ಸಚಿವ ಡಿ.ಕೆ. ಶಿವಕುಮಾರ್, ‘ನಮಗೆ (ಕಾಂಗ್ರೆಸ್) ನಾವು ಮಾಡಿರುವ ತಪ್ಪಿನ ಅರಿವಾಗಿದೆ. ನಾವು ಪ್ರತ್ಯೇಕ ಲಿಂಗಾಯತ ಧರ್ಮದ ‌ವಿಚಾರದಲ್ಲಿ ಕೈ ಹಾಕಬಾರದಿತ್ತು’ ಎಂದರು.

‘ಬೇಕಾದರೆ ನನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲಿ. ಇದು ನನ್ನ ಆತ್ಮಸಾಕ್ಷಿಯ ಮಾತು. ಕೆಲವು ಸ್ನೇಹಿತರು ಪ್ರತ್ಯೇಕ ಧರ್ಮದ ಪರವಾಗಿ ಕೆಲಸ ಮಾಡಿದ್ದರು. ಜನರ ತೀರ್ಪು ನೋಡಿದರೆ ನಾವು ಯಾರು ಪರ ನಿಂತಿದ್ದೆವೋ ಅದಕ್ಕೆ ವಿರುದ್ಧವಾಗಿದೆ. ಇದನ್ನು ಯಾರಾದರೂ ಹೇಗೆ ಬೇಕಾದರೂ ವ್ಯಾಖ್ಯಾನಿಸಲಿ’ ಎಂದರು.

ADVERTISEMENT

‘ಸರ್ಕಾರ ಇಂತಹ ಕಾರ್ಯದಲ್ಲಿ ಭಾಗಿ ಆಗಬಾರದಿತ್ತು. ನನ್ನ ಮಾತು ಸರಿ ಅನ್ನಲಿ, ತಪ್ಪು ಅನ್ನಲಿ. ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಆದರೆ, ಕೆಲವರು ಈಗಲೂ ತಮ್ಮ ವಾದವೇ ಸರಿ ಎನ್ನುತ್ತಿದ್ದಾರೆ’ ಎಂದೂ ಹೇಳಿದರು.

'ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನಕ್ಕೆ ಮನ್ನಣೆ ಕೊಡಬೇಕಾಗುತ್ತದೆ. ತಪ್ಪುಗಳು ಮಾಡುವಾಗ ತಪ್ಪೆಂದು ಒಪ್ಪಿಕೊಳ್ಳಬೇಕು. ಈಶ್ವರ ಖಂಡ್ರೆ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯಗೆ ಮನವರಿಕೆ ಮಾಡಿದ್ದರು. ತಪ್ಪು ಮಾಡಿ ಇಂದು ಅದರ ಫಲ ಉಂಡಿದ್ದೇವೆ' ಎಂದರು.

ಶಿವಕುಮಾರ್ ಹೇಳಿಕೆಯನ್ನು ಶಾಸಕ ಎಂ.ಬಿ. ಪಾಟೀಲ ವಿರೋಧಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, 'ಎಂ.ಬಿ. ಪಾಟೀಲ ನನ್ನ ಆತ್ಮೀಯ ಸ್ನೇಹಿತ. ಎಂ.ಬಿ. ಪಾಟೀಲ ಇಲ್ಲವೇ ಇನ್ನೊಬ್ಬರಿಗೆ ಉತ್ತರಿಸುವ ಅಗತ್ಯವಿಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ರಾಜ್ಯ, ರಾಷ್ಟ್ರದ ನಾಯಕನಲ್ಲ. ನಾನು ಯಾರೊಬ್ಬರನ್ನೂ ಗೆಲ್ಲಿಸಿಕೊಂಡು ಬಂದಿಲ್ಲ, ಅಷ್ಟು ಶಕ್ತಿಯೂ ನನಗಿಲ್ಲ' ಎಂದರು.

‘ಪಕ್ಷದ ಕೆಲಸ ನೋಡಿಕೊಂಡು ಹೋಗುತ್ತೇನೆ. ಒಳ್ಳೆಯದು, ಕೆಟ್ಟದ್ದು ಅನ್ನುವ ವಿಚಾರ ಬೇಡ. ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ’ ಎಂದರು.

ಶಿವಕುಮಾರ್ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.