ಬೆಂಗಳೂರು: ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ವಿಚಾರವಾಗಿ ಸಾರ್ವಜನಿಕವಾಗಿ ಮತ್ತು ಮಾಧ್ಯಮಗಳ ಮುಂದೆ ಮಾತನಾಡುವವರಿಗೆ ವಿಧಿಯಿಲ್ಲದೆ ನೋಟಿಸ್ ಕೊಟ್ಟು, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡರೆ ಉತ್ತಮ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಬಹಿರಂಗ ಹೇಳಿಕೆ ನೀಡುವವರು ಎಐಸಿಸಿ ಮತ್ತು ರಾಜ್ಯ ಘಟಕದಿಂದ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ. ಪಕ್ಷಕ್ಕೆ ಶಿಸ್ತು ಮುಖ್ಯ. ಶಿಸ್ತಿಲ್ಲದೆ ಯಾವುದೇ ಪಕ್ಷವಿಲ್ಲ’ ಎಂದರು.
‘ಪಕ್ಷವನ್ನು ಅಧಿಕಾರಕ್ಕೆ ತರಲು ಎಷ್ಟು ಕಷ್ಟ ಪಟ್ಟಿದ್ದೇವೆ ಎಂಬುದು ನಮಗೆ ಗೊತ್ತಿದೆ. ಇಂದು ಇವರುಗಳು (ಸಚಿವರು, ಶಾಸಕರು) ಸುಖಾಸುಮ್ಮನೆ ಮಾತನಾಡುವ ಅವಶ್ಯಕತೆಯಿಲ್ಲ’ ಎಂದರು.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ನಾನು ಚರ್ಚಿಸಿ, ಪಕ್ಷದ ಹಿತದೃಷ್ಟಿಯಿಂದ ಹೇಗೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ತೀರ್ಮಾನಕ್ಕೆ ಬಂದಿದ್ದೇವೆ. ಈ ವಿಚಾರವಾಗಿ ಯಾವುದೇ ಸಚಿವರು, ಶಾಸಕರು, ಸ್ವಾಮೀಜಿಗಳು ಮಾತನಾಡುವ ಅವಶ್ಯಕತೆ ಇಲ್ಲ’ ಎಂದು ತಿಳಿಸಿದರು.
ಹೈಕಮಾಂಡ್ ಬಳಿ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಆಯಿತೇ ಎಂದು ಕೇಳಿದಾಗ, ‘ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಬಳಿ ಚರ್ಚೆಯಾಗಿಲ್ಲ’ ಎಂದರು.
‘ಸ್ವಾಮೀಜಿಗಳು ಅಭಿಮಾನಪೂರ್ವಕವಾಗಿ ಮಾತನಾಡಿದ್ದಾರೆ. ಸ್ವಾಮೀಜಿಗಳ ಆಶೀರ್ವಾದ ಇದ್ದರೆ ಸಾಕು. ಅವರು ಒಳಗಿನಿಂದಲೇ ಹರಸಿದರೆ ಸಾಕು. ನಾನು ಮುಖ್ಯಮಂತ್ರಿ ಆಗಲು ಯಾರೂ ಶಿಫಾರಸು ಮಾಡುವುದು ಬೇಡ. ನಾನು ಮಾಡಿರುವ ಕೆಲಸವನ್ನು ನೋಡಿ ನಮ್ಮ ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಮಾಡುತ್ತದೆ. ದಯವಿಟ್ಟು ಈ ವಿಚಾರ ಇಲ್ಲಿಗೆ ಮುಗಿಸಿಬಿಡಿ’ ಎಂದು ಹೇಳಿದರು.
ಲಿಂಗಾಯತ ಸ್ವಾಮೀಜಿಗಳು ಸೇರಿದಂತೆ ಎಲ್ಲ ವಿಚಾರಗಳಲ್ಲಿ ಪದೇ, ಪದೇ ಸ್ವಾಮೀಜಿಗಳ ಮಧ್ಯಪ್ರವೇಶದ ಬಗ್ಗೆ ಕೇಳಿದಾಗ ‘ಯಾವ ಸ್ವಾಮೀಜಿಗಳು ಮಾತನಾಡಿಲ್ಲ, ಇವತ್ತೇ ಮಾತನಾಡಿದ್ದು ಅವರು. ಎಲ್ಲ ಸ್ವಾಮೀಜಿಗಳಿಗೂ ಕೈ ಮುಗಿಯುತ್ತೇನೆ, ನಮ್ಮ ರಾಜಕಾರಣದ ಸುದ್ದಿಗೆ ಬರಬೇಡಿ’ ಎಂದರು.
‘ಸಿಎಂ ಬದಲಾವಣೆ ಬಗ್ಗೆ ಸ್ವಾಮೀಜಿಗಳಿಂದ ಹೇಳಿಕೆ ಕೊಡಿಸಲಾಗಿದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಿ. ಪರಮೇಶ್ವರ ಅವರ ಸಂಭಾಷಣೆ ಬಗ್ಗೆ ಕೇಳಿದಾಗ, ‘ಆ ಬಗ್ಗೆ ನನಗೇನೂ ಗೊತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.