ಬೆಂಗಳೂರು: ‘ಎರಡು ವರ್ಷಗಳ ಬಳಿಕ ಎಂಟು ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ಜ್ಯೋತಿಷಿ ಬಿ.ಬಿ. ಆರಾಧ್ಯ ಭವಿಷ್ಯ ನುಡಿದಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಆರಾಧ್ಯ, ‘ಶಿವಕುಮಾರ್ ಅವರಿಗೆ ಇದೇ ಸಂಖ್ಯೆ ಕೊಠಡಿ ತೆಗೆದುಕೊಳ್ಳುವಂತೆ ಹೇಳಿದ್ದೆ. ಅಲ್ಲದೇ ಸಿದ್ದರಾಮಯ್ಯನವರ ವಾಸವಿರುವ ನಿವಾಸವನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ’ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ನಾಲ್ಕು ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ.
ಕೊಠಡಿ ಸಂಖ್ಯೆ 335,336,337 ಮತ್ತು 337 ಎ ಹಂಚಿಕೆಯಾಗಿದೆ. ಜ್ಯೋತಿಷಿ ಬಿ.ಬಿ. ಆರಾಧ್ಯ ಅವರ ಸಲಹೆಯಂತೆ ‘ಅದೃಷ್ಟದ ಸಂಖ್ಯೆ’ಯ ಕೊಠಡಿಗಳನ್ನೇ ಪಡೆದುಕೊಳ್ಳುವಲ್ಲಿ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಅಲ್ಲದೆ, ಸಿದ್ದರಾಮಯ್ಯ ಹಾಲಿ ವಾಸ್ತವ್ಯ ಹೂಡಿರುವ ಶಿವಾನಂದ ವೃತ್ತದ ಬಳಿ ಇರುವ ಸರ್ಕಾರಿ ನಿವಾಸ ಆಯ್ಕೆ ಮಾಡಿಕೊಳ್ಳುವಂತೆಯೂ ಶಿವಕುಮಾರ್ ಅವರಿಗೆ ಆರಾಧ್ಯ ಸೂಚಿಸಿದ್ದರು.
ಆರಾಧ್ಯ ಅವರ ಸಲಹೆಯಂತೆ ಗುರುವಾರ (ಮೇ 25) ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ತಮಗೆ ಹಂಚಿಕೆಯಾದ ಕೊಠಡಿ 336 ರಲ್ಲಿ ಶಿವಕುಮಾರ್ ಅವರು ಪೂಜೆ ನೆರವೇರಿಸಲಿದ್ದಾರೆ. ಹೀಗಾಗಿ, ಕೊಠಡಿಗೆ ಸುಣ್ಣ-ಬಣ್ಣ ಬಳಿಯುವ ಕಾರ್ಯವೂ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.