ADVERTISEMENT

ಡಿಕೆಶಿ ಅಕ್ರಮ ಆಸ್ತಿಗಳಿಕೆ ಪ್ರಕರಣ: ಸಿಬಿಐ–ಹೈಕೋರ್ಟ್‌ ಮಧ್ಯೆ ವಾಗ್ಯುದ್ಧ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 15:36 IST
Last Updated 13 ಏಪ್ರಿಲ್ 2023, 15:36 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ‘ನಿಮಗೆ ಬೇಕೆಂದಾಗ ಬಂದು ವಾದ ಮಾಡಲು ಕೋರ್ಟ್‌ ಅನ್ನು ಏನೆಂದು ತಿಳಿದಿದ್ದೀರಿ’ ಎಂದು ಹೈಕೋರ್ಟ್‌, ಸಿಬಿಐ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಈ ಮಾತಿಗೆ ಅಷ್ಟೇ ಬಿರುಸಾಗಿ ತಿರುಗೇಟು ನೀಡಿರುವ ಸಿಬಿಐ, ‘ವಾದ ಮಾಡಲು ನೀವು ಅದು ಹೇಗೆ ಅವಕಾಶ ನೀಡುವುದಿಲ್ಲ ನೋಡೇಬಿಡುವ’ ಎಂಬ ಬಿಗಿ ನಿಲುವನ್ನು ಪ್ರದರ್ಶಿಸುವ ಮೂಲಕ ಪರಸ್ಪರ ಮಾತಿನ ಚಕಮಕಿಗೆ ಮತ್ತೊಮ್ಮೆ ಸಾಕ್ಷಿಯಾಯಿತು.

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣದಲ್ಲಿ; ಸಿಬಿಐ ತನಿಖೆಗೆ ಶಿಫಾರಸು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಲಾದ ರಿಟ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣ’ಗಳ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಮಧ್ಯಾಹ್ನ ಪ್ರಕರಣದ ವಿಚಾರಣೆಯ ಕ್ರಮಸಂಖ್ಯೆ 100 ಎಂದು ನಿಗದಿಯಾಗಿದ್ದರೂ ರಾಜ್ಯ ಪ್ರಾಸಿಕ್ಯೂಟರ್‌ ಕೋರಿಕೆಯ ಮೇರೆಗೆ ನ್ಯಾಯಮೂರ್ತಿಗಳು ನಿಗದಿತ ಕ್ರಮಾಂಕಕ್ಕೆ ಬದಲಾಗಿ (ಔಟ್‌ ಆಫ್‌ ಟರ್ನ್‌) ಅರ್ಜಿ ವಿಚಾರಣೆಗೆ ಮುಂದಾದರು. ಈ ಸಮಯದಲ್ಲಿ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಕೋರ್ಟ್‌ ಹಾಲ್‌ 10ರಲ್ಲಿನ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಹಾಗೂ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್ ಯರೂರು ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠದ ಮತ್ತೊಂದು ಪ್ರಕರಣದ ವಿಚಾರಣೆಯಲ್ಲಿ ವಾದ ಮಂಡಿಸುತ್ತಿದ್ದರು.

ADVERTISEMENT

ಹೀಗಾಗಿ, ಪ್ರಸನ್ನ ಕುಮಾರ್ ಪರ ಕಿರಿಯ ವಕೀಲೆ, ‘ನಮ್ಮ ಹಿರಿಯ ವಕೀಲರು ವಿಭಾಗೀಯ ನ್ಯಾಯಪೀಠದ ಮತ್ತೊಂದು ಗಂಭೀರ ಪ್ರಕರಣದ ವಿಚಾರಣೆಯಲ್ಲಿ ವಾದ ಮಂಡಿಸುತ್ತಿದ್ದಾರೆ. ಆದ್ದರಿಂದ, ಒಂದಷ್ಟು ಸಮಯ ನೀಡಬೇಕು‘ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಸಿಬಿಐ ವಕೀಲರು ಏನೊ ವಾದ ಮಾಡುವುದಿದೆ ಎಂದು ಈ ಹಿಂದಿನ ವಿಚಾರಣೆಯಲ್ಲೇ ಹೇಳಿದ್ದರು. ಹಾಗಾಗಿ, ಅವರೂ ಬರಲಿ ನೋಡೋಣ’ ಎಂದು ಮುಂದೂಡಿತು. ಮತ್ತೊಮ್ಮೆ ವಿಚಾರಣೆಗೆ ಕರೆದಾಗ ಸಿಬಿಐ ವಕೀಲರು ಕೋರ್ಟ್‌ ಹಾಲ್‌ 10ರಲ್ಲೇ ಕೆಜಿ–ಹಳ್ಳಿ ಹಾಗೂ ಡಿಜಿ–ಹಳ್ಳಿ ಗಲಭೆ ಪ್ರಕರಣದ ವಿಚಾರಣೆಯಲ್ಲಿ ವಾದ ಮುಂದುವರಿಸಿದ್ದರು. ಅಷ್ಟೊತ್ತಿಗಾಗಲೇ, ರಾಜ್ಯ ಸರ್ಕಾರ ಮತ್ತು ಡಿ.ಕೆ.ಶಿವಕುಮಾರ್ ಪರ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದವನ್ನು ಆಲಿಕೆಯನ್ನು ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ನಟರಾಜನ್‌ ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿದರು.

ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಕೋರ್ಟ್‌ ಹಾಲ್‌ 10ರಲ್ಲಿನ ವಿಚಾರಣೆಯಿಂದ ಮಧ್ಯಕ್ಕೇ ಎದ್ದು ಓಡಿ ಬಂದ ಪ್ರಸನ್ನ ಕುಮಾರ್, ‘ಸ್ವಾಮಿ, ವಾದ ಮಂಡಿಸಲು ಅವಕಾಶ ನೀಡಬೇಕು. ತಾವು ಆದೇಶ ಕಾಯ್ದಿರಿಸಿರುವುದಾಗಿ ಪ್ರಕಟಿಸಿರುವುದನ್ನು ಹಿಂಪಡೆಯಬೇಕು’ ಎಂದು ಕೋರಿದರು.

ಈ ಮನವಿಗೆ ಕೆರಳಿ ಕೆಂಡವಾದ ನ್ಯಾಯಮೂರ್ತಿ ನಟರಾಜನ್‌, ‘ಈಗಾಗಲೇ ಸಮಯ 4.35 ಆಗಿದೆ. ಈಗ ಬಂದು ವಾದ ಮಂಡನೆಗೆ ಅವಕಾಶ ಬೇಕು ಎಂದು ಕೋರುತ್ತಿದ್ದೀರಲ್ಲಾ? ನಿಮಗೆ ತಿಳಿದಾಗ ಬಂದು ವಾದ ಮಾಡುತ್ತೇನೆ ಎನ್ನಲು ಇದನ್ನು ಏನೆಂದುಕೊಂಡಿದ್ದೀರಿ’ ಎಂದು ಗರಂ ಆದರು. ಈ ಮಾತಿಗೆ ಅಷ್ಟೇ ಪ್ರತಿಯಾಗಿ ಕನಲಿ ನಿಂತ ಪ್ರಸನ್ನಕುಮಾರ್, ‘ಸ್ವಾಮಿ ತಾವು ಈ ರೀತಿ ಹೇಳಲು ಬರುವುದಿಲ್ಲ. ನನ್ನ ವಾದ ಕೇಳಲೇ ಬೇಕು’ ಎಂದು ಪಟ್ಟು ಹಿಡಿದರು.

ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು, ‘ಇಲ್ಲಾ ನಾನು ವಾದಕ್ಕೆ ಅವಕಾಶ ಕೊಡುವುದಿಲ್ಲ. ಬೇಕಿದ್ದರೆ, ನೀವು ಹೇಳಬೇಕು ಎಂದುಕೊಂಡಿರುವುದನ್ನು ಲಿಖಿತವಾಗಿ ನ್ಯಾಯಪೀಠಕ್ಕೆ ಸಲ್ಲಿಸಿ’ ಎಂದು ಖಡಕ್ಕಾದ ಧ್ವನಿಯಲ್ಲಿ ನಿರ್ದೇಶಿಸಿದರು. ಇದನ್ನು ಸುತಾರಾಂ ಒಪ್ಪದ ಪ್ರಸನ್ನಕುಮಾರ್, ‘ಸಾಧ್ಯವಿಲ್ಲ, ತಾವು ನನ್ನ ಮೌಖಿಕ ವಾದ ಆಲಿಸಲೇಬೇಕು. ಆಲಿಸಲು ಸಾಧ್ಯವಿಲ್ಲ ಎಂಬುದೇ ನಿಮ್ಮ ತೀರ್ಮಾನವಾಗಿದ್ದರೆ ಅದನ್ನು ನೀವು ಬರೆಯಿಸುವ ನ್ಯಾಯಾಂಗದ ಲಿಖಿತ ಆದೇಶದಲ್ಲಿ ಉಲ್ಲೇಖಿಸಿ ಮುಂದುವರಿಯಿರಿ’ ಎಂದು ಸವಾಲೆಸೆದರು.

ಈ ಸಂದರ್ಭದಲ್ಲಿ ಕೋರ್ಟ್‌ ಹಾಲ್‌ನಲ್ಲಿ ಒಂದಷ್ಟು ಕ್ಷಣಗಳ ಕಾಲ ಗಾಢ ಮೌನ ಆವರಿಸುತ್ತಿದ್ದಂತೆಯೇ, ನ್ಯಾಯಮೂರ್ತಿ ನಟರಾಜನ್‌, ‘ಆಲ್‌ರೈಟ್‌ ಸೋಮವಾರ ನಿಮ್ಮ ವಾದ ಮಂಡಿಸಿ’ ಎಂದು ಆದೇಶಿಸಿ ವಿಚಾರಣೆಯನ್ನು ಇದೇ 17ಕ್ಕೆ ಮುಂದೂಡಿದರು. ಅಂತೆಯೇ, ಸಿಬಿಐ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಶಿವಕುಮಾರ್ ಪರ ಹಾಜರಿದ್ದ ಹಿರಿಯ ವಕೀಲ ಸಿ.ಎಚ್‌. ಜಾಧವ್‌ ಅವರ ಕೋರಿಕೆಯ ಮೇರೆಗೆ ಮುಂದಿನ ವಿಚಾರಣೆವರೆಗೆ ವಿಸ್ತರಿಸಿ ಆದೇಶಿಸಿದರು.

ಪ್ರಕರಣವೇನು?: ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ಕಲಂ 13 (2), 13 (1)(ಇ) ಅಡಿಯಲ್ಲಿ ಸಿಬಿಐ 2020ರ ಅಕ್ಟೋಬರ್ 3ರಂದು ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದು ಈ ಸಂಬಂಧ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ನೀಡಿರುವ ಸಮ್ಮತಿಯನ್ನು ಶಿವಕುಮಾರ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.