ADVERTISEMENT

ಶಾಸಕರ ಖರೀದಿ ವ್ಯವಹಾರ ಡಿಕೆಶಿ, ವಿಜಯೇಂದ್ರಗೆ ಗೊತ್ತು: ಯತ್ನಾಳ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 0:00 IST
Last Updated 17 ನವೆಂಬರ್ 2024, 0:00 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಹುಬ್ಬಳ್ಳಿ: ‘₹50 ಕೋಟಿ ನೀಡಿ ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಯವರು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಯಾವ ದಾಖಲೆ ಇದೆ? ವಿಡಿಯೊ, ಆಡಿಯೊ ಇದೆಯೇ? ಏನು ಸಾಕ್ಷಿ ಇದೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಹಣ ಕೊಡುವ ಕೆಲಸವನ್ನು ಅವರ ಪಕ್ಷದವರೇ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಣ ನೀಡಿರಬಹುದು. ಕಾಂಗ್ರೆಸ್‌ ಶಾಸಕರನ್ನು ಕರೆದೊಯ್ದು, ಸರ್ಕಾರ ರಚಿಸಿದರೆ ನೂರಕ್ಕೆ ನೂರರಷ್ಟು ನಾವು ಭ್ರಷ್ಟರಾಗುತ್ತೇವೆ’ ಎಂದರು.

ADVERTISEMENT

‘ಹಣ ಕೊಡುವುದು, ಶಾಸಕರ ಖರೀದಿ ಮಾಡುವುದೆಲ್ಲ ಡಿ.ಕೆ. ಶಿವಕುಮಾರ್‌, ವಿಜಯೇಂದ್ರ ಅವರಿಗೆ ಗೊತ್ತು. ನಮಗೆ ಗೊತ್ತಿಲ್ಲ’ ಎಂದು ಹೇಳಿದರು.

ವಕ್ಫ್‌ ಜನಜಾಗೃತಿ ಮೂಡಿಸಲು ಬಿಜೆಪಿ ಮೂರು ತಂಡ ರಚಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ತಂಡ ಮಾಡಿದ್ದಾರೆಂದು ವಿಜಯೇಂದ್ರ ತಂಡ ರಚಿಸಿದ್ದಾರೆ. ಅವರಿಗೆ ವಕ್ಫ್‌, ಮುಡಾ, ವಾಲ್ಮೀಕಿ ಹಗರಣ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಬಳಸಿದ ದಲಿತರ ಹಣದ ಬಗ್ಗೆ ಕಾಳಜಿ ಇಲ್ಲ. ಮುಂದೆ ಮುಖ್ಯಮಂತ್ರಿ ಹೇಗೆ ಆಗಬೇಕು? ಅಪ್ಪನಂತೆ ಹೇಗೆ ಲೂಟಿ ಮಾಡಬೇಕು ಎನ್ನುವುದರ ಬಗ್ಗೆ ಅಷ್ಟೆ ಅವರಿಗೆ ಕಾಳಜಿ ಇದೆ’ ಎಂದು ಅವರು ಹರಿಹಾಯ್ದರು. 

ವಕ್ಫ್‌ ಪ್ರತ್ಯೇಕ ತಂಡ ರಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ರೇಣುಕಾಚಾರ್ಯ ಹೇಳಿಕೆ ನೀಡಿದ ಬಗ್ಗೆ  ಪ್ರತಿಕ್ರಿಯಿಸಿದ ಅವರು, ‘ಹಾದಿ ಬೀದಿಯಲ್ಲಿ ಹೋಗುವವರ ಬಗ್ಗೆ ಮತ್ತು ಥರ್ಡ್‌ ರೇಟ್‌ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಲ್ಲ’ ಎಂದರು.

‘ಭಿನ್ನಮತಕ್ಕೆ ವರಿಷ್ಠರು ಕಡಿವಾಣ ಹಾಕಲಿ’

‘ಪಕ್ಷದ ಭಿನ್ನಮತೀಯರಿಗೆ ಕೇಂದ್ರದ ವರಿಷ್ಠರು ಕಡಿವಾಣ ಹಾಕದೇ ಇದ್ದರೆ ಮೌನ ಮುರಿಯಬೇಕಾಗುತ್ತದೆ. ‘ವಕ್ಫ್‌’ ವಿರುದ್ಧ ಪ್ರತ್ಯೇಕ ಹೋರಾಟ ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

‘ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಪಕ್ಷಕ್ಕೆ ಹೊಸ ಹುರುಪು ಸಿಕ್ಕಿದೆ. ಅವರ ರಾಜಕೀಯ ಬೆಳವಣಿಗೆ ಸಹಿಸದ ಕೆಲವರು ಭಿನ್ನಮತೀಯ ಚಟುವಟಿಕೆ ನಡೆಸುತ್ತಿದ್ದಾರೆ. ‘ವಕ್ಫ್‌’ ವಿರುದ್ಧ ಪ್ರತ್ಯೇಕ ಹೋರಾಟ ಮಾಡಲು ಮುಂದಾಗಿರುವವರಿಗೆ ವರಿಷ್ಠರು ಬುದ್ದಿ ಹೇಳಬೇಕು’ ಎಂದು ದಾವಣಗೆರೆಯಲ್ಲಿ ಶನಿವಾರ ಒತ್ತಾಯಿಸಿದರು.

‘ಬೆಳಗಾವಿ ಅಧಿವೇಶನಕ್ಕೂ ಮುನ್ನ ‘ವಕ್ಫ್‌’ ಹೋರಾಟ ತೀವ್ರಗೊಳಿಸಲು ಪಕ್ಷ ನಿರ್ಧರಿಸಿದೆ. ಮೂರು ತಂಡಗಳನ್ನು ರಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಿದೆ. ರಾಜ್ಯ ಘಟಕದ ಅಧ್ಯಕ್ಷರ ನಿರ್ಣಯಕ್ಕೆ ಬದ್ಧವಾಗಿ ಎಲ್ಲರೂ ಕೆಲಸ ಮಾಡಬೇಕು. ಪ್ರತ್ಯೇಕ ಸಭೆ ಹಾಗೂ ಪರ್ಯಾಯ ಹೋರಾಟಕ್ಕೆ ಅವಕಾಶವಿಲ್ಲ’ ಎಂದು ಬಸನಗೌಡ ಪಾಟೀಲ ಯತ್ನಾಳ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

‘ಆಪರೇಷನ್ ಕಮಲ: ಯತ್ನಾಳ್ ಹೇಳಿಕೆಯೇ ಸಾಕ್ಷಿ’

ಬೆಂಗಳೂರು: ‘ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತುಗಳಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆಯೇ ಸಾಕ್ಷಿ’ ಎಂದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಶಾಸಕರಿಗೆ ತಲಾ ₹50 ಕೋಟಿ ಆಮಿಷದ ಬಗ್ಗೆ ಸಿ.ಎಂ ಹೇಳಿದರು. ಸರ್ಕಾರ ಬೀಳಿಸಲು ₹1 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ ಎಂದು ಯತ್ನಾಳ್ ಆರೋಪಿಸಿದ್ದರು. ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ’ ಎಂದು ಪ್ರಶ್ನಿಸಿದರು.

ಶಾಸಕರು ಕುರಿಗಳಲ್ಲವೇ?: ‘ಶಾಸಕರ ಖರೀದಿ ಬಗ್ಗೆ ತನಿಖೆ ಮಾಡಿ. ಖರೀದಿ ಮಾಡಲು ಶಾಸಕರು ಕುರಿಗಳೇ’ ಎಂದು ಬಿಜೆಪಿಯವರು ಕೇಳಿದ್ದಾರೆ. ಹಾಗಾದರೆ ಈ ಹಿಂದೆ ಖರೀದಿ ಮಾಡಿದ್ದ ಶಾಸಕರು ಕುರಿಗಳಲ್ಲವೇ? ಎಂದು ಪ್ರಶ್ನಿಸಿದರು.

‘ಬಿಜೆಪಿಯವರು  ದನ, ಕುರಿಗಳನ್ನು ಖರೀದಿ ಮಾಡಿದಂತೆ ಶಾಸಕರನ್ನು ಖರೀದಿ ಮಾಡಿದ್ದಿರಲ್ಲವೇ ಎಂದು ಈ ಹಿಂದೆಯೂ ಪ್ರಶ್ನಿಸಿದ್ದೆವು. ಅಶ್ವತ್ಥ ನಾರಾಯಣ್ ಜೊತೆ ಶ್ರೀನಿವಾಸ್ ಗೌಡರ ಮನೆಗೆ ಹೋಗಿ ಹಣ ಇಟ್ಟು ಬಂದೆ ಎಂದು ಸಿ.ಪಿ.ಯೋಗೇಶ್ವರ್ ಸದನದಲ್ಲೇ ಹೇಳಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಯತ್ನಾಳ್ ದಡ್ಡರೇ?: ‘ಈ ಹಿಂದೆ ಆಡಳಿತದಲ್ಲಿ ಇದ್ದಾಗ ಬಿಜೆಪಿಯವರು ಮುಖ್ಯಮಂತ್ರಿ ಹುದ್ದೆಗೆ ₹2,500 ಕೋಟಿ ನೀಡಿದ್ದರು ಎಂದು ಯತ್ನಾಳ್ ಅವರು ಆರೋಪಿಸಿದ್ದರು. ಈಗ ವಿರೋಧ ಪಕ್ಷದ ಸದಸ್ಯರಾಗಿದ್ದಾಗಲೂ ಇದೇ ಆರೋಪ ಮಾಡುತ್ತಿದ್ದಾರೆ. ಕೇಂದ್ರದ ಮಾಜಿ ಸಚಿವರಾಗಿರುವ ಯತ್ನಾಳ್, ಈ ರೀತಿಯ ಹೇಳಿಕೆಯನ್ನು ನೀಡಲು ದಡ್ಡರೇ?’ ಎಂದರು.

ಕೋಮುಗಲಭೆಗೆ ಬಿಜೆಪಿ ಪ್ರಯತ್ನ: ‘ವಕ್ಫ್ ಭೂಮಿ ವಿಚಾರದಲ್ಲಿ ಬಿಜೆಪಿಯ ಅಭಿಯಾನ ಮೂರ್ಖತನದ್ದು. ರೈತರ ಪಹಣಿಗಳಲ್ಲಿ ವಕ್ಫ್ ಎಂದು ಬಿಜೆಪಿ ಕಾಲದಲ್ಲಿ ನಮೂದಾಗಲು ಆರಂಭವಾಯಿತು. ಈ ಬಗ್ಗೆ ನಮ್ಮ ಬಳಿ ಎಲ್ಲ ದಾಖಲೆಗಳಿವೆ. ಉಪ ಚುನಾವಣೆ ಇದ್ದುದರಿಂದ ಬಹಿರಂಗಪಡಿಸಲು ಆಗಿಲ್ಲ. ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ವಕ್ಫ್ ವಿಚಾರದಲ್ಲಿ ಬಿಜೆಪಿ ಕೈವಾಡವನ್ನು ನಾವು ಬಹಿರಂಗಪಡಿಸುತ್ತೇವೆ’ ಎಂದು ಶಿವಕುಮಾರ್ಹೇ ಳಿದರು.

ಕಾಂಗ್ರೆಸ್‌ ಶಾಸಕರಿಗೆ ₹100 ಕೋಟಿ ಆಫರ್‌: ರವಿಕುಮಾರ್‌

ಮಂಡ್ಯ: ‘ಕಾಂಗ್ರೆಸ್ ಶಾಸಕರ ಖರೀದಿಗೆ ₹50 ಕೋಟಿ ಅಲ್ಲ, ₹100 ಕೋಟಿ ಆಫರ್ ಕೊಡಲಾಗಿದೆ. ಬಿಜೆಪಿಯವರು ನಮ್ಮ ಶಾಸಕರ ಭೇಟಿಯಾಗಿದ್ದಕ್ಕೆ ಸಂಬಂಧಿಸಿದ ಆಡಿಯೊ, ವಿಡಿಯೊ ದಾಖಲೆ ಇದೆ. ಸಮಯ ನೋಡಿ ಬಿಡುಗಡೆ ಮಾಡುತ್ತೇವೆ’ ಎಂದು ಶಾಸಕ ಪಿ.ರವಿಕುಮಾರ್‌ (ಗಣಿಗ) ಹೇಳಿದರು. 

ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಮ್ಮ 50 ಶಾಸಕರನ್ನು ವಿರೋಧ ಪಕ್ಷದವರು ಎಲ್ಲಿ ಭೇಟಿ ಮಾಡಿದ್ದರು, ಯಾವ ಗೆಸ್ಟ್‌ಹೌಸ್‌ ಹಾಗೂ ಏರ್‌ಪೋರ್ಟ್‌ಗೆ ಬಂದಿದ್ದರು ಎಂಬ ವಿಡಿಯೊ ಸಹಿತ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೋರಿಸಿದ್ದೇವೆ’ ಎಂದರು.

‘ಸದಾ ಅಧಿಕಾರದಲ್ಲಿರಬೇಕು, ಅವರು ಮಾಡಿದ ಹಗರಣಗಳನ್ನು ಮುಚ್ಚಿಹಾಕಬೇಕು ಎಂಬುದು ಬಿಜೆಪಿಯವರ ಉದ್ದೇಶ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೋವಿಡ್ ಹಗರಣದ ತನಿಖೆ ನಡೆದಿದೆ. ಆದ್ದರಿಂದ ಜೈಲಿಗೆ ಹೋಗುವ ಭಯವಿರುವುದರಿಂದ ಕಾಂಗ್ರೆಸ್ ಶಾಸಕರ ಖರೀದಿಗೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ಕೋವಿಡ್-19 ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್. ಮಂಜುನಾಥ್ ಹೆಸರು ಪ್ರಸ್ತಾಪ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ‘ಯಾರೇ ತಪ್ಪು ಮಾಡಿದರೂ ತಪ್ಪು. ಕಥೆ, ಕವನ ಕೇಳುವ ಕಾಲ ಹೋಗಿದೆ. ದಡ್ಡರ ಕಾಲದಲ್ಲಿ ರಾಜಕೀಯ ಮಾಡುತ್ತಿಲ್ಲ. ಜನ ಬುದ್ಧಿವಂತರಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸಿ.ಪಿ. ಯೋಗೇಶ್ವರ್ ಗೆಲ್ಲುತ್ತಾರೆ. ಸಚಿವ ಜಮೀರ್ ಅವರ ಹೇಳಿಕೆಯಿಂದ ಏನೂ ವ್ಯತ್ಯಾಸ ಆಗಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.