ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ಅವರ ನೇತೃತ್ವದಲ್ಲಿ ಎಚ್‌ಐವಿ ಸೋಂಕು ಹರಡಿಸುವ ಜಾಲವೇ ಸಕ್ರಿಯವಾಗಿದೆ. ಈ ಕುರಿತು ರಾಜ್ಯ ಸರ್ಕಾರ ವಿಶೇಷ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ಕಾಂಗ್ರೆಸ್‌ನ ಡಿ.ಕೆ. ಸುರೇಶ್ ಆಗ್ರಹಿಸಿದರು.
ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು,‘ಇಂತಹ ಚಟುವಟಿಕೆಯಲ್ಲಿ ಯಾರನ್ನೆಲ್ಲ ಬಳಸಿಕೊಳ್ಳಲಾಗಿದೆ. ಈ ಜಾಲದ ಸದಸ್ಯರು ಯಾರು ಎನ್ನುವುದನ್ನು ತನಿಖೆಯ ಮೂಲಕ ಬಹಿರಂಗಗೊಳಿಸಬೇಕು’ ಎಂದರು.
‘ಜೆಡಿಎಸ್ ಹಾಗೂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಒಕ್ಕಲಿಗ, ದಲಿತ ಹಾಗೂ ಮಹಿಳಾ ಸಮುದಾಯವನ್ನು ಶಾಸಕ ಮುನಿರತ್ನ ಅವಹೇಳನ ಮಾಡಿದ್ದಾರೆ. ಮುನಿರತ್ನ ಬೆನ್ನಿಗೆ ನಿಂತಿರುವ ಸಿ.ಟಿ. ರವಿ, ಆರ್. ಅಶೋಕ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಬೇಕು. ಎಚ್‌ಐವಿ ಅಸ್ತ್ರ ಪ್ರಯೋಗಕ್ಕೆ ಅವರೇ ಕುಮ್ಮಕ್ಕು ನೀಡಿರಬಹುದು’ ಎಂದು ದೂರಿದರು.
‘ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣವನ್ನು ಹಳಸಲು’ ಎಂದಿರುವ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದರೆ ಬೇರೆಯವರದ್ದು ತಾಜಾ ಪ್ರಕರಣವೇ? ಅವರ ಅತ್ತೆಯವರೇ ಸತ್ತವರ ಹೆಸರಿನ ಜಮೀನು ಪಡೆದುಕೊಂಡಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.