ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ಕಾರಣಕ್ಕೆ ಬೆಂಗಳೂರು–ಮೈಸೂರು ಮಧ್ಯೆ ನೈಸ್ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳಲಿಲ್ಲ. ಬೆಂಗಳೂರು– ಮೈಸೂರು ಮಧ್ಯೆ ನೈಸ್ (ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್) ರಸ್ತೆಯ ನಿರ್ಮಾಣದ ಅಗತ್ಯವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈಗಿನ ಬೆಂಗಳೂರು– ಮೈಸೂರು ಹೆದ್ದಾರಿಯನ್ನು ಕೆಟ್ಟದಾಗಿ ವಿನ್ಯಾಸಗೊಳಿಸಲಾಗಿದೆ. ವಾಹನದಲ್ಲಿ ಪ್ರಯಾಣಿಸುವವರಿಗೆ ಕನಿಷ್ಠ ಮೂತ್ರ ವಿಸರ್ಜನೆಗೂ ವ್ಯವಸ್ಥೆ ಮಾಡಿಲ್ಲ’ ಎಂದು ಹರಿಹಾಯ್ದರು.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗ ನೈಸ್ ಯೋಜನೆಗೆ ಒಪ್ಪಿಗೆ ನೀಡಲಾಯಿತು. ಬಿಡದಿ ಬಳಿ ಮತ್ತು ದೇವಗಿರಿ ಸಮೀಪ ಸುಮಾರು 400 ಎಕರೆಗಳಷ್ಟು ಜಮೀನು ಇದ್ದ ಕಾರಣ ಅವರು ಬೆಂಗಳೂರು–ಮೈಸೂರು ಹೆದ್ದಾರಿ ಯೋಜನೆಯನ್ನು ವಿರೋಧಿಸಲಾರಂಭಿಸಿದರು. ಅವರು ಅಧಿಕಾರಿಗಳನ್ನು ‘ಬ್ಲ್ಯಾಕ್ ಮೇಲ್’ ಮಾಡಿದ ಕಾರಣ, ಅಧಿಕಾರಿಗಳು ಹೆದರಿದರು. ದೇವೇಗೌಡ ಕುಟುಂಬದ ವಿರೋಧ ಇಲ್ಲದಿದ್ದರೆ, ರಾಮನಗರ, ಚನ್ನಪಟ್ಟಣ, ಕನಕಪುರ, ಮಳವಳ್ಳಿ, ಮದ್ದೂರು, ಮಂಡ್ಯ ಅಭಿವೃದ್ಧಿ ಹೊಂದುತ್ತಿದ್ದವು. ಕೈಗಾರಿಕೆಗಳು ಸ್ಥಾಪನೆ ಆಗುತ್ತಿದ್ದವು ಎಂದು ಹೇಳಿದರು.
‘ಈಗಲೂ ನಾನು ನೈಸ್ ಯೋಜನೆ ಪರವಾಗಿದ್ದೇನೆ’ ಎಂದು ಹೇಳಿದ ಶಿವಕುಮಾರ್, ‘ಆರು ಪಥಗಳ ಹೆದ್ದಾರಿಯಿಂದ ಒಕ್ಕಲಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಜಿಲ್ಲೆಗಳ ಅಭಿವೃದ್ಧಿಗೆ ಸಹಾಯಕವಾಗಲಿದೆ. ನಮ್ಮ ಸರ್ಕಾರ ಇದನ್ನು ಕೈಗೆತ್ತಿಕೊಳ್ಳುತ್ತದೆಯೇ ಗೊತ್ತಿಲ್ಲ. ಮತ್ತೊಂದು ರಸ್ತೆಯ ಅಗತ್ಯವಿದೆ ಎಂಬುದು ನನ್ನ ಅನಿಸಿಕೆ. ನೈಸ್ ಹಲವು ಉಪನಗರಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿತ್ತು. ಇದರಿಂದ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತಿತ್ತು. ಬಿಡದಿಯಲ್ಲಿ ಕೆಲಸ ಮಾಡುವವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹಲವು ಉಪನಗರಗಳನ್ನು ಸೃಷ್ಟಿಸುವ ಆಗತ್ಯವಿದೆ’ ಎಂದು ಹೇಳಿದರು.
ಪೆರಿಫೆರಲ್ ರಿಂಗ್ ರೋಡ್ ಯೋಜನೆ ನಿರ್ಮಾಣಕ್ಕೆ ನೈಸ್ ಪ್ರಸ್ತಾವ ಸಲ್ಲಿಸಿರುವ ಬಗ್ಗೆ ಪ್ರಶ್ನಿಸಿದಾಗ, ‘ಆ ಪ್ರಸ್ತಾವ ಬಂದಿರುವುದು ನಿಜ. ಆದರೆ, ನಮ್ಮ ಅಧಿಕಾರಿಗಳು ಹೆದರಿದ್ದಾರೆ. ನಕಾರಾತ್ಮಕ ಧೋರಣೆ ಇದ್ದರೆ, ಯಾವುದೇ ಯೋಜನೆ ಮುನ್ನಡೆಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.
‘ನೈಸ್ ಬಳಿ ಅಧಿಕ ಜಮೀನು ಇದ್ದರೆ ಅದು ನಮ್ಮ ಅಧಿಕಾರಿಗಳ ತಪ್ಪಿನ ಕಾರಣಕ್ಕಾಗಿ ಆಗಿದೆ. ನಾವು ಒಪ್ಪಂದವನ್ನು ಗೌರವಿಸಬೇಕು. ಇಲ್ಲವಾದರೆ ಅವರು ನ್ಯಾಯಾಲಯಕ್ಕೆ ಹೋಗುತ್ತಾರೆ’ ಎಂದೂ ಅವರು ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.