ADVERTISEMENT

ಡಿಕೆಶಿ ಭೇಟಿಯಾದ ಬಿಕೆಎಚ್‌, ಮುನಿಯಪ್ಪ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 16:19 IST
Last Updated 28 ಸೆಪ್ಟೆಂಬರ್ 2023, 16:19 IST
<div class="paragraphs"><p>ಡಿಕೆಶಿ</p></div>

ಡಿಕೆಶಿ

   

ಬೆಂಗಳೂರು: ವಿಧಾನಪರಿಷತ್ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಮತ್ತು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇತ್ತೀಚೆಗೆ ಪರೋಕ್ಷ ವಾಗ್ದಾಳಿ ನಡೆಸಿ ಪಕ್ಷದ ವಲಯದಲ್ಲಿ ಬಿ.ಕೆ. ಹರಿಪ್ರಸಾದ್‌ ಚರ್ಚೆಗೆ ಕಾರಣರಾಗಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕಮಾಂಡ್‌, ಹರಿಪ್ರಸಾದ್‌ಗೆ ನೋಟಿಸ್ ನೀಡಿತ್ತು. ಅವರು ಉತ್ತರವನ್ನೂ ನೀಡಿದ್ದರು.

ADVERTISEMENT

ಹರಿಪ್ರಸಾದ್ ಮತ್ತು ಮುನಿಯಪ್ಪ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಲೋಕಸಭೆ ಚುನಾವಣೆಯ ವಿಚಾರವಾಗಿ ಚರ್ಚಿಸಲು ಅವರು ಬಂದಿದ್ದರು. ಇದೇ ವೇಳೆ ನಿಗಮ- ಮಂಡಳಿಗಳಿಗೆ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡುವಂತೆ ಮುನಿಯಪ್ಪ ಸಲಹೆ ನೀಡಿದರು’ ಎಂದರು.

ಮುನಿಯಪ್ಪ ಮಾತನಾಡಿ, ‘ಹರಿಪ್ರಸಾದ್ ನನಗಿಂತ ಮೊದಲೇ ಬಂದು ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಹರಿಪ್ರಸಾದ್‌ ‌ಅವರ ಸ್ಥಾನಮಾನ ವಿಚಾರದಲ್ಲಿ ಹೈಕಮಾಂಡ್ ನಿರ್ಧರಿಸಲಿದೆ. ನಿಗಮ ಮತ್ತು ಮಂಡಳಿಗಳಿಗೆ ಆದಷ್ಟು ಬೇಗ ನೇಮಕ ಮಾಡಬೇಕು. ಅಲ್ಲದೆ, ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು‌ ಮನವಿ ಮಾಡಿದ್ದೇವೆ. ಈ ಬಗ್ಗೆ ಪರಿಶೀಲಿಸುವುದಾಗಿ ‌ಶಿವಕುಮಾರ್ ಭರವಸೆ ನೀಡಿದ್ದಾರೆ’ ಎಂದರು.

ಪರಿಷತ್‌ ಚುನಾವಣೆಗೆ ತಯಾರಿ: ‘ವಿಧಾನ ಪರಿಷತ್ ಚುನಾವಣೆ ಬಗ್ಗೆ ಈಶ್ವರ ಖಂಡ್ರೆ, ರಾಮಲಿಂಗಾ ರೆಡ್ಡಿ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲ ಭಾಗದ ನಾಯಕರ ಜತೆ ಚರ್ಚೆ ನಡೆಸಲಾಗುತ್ತಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಶೀಘ್ರ ಆಯ್ಕೆ ಮಾಡಲು ಸಲಹೆ ಪಡೆಯಲಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ‌

ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಮಾಜಿ ಶಾಸಕರು ಭೇಟಿಯಾಗಿದ್ದ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್‌, ‘ಬಿಜೆಪಿ– ಜೆಡಿಎಸ್‌ ಮೈತ್ರಿ ವಿಚಾರವಾಗಿ ಬಹಳಷ್ಟು ಜನರಿಗೆ ಸಿಟ್ಟಿದೆ. ಮುಖ್ಯಮಂತ್ರಿ ಮತ್ತು ನಾನು ಈ ವಿಚಾರವಾಗಿ ಶುಕ್ರವಾರ ಮಾತನಾಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.