ADVERTISEMENT

ಸಂಪನ್ಮೂಲ ಸಂಗ್ರಹಕ್ಕೆ ಸಲಹೆ ಕೇಳಿದರೆ ತಪ್ಪೇನು– ಡಿಕೆಶಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 15:36 IST
Last Updated 22 ಜೂನ್ 2024, 15:36 IST
<div class="paragraphs"><p> ಡಿಕೆಶಿ</p></div>

ಡಿಕೆಶಿ

   

ಬೆಂಗಳೂರು: ‘ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯ ಸರ್ಕಾರಗಳಂತೆ ನಾವು ಕೂಡ ಸಂಪನ್ಮೂಲ ಕ್ರೋಡೀಕರಣ ಮೂಲಗಳ ಬಗ್ಗೆ ಖಾಸಗಿ ಕಂಪನಿಗಳ ಸಲಹೆ ಕೇಳಿದ್ದೇವೆ. ಅದರಲ್ಲಿ ತಪ್ಪೇನಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಸಂಪನ್ಮೂಲ ಕ್ರೋಡೀಕರಣದತ್ತ ಹೆಚ್ಚು ಗಮನಹರಿಸುತ್ತಿದ್ದು, ನಾವು ಕೂಡ ಅನೇಕರಿಂದ ಸಲಹೆ ಕೇಳಿದ್ದೇವೆ. ನಾವು ಬಿಜೆಪಿಯವರಂತೆ ಹಣಕಾಸಿಗಾಗಿ ಸರ್ಕಾರಿ ಆಸ್ತಿಗಳನ್ನು ಅಡ ಇಡುತ್ತಿಲ್ಲ. ಸರ್ಕಾರದ ಹಾಗೂ ರಾಜ್ಯದ ಹಿತ ಗಮನದಲ್ಲಿಟ್ಟುಕೊಂಡು ಏನು ಕ್ರಮ ಕೈಗೊಳ್ಳಬೇಕೊ ಅದನ್ನು ಮಾಡುತ್ತೇವೆ’ ಎಂದರು.

ADVERTISEMENT

ಗ್ಯಾರಂಟಿಯಿಂದ ಬೆಲೆ ಏರಿಕೆ ಮಾಡಿಲ್ಲ: ‘ಬೆಲೆ ಏರಿಕೆಗೆ ಗ್ಯಾರಂಟಿ ಯೋಜನೆಗಳೇ ಕಾರಣ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಟೀಕೆಯ ಬಗ್ಗೆ ಕೇಳಿದಾಗ, ‘ಯಾರು ಏನಾದರೂ ಆರೋಪ ಮಾಡಲಿ. ಗ್ಯಾರಂಟಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಕಾಲಕಾಲಕ್ಕೆ ಆಗಬೇಕಿರುವ ಬೆಲೆ ಏರಿಕೆ ನಾವು ಮಾಡಿದ್ದೇವೆ’ ಎಂದರು.

‘ನಾವು ಬಹಳ ಕಡಿಮೆ ಪ್ರಮಾಣದಲ್ಲಿ ನೆರೆ ರಾಜ್ಯಗಳ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ತೈಲ ಬೆಲೆ ಏರಿಕೆ ಮಾಡಿದ್ದೇವೆ. ನಮ್ಮ ಗ್ಯಾರಂಟಿಗಳು ಮುಂದುವರಿಯಲಿದೆ. ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೊ ಆ ಕೆಲಸ ಮಾಡುತ್ತೇವೆ’ ಎಂದರು.

ಸೂರಜ್ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಕೇಳಿದಾಗ, ‘ಅವರ ಕುಟುಂಬದಲ್ಲಿ ದೊಡ್ಡವರಿದ್ದಾರೆ. ಅವರು ಉತ್ತರ ನೀಡುತ್ತಾರೆ. ನಮಗೆ ಆ ವಿಚಾರ ಬೇಡ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.