ADVERTISEMENT

ಸಂಡೂರಿನಲ್ಲಿ ಅದಿರು ತೆಗೆಯಲು ಸಹಿ ಹಾಕಿದ್ದಕ್ಕೆ ಅಪಾರ್ಥ ಮಾಡಿಕೊಳ್ಳಬೇಡಿ: HDK

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 17:15 IST
Last Updated 15 ಜೂನ್ 2024, 17:15 IST
   

ಮಂಡ್ಯ: 'ಬಳ್ಳಾರಿ ಜಿಲ್ಲೆಯ ದೇವದಾರಿ ಪ್ರದೇಶದಲ್ಲಿ ಕಬ್ಬಿಣದ ಅದಿರು ತೆಗೆಯಲು ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ (ಕೆಐಒಸಿಎಲ್) ಅನುಮತಿ ನೀಡಿದರೆ, ಒಂದೇ ವರ್ಷದಲ್ಲಿ 99 ಸಾವಿರ ಮರಗಳ ಹನನ ಆಗುವುದಿಲ್ಲ. 50 ವರ್ಷ ನಿರಂತರವಾಗಿ ಗಣಿಗಾರಿಕೆ ನಡೆಸಿದರೆ ಮಾತ್ರ. ಪರ್ಯಾವಾಗಿ ಮರ ಬೆಳೆಸಲು ಆ ಕಂಪನಿ ಸರ್ಕಾರಕ್ಕೆ ₹123 ಕೋಟಿ ಕೊಟ್ಟಿದೆ' ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯದಲ್ಲಿ ಶನಿವಾರ ನೂತನ ಸಂಸದರ ಕಚೇರಿ ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾನು ಅದಿರು ತೆಗೆಯಲು ಸಹಿ ಹಾಕಿದ್ದಕ್ಕೆ ರಾಜ್ಯದಲ್ಲಿ ಚರ್ಚೆಯಾಗಿದೆ. ಈ ವಿಷಯದಲ್ಲಿ ಯಾರೂ ನನ್ನ ಬಗ್ಗೆ ಅಪಾರ್ಥ ಮಾಡಿಕೊಳ್ಳಬೇಡಿ ಎಂದು ಸಮಜಾಯಿಷಿ ನೀಡಿದರು.

ADVERTISEMENT

ಕುದುರೆಮುಖ ಭಾಗದಲ್ಲಿ ಗಣಿಗಾರಿಕೆ ನಿಂತು ಹೋದ ನಂತರ ಪರ್ಯಾಯವಾಗಿ ಬೇರೊಂದು ಜಾಗದಲ್ಲಿ ಗಣಿಗಾರಿಕೆ ನಡೆಸಲು ಚರ್ಚೆ ಆರಂಭವಾಯಿತು. 2016ರಲ್ಲಿ ಕುದುರೆಮುಖ ಯುನಿಟ್ ಗೆ ರಾಜ್ಯ ಸರ್ಕಾರ 440 ಹೆಕ್ಟೇರ್ ಗಣಿ ಚಟುವಟಿಕೆ ನಡೆಸಲು ಒಪ್ಪಿಗೆ ನೀಡಿದೆ. ಕೇಂದ್ರ ಸರ್ಕಾರ ಮತ್ತು ಕೇಂದ್ರ ಪರಿಸರ ಇಲಾಖೆ ಕೂಡ ಅನುಮತಿ ನೀಡಿದೆ ಎಂದರು.

ಕುದುರೆಮುಖ ಯುನಿಟ್ ಸಂಸ್ಥೆ ಈಗಾಗಲೇ ₹500 ಕೋಟಿ ಕಟ್ಟಿದ್ದಾರೆ. ಒಂದು ವರ್ಷ ಅದಿರು ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಎಷ್ಟು ಅದಿರು ಸಿಗುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.

ಒಂದೇ ವರ್ಷದಲ್ಲಿ ಎಲ್ಲ ಮರಗಳನ್ನೂ ಕಡಿಯುವುದಿಲ್ಲ. ಕುದುರೆಮುಖ ಸಂಸ್ಥೆ ಉಳಿಸಿ ಅಂತ ಮನವಿ ಕೊಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಹೇಳಿದರು.

ಪೆಟ್ರೋಲ್ ಹೆಚ್ಚಳದ ಬಗ್ಗೆ ಮಾತನಾಡಿ, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದರ ಹೆಚ್ಚಿಸಿದ್ದಾರೆ. ಇದು ಜನಸಾಮಾನ್ಯರ ವಿರೋಧಿ ಸರ್ಕಾರ ಎಂದು ಆರೋಪಿಸಿದರು.

ನನಗೆ ಕೃಷಿ ಖಾತೆ ಸಿಗುತ್ತದೆ ಎಂಬುದು ಜಿಲ್ಲೆಯ ಜನರ ಅಪೇಕ್ಷೆಯಾಗಿತ್ತು. ಆದರೆ, ಪ್ರಧಾನಿ ಮೋದಿ ಅವರು ಬೃಹತ್ ಕೈಗಾರಿಕೆ ಮತ್ತು ಉಕ್ಕು ಎಂಬ ಎರಡು ದೊಡ್ಡ ಇಲಾಖೆಗಳನ್ನು ಕೊಟ್ಟಿದ್ದಾರೆ. ಇದನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಕೃಷಿ ಸಚಿವನಾಗದಿದ್ದರೂ ರೈತರ ಸಮಸ್ಯೆ ನಿವಾರಣೆಗೆ ಸಂಸತ್‌ನಲ್ಲಿ ಧ್ವನಿ ಎತ್ತುವ ಅವಕಾಶವಿದೆ. ಸಂಬಂಧಿಸಿದ ಸಚಿವರ ಜೊತೆ ಮಾತನಾಡಿ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತೇನೆ ಎಂದರು.

ರಾಜ್ಯ ಮತ್ತು ಮಂಡ್ಯ ಜಿಲ್ಲೆಗೆ ಕೈಗಾರಿಕೆಗಳನ್ನು ತಂದು ಉದ್ಯೋಗ ಸೃಷ್ಟಿಸುವ ಕೆಲಸ ಮಾಡುತ್ತೇನೆ. ನಿರುದ್ಯೋಗ ನಿವಾರಿಸಲು ಶ್ರಮಿಸುತ್ತೇನೆ ಎಂದರು.

ಚೆಲುವರಾಯಸ್ವಾಮಿಗೆ ತಿರುಗೇಟು

ಕೇಂದ್ರ ಸಚಿವನಾದ ನನಗೆ ಅಸಹಕಾರ ತೋರಲು ಇವರನ್ನು ಜನರು ಮತ ಹಾಕಿ ಗೆಲ್ಲಿಸಿದ್ದಾರಾ? ಅದಕ್ಕಾಗಿ ಸರ್ಕಾರ ಇವರಿಗೆ ಕೃಷಿ ಖಾತೆ ಕೊಟ್ಟಿದೆಯಾ? ಯಾವ ರೀತಿ ಕೆಲಸ ಮಾಡಬೇಕು ಎಂಬುದನ್ನು ಬೇರೆಯವರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದರು.

ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ಬಗ್ಗೆ ಕಾನೂನಾತ್ಮಕವಾಗಿ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ತಂದೆ ದೇವೇಗೌಡರ ಬಳಿ ಚರ್ಚಸಿದ್ದೇನೆ. ರಾಜ್ಯದ ನೀರು ಬಳಕೆ ಮಾಡಿಕೊಳ್ಳುವ ಬಗ್ಗೆ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.