ADVERTISEMENT

ಮದುವೆಯಾಗದ್ದಕ್ಕೆ ಮರ್ಮಾಂಗವನ್ನೇ ಕತ್ತರಿಸಿದ್ದಳು !

ಕೊಲೆಗೆ ಯತ್ನಿಸಿದ್ದ ವೈದ್ಯೆಗೆ 10 ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2019, 21:12 IST
Last Updated 14 ಡಿಸೆಂಬರ್ 2019, 21:12 IST
   

ಬೆಂಗಳೂರು: ತನ್ನನ್ನು ಬಿಟ್ಟು ಬೇರೆ ಹುಡುಗಿ ಜೊತೆ ಮದುವೆಯಾದ ಎಂಬ ಕಾರಣಕ್ಕೆ ಸ್ನೇಹಿತನ ಮರ್ಮಾಂಗವನ್ನೇ ಕತ್ತರಿಸಿ ಕೊಲೆಗೆ ಯತ್ನಿಸಿದ್ದ ವೈದ್ಯೆ ಡಾ. ಸೈಯಿದಾ ಅಮಿನಾ ನಹೀಮ್ (32) ಎಂಬಾಕೆಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

ಕೋರಮಂಗಲ ಠಾಣೆ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ 61ನೇ ಸಿಸಿಎಚ್‌ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಅವರು ಶುಕ್ರವಾರ ಈ ಆದೇಶ ಹೊರಡಿಸಿದ್ದಾರೆ. ಸಂತ್ರಸ್ತನ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ಶೈಲಜಾ ಕೃಷ್ಣ ನಾಯಕ ವಾದಿಸಿದ್ದರು.

‘ಅಪರಾಧಿ ಸೈಯಿದಾ ಅಮಿನಾ ನಹೀಮ್ ಕೋರಮಂಗಲ 8ನೇ ಹಂತದ ‘ಬಿ’ ಮೈನ್‌ನಲ್ಲಿ ಮಿಸ್ವಾಕ್ ಹೆಸರಿನ ಡೆಂಟಲ್ ಕ್ಲಿನಿಕ್‌ ನಡೆಸುತ್ತಿದ್ದರು. ಅದೇ ಕ್ಲಿನಿಕ್‌ನಲ್ಲೇ ಸ್ನೇಹಿತಡಾ. ಮೀರ್ ಅರ್ಷದ್ ಅಲಿ ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಕೆಯನ್ನು ಬಂಧಿಸಿದ್ದ ಕೋರಮಂಗಲ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಶೈಲಜಾ ತಿಳಿಸಿದರು.

ADVERTISEMENT

ಪ್ರಜ್ಞೆ ತಪ್ಪಿಸಿ ಕೃತ್ಯ: ಅಪರಾಧಿ ಸೈಯಿದಾ ಅಮಿನಾ ನಹೀಮ್ ಹಾಗೂ ಮೈಸೂರಿನ ನಿವಾಸಿಯಾದ ವೈದ್ಯ ಡಾ. ಮೀರ್ ಅರ್ಷದ್ ಅಲಿ ನಡುವೆ ಸ್ನೇಹ ಏರ್ಪಟ್ಟಿತ್ತು. ಇಬ್ಬರೂ ಪ್ರೀತಿಸಲಾರಂಭಿಸಿದ್ದರು. ಮದುವೆಯಾಗಲೂ ತೀರ್ಮಾನಿಸಿದ್ದರು. ಅದಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದರು.

ತಮಗೆ ಕ್ಯಾನ್ಸರ್‌ ಇರುವುದಾಗಿ ಹೇಳಿದ್ದಮೀರ್ ಅರ್ಷದ್ ಅಮಿನಾ ಅವರನ್ನು ಮದುವೆ ಆಗಲು ನಿರಾಕರಿಸಿದ್ದರು. ಅದಾಗಿ ಕೆಲ ತಿಂಗಳಿನಲ್ಲೇ ಬೇರೊಬ್ಬ ಯುವತಿಯನ್ನು ಮದುವೆ ಆಗಿದ್ದರು. ಮಾನಸಿಕವಾಗಿ ನೊಂದು ದ್ವೇಷ ಸಾಧಿಸುತ್ತಿದ್ದ ಅಮಿನಾ, ಮೀರ್ ಅರ್ಷದ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.

2008ರ ನವೆಂಬರ್ 29ರಂದುಮೀರ್ ಅರ್ಷದ್ ಹಾಗೂ ಅವರ ಪತ್ನಿಯನ್ನು ಕ್ಲಿನಿಕ್‌ಗೆ ಕರೆಸಿಕೊಂಡಿದ್ದ ಅಪರಾಧಿ ಅವರೊಂದಿಗೆ ಆತ್ಮಿಯವಾಗಿ ಮಾತನಾಡಿದ್ದಳು. ಅವರಿಬ್ಬರಿಗೂ ಮತ್ತು ಬರುವ ಔಷಧಿ ಬೆರೆಸಿದ್ದ ತಂಪು ಪಾನೀಯ ಕುಡಿಸಿ ಪ್ರಜ್ಞೆ ತಪ್ಪಿಸಿದ್ದಳು. ಅದಾದ ನಂತರವೇ ಮೀರ್‌ ಅರ್ಷದ್‌ ಅವರ ಮರ್ಮಾಂಗವನ್ನು ಹರಿತವಾದ ಬ್ಲೇಡ್‌ನಿಂದ ಕತ್ತರಿಸಿ ಗಾಯವನ್ನುಂಟು ಮಾಡಿದ್ದಳು. ರಕ್ತಸ್ರಾವದಿಂದ ಬಳಲುತ್ತಿದ್ದ ಮೀರ್‌ ಅರ್ಷದ್‌ ಅವರನ್ನು ಆಕೆಯೇ ಆಸ್ಪತ್ರೆಗೆ ಸೇರಿಸಿ ಪರಾರಿಯಾಗಿದ್ದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.