ADVERTISEMENT

ತಪಾಸಣೆ ನೆಪ, ಎದೆಗೆ ಮುತ್ತಿಕ್ಕಿದ ವೈದ್ಯ: FIR ರದ್ದುಗೊಳಿಸಲು ಹೈಕೋರ್ಟ್‌ ನಕಾರ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:16 IST
Last Updated 14 ಜೂನ್ 2024, 16:16 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಎದೆ ನೋವು ಎಂದು ಚಿಕಿತ್ಸೆ ಪಡೆಯಲು ಬಂದ ಮಹಿಳೆಯೊಬ್ಬರ ತಪಾಸಣೆಯ ವೇಳೆ ಎದೆಯ ಭಾಗದಲ್ಲಿ ಅನುಚಿತವಾಗಿ ಸ್ಪರ್ಶಿಸಿ ಮುತ್ತಿಕ್ಕಿ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂಬ ಆರೋಪ ಹೊತ್ತ ನಗರದ ಡಾ.ಎಸ್‌.ಚೇತನ್‌ಕುಮಾರ್ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಈ ಸಂಬಂಧ ಡಾ.ಎಸ್.ಚೇತನ್‌ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ವೈದ್ಯರು ಮತ್ತು ರೋಗಿಗಳ ಮಧ್ಯದಲ್ಲಿನ ನಡವಳಿಕೆಯ ಬಗ್ಗೆ ಅದರಲ್ಲೂ ಮಹಿಳಾ ರೋಗಿಗಳು ಬಂದಾಗ ಪುರುಷ ವೈದ್ಯರ ವರ್ತನೆ ಶ್ರೇಷ್ಠ ಭಾವನೆಗಳಿಂದ ಕೂಡಿರಬೇಕು’ ಎಂದು ಕಿವಿಮಾತು ಹೇಳಿದೆ.

‘ವೈದ್ಯರಾದವರಿಗೆ ರೋಗಿಗಳ ದೇಹ ಪರಿಶೀಲಿಸಲು ಇರುವ ಅಧಿಕಾರ ಅತ್ಯಂತ ಶ್ರೇಷ್ಠವಾದ ಕಾರ್ಯ ಎಂದು ಭಾವಿಸಬೇಕು. ವೈದ್ಯರು ರೋಗಿಗಳ ದೌರ್ಬಲ್ಯವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು. ರೋಗಿಯು ವೈದ್ಯರ ಮೇಲಿಟ್ಟಿರುವ ನಂಬಿಕೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು’ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

‘ವೈದ್ಯರು ರೋಗಿಗಳನ್ನು ಪರಿಶೀಲಿಸುವ ವೇಳೆಯ ಇತಿಮಿತಿಗಳೇನು ಎಂಬ ಬಗ್ಗೆ ಈಗಾಗಲೇ ಭಾರತೀಯ ವೈದ್ಯಕೀಯ ಮಂಡಳಿಯ ಸ್ಪಷ್ಟ ಮಾರ್ಗಸೂಚಿಗಳಿವೆ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರ ವೈದ್ಯರು ಮೇಲ್ನೋಟಕ್ಕೆ ಈ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಪ್ರಕರಣದ ಕುರಿತು ತನಿಖೆ ನಡೆಯಬೇಕಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಅರ್ಜಿ ವಜಾಗೊಳಿಸಿದೆ.

ಪ್ರಕರಣವೇನು?: ಡಾ.ಚೇತನ್‌ಕುಮಾರ್ ಕೆಲಸ ನಿರ್ವಹಿಸುತ್ತಿದ್ದ ಆಸ್ಪತ್ರೆಗೆ ಮಹಿಳೆಯೊಬ್ಬರು ಎದೆ ನೋವಿನ ಸಮಸ್ಯೆ ಹೊತ್ತು ಪರೀಕ್ಷೆ ಮಾಡಿಸಿಕೊಳ್ಳಲು ಬಂದಿದ್ದರು. ತಪಾಸಣೆ ನಡೆಸಿದ್ದ ಚೇತನಕುಮಾರ್, ಇಸಿಜಿ ಮತ್ತು ಎಕ್ಸ್‌-ರೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದರು. ಈ ವೇಳೆ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ವಾಟ್ಸ್‌ ಆ್ಯಪ್ ಮೂಲಕ ಇಸಿಜಿ ಮತ್ತು ಎಕ್ಸ್‌–ರೇ ಪರೀಕ್ಷೆಯ ವರದಿ ರವಾನಿಸಿದ್ದರು. ಹೆಚ್ಚಿನ ತಪಾಸಣೆಗೆ ಕ್ಲಿನಿಕ್‌ಗೆ ಖುದ್ದಾಗಿ ಬಂದು ಭೇಟಿಯಾಗುವಂತೆ ಸೂಚಿಸಿದ್ದರು.

‘ಮಹಿಳೆಯು 2024ರ ಮಾರ್ಚ್ 21ರಂದು ಕ್ಲಿನಿಕ್‌ಗೆ ಒಬ್ಬರೇ ಹೋಗಿದ್ದರು. ಅವರನ್ನು ಕೊಠಡಿಗೆ ಕರೆದೊಯ್ದು ಹಾಸಿಗೆ ಮೇಲೆ ಮಲಗಲು ಸೂಚಿಸಿದ್ದರು. ತಪಾಸಣೆ ಸಮಯದಲ್ಲಿ ಅವರ ಎದೆಯ ಭಾಗದ ಮೇಲೆ ಸ್ಟೆತಾಸ್ಕೋಪ್‌ ಇಟ್ಟು ಪರಿಶೀಲಿಸಿದ್ದರು. ನಂತರ ಮೇಲುಡುಪನ್ನು ಸರಿಸಿ ಎದೆಯ ಭಾಗವನ್ನು ಅನುಚಿತವಾಗಿ ಸ್ಪರ್ಶಿಸಿದ್ದರು. ಎಡಭಾಗದ ಸ್ತನಕ್ಕೆ ಮುತ್ತಿಕ್ಕಿದ್ದರು. ಕೂಡಲೇ, ಮಹಿಳೆ ಕ್ಲಿನಿಕ್‌ನಿಂದ ಹೊರಬಂದು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ವೈದ್ಯರ ವಿರುದ್ಧ ಪುಟ್ಟೇನಹಳ್ಳಿ ಠಾಣಾ ಪೊಲೀಸರಿಗೆ ದೂರು ನೀಡಲಾಗಿತ್ತು. ಇದನ್ನು ಆಧರಿಸಿ ಚೇತನ್‌ಕುಮಾರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪದಡಿ ಎಫ್ಐಆರ್‌ ದಾಖಲಿಸಲಾಗಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.