ನವದೆಹಲಿ: ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರನ್ನು ಬುಧವಾರ ಇಲ್ಲಿ ಭೇಟಿ ಮಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದರು. ‘ಪ್ರಸ್ತುತ ವೈದ್ಯರ ವೇತನ ಆಕರ್ಷಕವಾಗಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ವೇತನ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು’ ಎಂದು ವಿನಂತಿಸಿದರು.
‘ಕೋವಿಡ್–19 ಸಾಂಕ್ರಾಮಿಕ ಹರಡಿದ ಸಂದರ್ಭದಲ್ಲಿ ಪಿಎಂ–ಕೇರ್ಸ್ ಮೂಲಕ ವೆಂಟಿಲೇಟರ್‌ಗಳು ಹಾಗೂ ಆಮ್ಲಜನಕ ಘಟಕಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿತ್ತು. ಪಿಎಂ–ಕೇರ್ಸ್ ಮೂಲಕವೇ ಇವುಗಳ ನಿರ್ವಹಣೆಗೆ ಅನುದಾನ ಒದಗಿಸಬೇಕು’ ಎಂದು ಅವರು ಕೋರಿದರು.
‘ರಾಜ್ಯದಲ್ಲಿ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ಪ್ರಯೋಗಾಲಯ ಸ್ಥಾಪನೆ ಮಾಡಬೇಕು’ ಎಂದು ಅವರು ಮನವಿ ಮಾಡಿದರು.
15ನೇ ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ 2024–26ರ ಅವಧಿಗೆ ರಾಜ್ಯಕ್ಕೆ ₹559 ಕೋಟಿ ಮಂಜೂರು ಮಾಡಬೇಕು. ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ₹277 ಕೋಟಿ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.