ಬೆಂಗಳೂರು:ವೇತನ ಪರಿಷ್ಕರಣೆಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ಬುಧವಾರವೂ ಮುಷ್ಕರ ನಡೆಸಿದರು.
ಸರ್ಕಾರಿ ಸಭೆಗಳಿಗೆ ಗೈರಾದ ವೈದ್ಯರು, ಎರಡನೇ ದಿನವು ಕೋವಿಡ್ ಹೊರತುಪಡಿಸಿ ಉಳಿದ ಆರೋಗ್ಯ ಕಾರ್ಯಕ್ರಮಗಳಿಗೆ ಸಂಬಂಧಿಸಿದ ದೈನಂದಿನ ವರದಿಗಳನ್ನು ಸಲ್ಲಿಸಲಿಲ್ಲ. ಸರ್ಕಾರ ಶುಕ್ರವಾರ (ಸೆ.18) ಮತ್ತೆ ಸಂಧಾನ ಸಭೆ ಕರೆದಿದ್ದು, ಅಲ್ಲಿಯವರೆಗೂಇದೇ ರೀತಿ ಮುಷ್ಕರ ಮುಂದುವರಿಸುವುದಾಗಿ ವೈದ್ಯರ ಸಂಘದ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಪೂರ್ವ ನಿರ್ಧಾರದಂತೆ ಯಾವುದೇ ಸರ್ಕಾರಿ ಸಭೆಗಳಿಗೆ ಹಾಜರಾಗಲಿಲ್ಲ. ಮೂವರು ಸಚಿವರು ಮಂಗಳವಾರ ನಡೆಸಿದ ಸಭೆಯಲ್ಲಿ ಸಕಾರಾತ್ಮಕ ಭರವಸೆ ದೊರೆತಿದೆ. ಹೀಗಾಗಿ ಕೋವಿಡ್ ಸೇರಿದಂತೆ ಕೆಲ ಚಿಕಿತ್ಸೆಗಳಿಗೆ ಸಂಬಂಧಿಸಿದ ವರದಿಗಳನ್ನು ಮಾತ್ರ ನೀಡಲಾಗಿದೆ. ಸಂಘದ ಪದಾಧಿಕಾರಿಗಳ ಜತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರ ಶುಕ್ರವಾರ ಸಭೆ ಕರೆದಿದೆ. ಅಲ್ಲಿ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಲ್ಲಿ ಮುಷ್ಕರ ಕೈಬಿಡಲಾಗುತ್ತದೆ’ ಎಂದುರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷಡಾ.ಜಿ.ಎ.ಶ್ರೀನಿವಾಸ್ ತಿಳಿಸಿದರು.
‘ಕೋವಿಡ್‌ಗೆ ಸಂಬಂಧಿಸಿದ ವರದಿಗಳನ್ನು ವೈದ್ಯಾಧಿಕಾರಿಗಳು ನೀಡಿದ್ದಾರೆ. ಹಾಗಾಗಿ ಯಾವುದೇ ಸಮಸ್ಯೆಯಾಗಲಿಲ್ಲ. ಅವರೊಂದಿಗೆ ಸಭೆ ನಡೆಸಿ, ಮುಷ್ಕರ ಕೈಬಿಡುವಂತೆ ಮನವೊಲಿಸಲಾಗುವುದು’ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ. ಓಂಪ್ರಕಾಶ್ ಪಾಟೀಲ್ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.