ADVERTISEMENT

ಅಜ್ಜಿಯ ಶವ ತಿಂದ ನಾಯಿಗಳು: ಅನಾಥ ವೃದ್ಧರನ್ನು ವೃದ್ದಾಶ್ರಮಕ್ಕೆ ಸೇರಿಸಿ –ಡಿ.ಸಿ

ದೇವಲ ಗಾಣಗಾಪುರಕ್ಕೆ ಸಿಇಒ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2022, 10:10 IST
Last Updated 18 ಅಕ್ಟೋಬರ್ 2022, 10:10 IST
ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ ಅವರಿಗೆ ದೇವಲ ಗಾಣಗಾಪುರ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಮಾಹಿತಿ ನೀಡಿದರು
ಜಿ.ಪಂ. ಸಿಇಒ ಡಾ. ಗಿರೀಶ್ ಬದೋಲೆ ಅವರಿಗೆ ದೇವಲ ಗಾಣಗಾಪುರ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಮಾಹಿತಿ ನೀಡಿದರು   

ಕಲಬುರಗಿ: ವೃದ್ದೆಯ ದೇಹವನ್ನು ಶನಿವಾರ ರಾತ್ರಿ ಬೀದಿ ನಾಯಿಗಳು ಎಳೆದಾಡಿ ತಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಡಿ. ಬದೋಲೆ ಮಂಗಳವಾರ ಮಧ್ಯಾಹ್ನ ಯಾತ್ರಾ ಸ್ಥಳವಾದ ದೇವಲ‌ ಗಾಣಗಾಪುರಕ್ಕೆ ತೆರಳಿ ದತ್ತ ಮಂದಿರದ ಅರ್ಚಕರಿಂದ ಮಾಹಿತಿ ಪಡೆದರು.

ಸುಮಾರು 68 ವರ್ಷದ ವೃದ್ದೆಯನ್ನು ಅವರ ಕುಟುಂಬದವರು ಬಿಟ್ಟು ಹೋಗಿದ್ದರು. ಗಾಣಗಾಪುರದಿಂದ ಸಂಗಮಕ್ಕೆ ಹೋಗುವ ಮಾರ್ಗದ ದ್ಯಾಮವ್ವ ಗುಡಿಯ ಹತ್ತಿರ ವೃದ್ದೆಯನ್ನು ಬಿಟ್ಟು ಹೋದ ಜಾಗದಲ್ಲಿ ಕತ್ತಲೆ ಆವರಿಸಿದ್ದರಿಂದ ಮೃತಪಟ್ಟಿದ್ದು ಗೊತ್ತಾಗಿಲ್ಲ. ಹೀಗಾಗಿ ರಾತ್ರಿ ಬೀದಿ ನಾಯಿಗಳು ಮೃತ ದೇಹ ತಿಂದಿರಬಹುದು ಎಂದು ದೇವಸ್ಥಾನದ ಅರ್ಚಕರು ಮಾಹಿತಿ ನೀಡಿದರು.

ನಂತರ 'ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಸಿಇಒ ಡಾ. ಗಿರೀಶ್ ಬದೋಲೆ, 'ಪ್ರತಿ ಹುಣ್ಣಿಮೆ ಸಂದರ್ಭದಲ್ಲಿ ಇಲ್ಲಿ ವೃದ್ದರನ್ನು ಬಿಟ್ಟು ಹೋಗುವ ರೂಢಿ ಇದೆ. ಅಂಥವರ ವಿರುದ್ಧ ಪ್ರಕರಣ ದಾಖಲಿಸುವಂತೆ ಹಿರಿಯ ನಾಗರಿಕರ ಕಲ್ಯಾಣ ‌ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಗಾಣಗಾಪುರದಲ್ಲಿ ಕತ್ತಲು ಇರುವ ಬೀದಿಗಳಲ್ಲಿ ಒಂದು ವಾರದಲ್ಲಿ ಸೋಲಾರ್ ಬೀದಿ ದೀಪ ಹಾಗೂ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ. ವೃದ್ದರನ್ನು ಸರ್ಕಾರಿ ವೃದ್ಧಾಶ್ರಮದಲ್ಲಿ ದಾಖಲಿಸಬಹುದಾಗಿದೆ. ವೃದ್ಧಾಶ್ರಮದ ಸಹಾಯವಾಣಿಯ ಫಲಕವನ್ನು ಅಲ್ಲಲ್ಲಿ ಅಳವಡಿಸಲಾಗುವುದು. ಬೀದಿನಾಯಿಗಳು ವೃದ್ದೆಯ ದೇಹ ತಿಂದ ಪ್ರಕರಣದ ತನಿಖೆ ನಡೆಯುತ್ತಿದೆ' ಎಂದರು.

ADVERTISEMENT

ಘಟನೆ ಕುರಿತು 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್, 'ವೃದ್ದೆ ಮೃತಪಟ್ಟ ಕೆಲ ಹೊತ್ತಿನ ಬಳಿಕ ನಾಯಿಗಳು ದೇಹದ ಕೆಲಭಾಗ ತಿಂದಿವೆ. ಈ ಕುರಿತು ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖವಾಗಿದೆ. ಗಾಣಗಾಪುರದಲ್ಲಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಸರ್ವೆ ನಡೆಸಲು ನಿರ್ದೇಶನ ‌ನೀಡಿದ್ದೇನೆ. ಯಾರಾದರೂ ಅನಾಥ ವೃದ್ದರಿದ್ದರೆ ಅಂಥವರನ್ನು ವೃದ್ಧಾಶ್ರಮಕ್ಕೆ ಸೇರಿಸಲು ಸೂಚಿಸಿದ್ದೇನೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.