ಬೆಳಗಾವಿ: ‘ಗೋಕಾಕ ಮತ ಕ್ಷೇತ್ರದ ಉಪಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದವರಿಗೆ ಟಿಕೆಟ್ ಕೊಡಬೇಡಿ. ನನಗೇ ಟಿಕೆಟ್ ಕೊಡಿ’ ಎಂದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬೆಂಬಲಿಗ ಎನ್ನಲಾದ ಬಾಲಾಜಿ ಸಾವಳಗಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬುಧವಾರ ಇಲ್ಲಿ ಮನವಿ ಮಾಡಿದ್ದಾರೆ.
‘ಪಕ್ಷದಿಂದ ಈವರೆಗೆ ಯಾರಿಗೂ ಟಿಕೆಟ್ ಘೋಷಿಸಿಲ್ಲ. ಆದರೆ, ಸ್ವಯಂಘೋಷಿತ ಅಭ್ಯರ್ಥಿಯೊಬ್ಬರು ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ’ ಎಂದು ತಿಳಿಸುವ ಮೂಲಕ ಸತೀಶ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
‘ಪಕ್ಷದಿಂದ ಹಿಂದಿನಿಂದಲೂ ಜಾರಕಿಹೊಳಿ ಕುಟುಂಬದವರನ್ನು ಬೆಂಬಲಿಸಲಾಗುತ್ತಿದೆ. ಆದರೆ, ಈ ಬಾರಿ ಹೊಸ ಮುಖಕ್ಕೆ ಅವಕಾಶ ಕೊಡಬೇಕು; ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಒತ್ತಾಯಿಸಿದ್ದಾರೆ’ ಎಂದು ತಿಳಿದುಬಂದಿದೆ.
ಈ ಹಿಂದೆ ಅವರು ಡಿ.ಕೆ. ಶಿವಕುಮಾರ್ ಅವರನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಅಥಣಿ ಕ್ಷೇತ್ರದಿಂದ ಬಸವರಾಜ ಬುಟಾಳಿ ಸೇರಿದಂತೆ ಹಲವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ‘ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಬರುವವರೆಗೂ ಅಭ್ಯರ್ಥಿಗಳನ್ನು ಪ್ರಕಟಿಸುವುದಿಲ್ಲ. ನೀವು ಪಕ್ಷ ಸಂಘಟನೆಯತ್ತ ಗಮನಹರಿಸಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ’ ಎಂದು ಗೊತ್ತಾಗಿದೆ.
‘ಜಿಲ್ಲೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಇಲ್ಲಿನ ಮುಖಂಡರು ತೀರ್ಮಾನಿಸುತ್ತಾರೆ’ ಎಂದು ಸಿದ್ದರಾಮಯ್ಯ ಮಂಗಳವಾರ ಶಾಸಕ ಸತೀಶ ಜಾರಕಿಹೊಳಿ ಕಡೆಗೆ ಕೈ ತೋರಿದ್ದರು. ಸೋದರ ಲಖನ್ ಪರವಾಗಿ ಈಗಾಗಲೇ ಸತೀಶ ಅಲ್ಲಿ ಪ್ರಚಾರ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.