ಬೆಂಗಳೂರು: ‘ಕೋಮುವಾದವೇ ಡಬಲ್ ಎಂಜಿನ್‌ನ ಇಂಧನ. ಹೊಗೆಯ ರೂಪದಲ್ಲಿ ಅದು ವಿಷ ಉಗುಳುತ್ತಿದೆ’ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್ ವಿಧಾನಸಭೆಯಲ್ಲಿ ಬುಧವಾರ ವಾಗ್ದಾಳಿ ನಡೆಸಿದರು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ರಾಜ್ಯಪಾಲರ ಭಾಷಣದ ಕುರಿತು ಮಾತನಾಡುವಾಗಲೂ ಬಿಜೆಪಿಯವರು ಡಬಲ್ ಎಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಆದರೆ, ಜನರು ಸಂಕಷ್ಟದಲ್ಲಿರುವಾಗ ಡಬಲ್ ಎಂಜಿನ್ ಆಫ್ ಆಗಿರುತ್ತದೆ. ಅದು ತಯಾರಾಗಿರುವುದೇ ಭ್ರಷ್ಟಾಚಾರ ಮತ್ತು ಕಣ್ಣೀರಿನಿಂದ’ ಎಂದರು.
‘ರಾಜ್ಯಪಾಲರ ಭಾಷಣ ಬಿಜೆಪಿ ಸರ್ಕಾರದ ಬೀಳ್ಕೊಡುಗೆಯ ಭಾಷಣದಂತೆ ಇದೆ. ಅದನ್ನು ತಮ್ಮ ಸರ್ಕಾರದ ‘ರಿಪೋರ್ಟ್ ಕಾರ್ಡ್’ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಬರೆದ ಮಕ್ಕಳಿಗೆ ವರ್ಷ ಕಳೆದರೂ ಅಂಕಟ್ಟಿ ವಿತರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪಡಿತರ ಚೀಟಿ, ಗರ್ಭಿಣಿಯರಿಗೆ ತಾಯಿ ಕಾರ್ಡ್ ನೀಡಿಲ್ಲ. ಇವರು ‘ರಿಪೋರ್ಟ್ ಕಾರ್ಡ್’ ಕೇಳಿದರೆ ಜನರು ಸೊನ್ನೆ ಅಂಕ ನೀಡುತ್ತಾರೆ’ ಎಂದು ಹೇಳಿದರು.
‘ಬಿಜೆಪಿ ಸರ್ಕಾರದ ಸಾಧನೆ ಮಾತಿಗೆ ಸೀಮಿತವಾಗಿದೆ. ಅಧಿಕಾರದಿಂದ ಕೆಳಗಿಳಿಯುವ ಕಾಲ ಬಂದರೂ ಕರಾವಳಿಯ ಜನರಿಗೆ ಕುಚ್ಚಲಕ್ಕಿ ವಿತರಿಸಲು ಆಗಿಲ್ಲ. ಆಸ್ಪತ್ರೆಗಳಿಗೆ ಆಮ್ಲಜನಕ ಘಟಕ ಒದಗಿಸಿದ್ದಾರೆ. ಆದರೆ, ಅಲ್ಲಿ ತಾಂತ್ರಿಕ ಸಿಬ್ಬಂದಿಯೇ ಇಲ್ಲ’ ಎಂದರು.
ಜೆಡಿಎಸ್‌ನ ವೆಂಕಟರಾವ್ ನಾಡಗೌಡ ಮಾತನಾಡಿ, ‘ಜಲಜೀವನ ಮಿಷನ್ ಯೋಜನೆಯಡಿ ಪೈಪ್‌ಲೈನ್ ನಿರ್ಮಿಸಿದ್ದು, ನೀರಿನ ಸಂಪರ್ಕವೇ ಇಲ್ಲ. ಕೆಲವು ಜಿಲ್ಲೆಗಳಲ್ಲಿ ಜಲಧಾರೆ ಯೋಜನೆ ಜತೆ ಅದನ್ನು ಜೋಡಿಸಲಾಗಿದೆ. ಇದರಿಂದಾಗಿ ಯೋಜನೆಯ ಕಾಮಗಾರಿ ಕುಂಟುತ್ತಾ ಸಾಗಿದೆ’ ಎಂದು ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.