ವಿಜಯಪುರ: ಹಿಂಗಾರು ಹಂಗಾಮಿನಲ್ಲಿ ಸುರಿದ ಅತೀ ಮಳೆ ಹಾಗೂ ತಂಪು ವಾತಾವರಣದಿಂದಾಗಿ ದ್ರಾಕ್ಷಿ ಬೆಳೆಯಲ್ಲಿ ‘ಡೌನಿ‘ (ಬೊಜ್ಜು ತುಪ್ಪಟ) ರೋಗ ಬಾಧೆ ಕಾಣಿಸಿಕೊಂಡಿದ್ದು, ಶೇ 40ರಷ್ಟು ಬೆಳೆ ಹಾನಿಯಾಗಿದೆ.
ಜಿಲ್ಲೆಯ 58,751 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರದ ಪೈಕಿ 13,400 ಹೆಕ್ಟೇರ್ ಪ್ರದೇಶದಲ್ಲಿ 25 ಸಾವಿರ ರೈತರು ದ್ರಾಕ್ಷಿ ಬೆಳೆಯನ್ನುಬೆಳೆದಿದ್ದಾರೆ. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 10ರ ವರೆಗೆ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ದ್ರಾಕ್ಷಿ ಬೆಳೆಯಲ್ಲಿ ‘ಡೌನಿ’ ರೋಗ ಕಾಣಿಸಿಕೊಂಡಿದೆ.
ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿಯನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. 13,400 ಹೆಕ್ಟೇರ್ ಪೈಕಿ ಶೇ 95ರಷ್ಟು, ಅಂದರೆ 12,730 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿಯನ್ನು ಒಣಗಿಸಿ ಮಾರಾಟ ಮಾಡಲಾಗುತ್ತದೆ. ಇದರಿಂದ ವಾರ್ಷಿಕ ₹1,300 ರಿಂದ ₹1,600 ಕೋಟಿ ವಹಿವಾಟು ನಡೆಯುತ್ತದೆ.
ಒಂದು ಹೆಕ್ಟೇರ್‌ನಿಂದ ಸರಾಸರಿ 7 ರಿಂದ 8 ಟನ್ ಒಣದ್ರಾಕ್ಷಿ ದೊರಕುತ್ತದೆ. ಮಾರುಕಟ್ಟೆಯಲ್ಲಿ ಗುಣಮಟ್ಟದ ಒಣ ದ್ರಾಕ್ಷಿ ಕೆ.ಜಿಗೆ ₹160 ರಿಂದ ₹220 ದರ ಸಿಕ್ಕರೆ ರೈತರಿಗೆ ಅಧಿಕ ಆದಾಯ ಕೈಸೇರುತ್ತದೆ. ಆದರೆ, ಈ ಬಾರಿ ‘ಡೌನಿ’ ರೋಗದಿಂದಾಗಿ ದ್ರಾಕ್ಷಿ ಬೆಳೆ ನೆಲ ಕಚ್ಚಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
‘ಡೌನಿ ರೋಗ ನಮ್ಮ ನಿದ್ದೆಗೆಡೆಸಿದೆ. ತೋಟ ಬಿಟ್ಟು ಹೋಗುವಂತಿಲ್ಲ. ಪ್ರತಿ ನಿತ್ಯ ಔಷಧಿ ಸಿಂಪಡಿಸಿದರೂ ರೋಗಬಾಧೆ ನಿಯಂತ್ರಣಕ್ಕೆ ಬಂದಿಲ್ಲ. ದ್ರಾಕ್ಷಿ ಗೊನೆಗಳನ್ನು ಕಿತ್ತು ಹಾಕುತ್ತಿದ್ದೇವೆ. ಗೊನೆ ಕೀಳದಿದ್ದರೆ ಇಡೀ ಬೆಳೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ಎಷ್ಟೋ ರೈತರು ಔಷಧಿ ಸಿಂಪಡಿಸಿ ಕೈಬಿಟ್ಟಿದ್ದಾರೆ. 8 ದಿನಕೊಮ್ಮೆ ನೀರುಣಿಸುತ್ತ, ಬೆಳೆ ಸಂರಕ್ಷಿಸಿಕೊಳ್ಳುತ್ತಿದ್ದಾರೆ’ ಎಂದು ಬಬಲೇಶ್ವರ ತಾಲ್ಲೂಕು ಹೊನಗನಹಳ್ಳಿಯ ಯುವ ರೈತ ರಿಜ್ವಾನ್ ಜಹಾಗಿರದಾರ್ ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡರು.
‘ಸೆಪ್ಟೆಂಬರ್ ಮತ್ತು ಅಕ್ಟೋಬರ್ ಅವಧಿಯಲ್ಲಿ ಚಾಟ್ನಿ (ಎಲೆ ಕತ್ತರಿಸುವಿಕೆ) ಮಾಡಿದವರು ಹೆಚ್ಚು ನಷ್ಟ
ಅನುಭವಿಸುವಂತಾಗಿದೆ. ಕೆಲವೆಡೆ ಹೊಲಕ್ಕೆ ಹೊಲವೇ ಹಾಳಾಗಿದೆ. ಸರಾಸರಿ ಮಾರಾಟ ಬೆಲೆಯನ್ನು ಲೆಕ್ಕ ಹಾಕಿ ₹356 ಕೋಟಿ ಆದಾಯ ಕಡಿಮೆ ಆಗಬಹುದು ಎಂದು ಅಂದಾಜಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಮದಾರ ತಿಳಿಸಿದರು.
ಭೂಮಿಯಲ್ಲಿನ ತೇವಾಂಶ ಮತ್ತು ವಾತಾವರಣ ತಂಪಾಗಿದ್ದರಿಂದ ಶೇ 35ರಿಂದ 40 ರಷ್ಟು ದ್ರಾಕ್ಷಿ ಬೆಳೆ ಹಾನಿಯಾಗಿದೆ. ಇದರಿಂದ ರೈತರ ಆದಾಯ ಕುಸಿಯಲಿದೆ
-ಸಂತೋಷ ಇನಾಮದಾರ ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.