ಹಾಸನ: ‘ಬೋಧಕರು ಒಂದೊಂದು ವಾದಕ್ಕೆ ಅಂಟಿಕೊಂಡಿದ್ದು, ವಿಶ್ವವಿದ್ಯಾಲಯಗಳಲ್ಲಿ ಶುದ್ಧ ಸಾಹಿತ್ಯದ ಪಾಠ ಕಡಿಮೆಯಾಗಿದೆ. ನಿಜವಾದ ಸಾಹಿತ್ಯದ ತತ್ವ ಹೇಳುತ್ತಿಲ್ಲ’ ಎಂದು ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ ವಿಷಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಆಯೋಜಿಸಿರುವ ಎರಡು ದಿನಗಳ ‘ಹೊಯ್ಸಳ ಸಾಹಿತ್ಯೋತ್ಸವ’ವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಒಂದಲ್ಲ ಒಂದು ದಿನ ನಾವು ಶುದ್ಧ ಸಾಹಿತ್ಯದ ಕಡೆಗೆ ವಾಲಲೇಬೇಕು. ಸಾಹಿತ್ಯ ಓದುವ ಜನರಿಗೆ ನಿಜ ಸಾಹಿತ್ಯ ಯಾವುದು ಎನ್ನುವುದು ಗೊತ್ತಿದೆ. ಅವರನ್ನು ಅಡ್ಡದಾರಿಗೆ ಎಳೆಯುವುದು ಬಹಳ ಕಷ್ಟ. ಬೇರೆ ಬೇರೆ ವಿಚಾರ ತಿಳಿದಿರುವ ಓದುಗರು ಇರುವುದು ಒಳ್ಳೆಯದು. ಇದರಿಂದ ಸಾಹಿತ್ಯ ಬೆಳೆಯಲಿದೆ’ ಎಂದು ಅಭಿಪ್ರಾಯಪಟ್ಟರು.
‘ಜಿಜ್ಞಾಸೆ ಮತ್ತು ಜೀವನ ಮೌಲ್ಯದ ಅನುಭವ ಆಗುವುದು ಸಾಹಿತ್ಯದಿಂದ ಮಾತ್ರ. ಯಾವ ಸಾಹಿತ್ಯ ಕೃತಿ ಜಿಜ್ಞಾಸೆ, ಮೌಲ್ಯಗಳ ಜ್ಞಾನ ತಂದುಕೊಡುವುದಿಲ್ಲವೋ ಅದು ಹೆಚ್ಚು ದಿನ ಬಾಳುವುದಿಲ್ಲ’ ಎಂದರು.
‘ಆಧುನಿಕ ಸಾಹಿತ್ಯದ ಅನೇಕ ಕವಿಗಳು ಹೊಸ ಮೌಲ್ಯ ಹುಡುಕಲು ಪ್ರಯತ್ನಿಸಿದರು. ನಮ್ಮ ಪರಂಪರೆಯಲ್ಲಿ ಸಾಹಿತ್ಯದ ಕೆಲಸ ಏನೆಂದರೆ ಮೌಲ್ಯಗಳನ್ನು ಜನರಿಗೆ ತಿಳಿಸುವುದು. ಆದರೆ, ಸಾಹಿತ್ಯದ ಮೂಲಕವೇ ಎಲ್ಲವನ್ನೂ ಮಾಡುತ್ತೇವೆ, ಬಡತನ ಹೋಗಲಾಡಿಸುತ್ತೇವೆ, ಆರ್ಥಿ ಕತೆ ಸುಧಾರಿಸುತ್ತೇವೆ ಎಂಬ ವಾದವೆಲ್ಲ ಅಡ್ಡದಾರಿ ಅನ್ನಿಸುತ್ತದೆ’ ಎಂದು ವ್ಯಾಖ್ಯಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.