ADVERTISEMENT

ಯೇಸು ಪ್ರತಿಮಾ ‘ನಾಟಕ’

ಡಿಕೆಶಿ ಮೇಲೆ ಮುಗಿಬಿದ್ದ ಸಚಿವರು l ಜಮೀನು ಹಿಂಪಡೆಯಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 20:36 IST
Last Updated 27 ಡಿಸೆಂಬರ್ 2019, 20:36 IST
ಯೇಸು ಪ್ರತಿಮೆ ಮುಂದೆ ಡಿ.ಕೆ.ಶಿವಕುಮಾರ್
ಯೇಸು ಪ್ರತಿಮೆ ಮುಂದೆ ಡಿ.ಕೆ.ಶಿವಕುಮಾರ್    

ಬೆಂಗಳೂರು/ರಾಮನಗರ: ಕಾಂಗ್ರೆಸ್‌ಶಾಸಕ ಡಿ.ಕೆ.ಶಿವಕುಮಾರ್‌ ಅವರು ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನತಮ್ಮ ಮತ ಕ್ಷೇತ್ರದಲ್ಲಿ ಅತಿ ಎತ್ತರದ ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈಜೋಡಿಸಿರುವುದು ರಾಜಕೀಯ ವಾದ–ವಿವಾದಕ್ಕೆ ಕಾರಣವಾಗಿದೆ.

‘ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಓಲೈಸಲು ಗೋಮಾಳ ಜಮೀನು ಕೊಟ್ಟು ಯೇಸು ಪ್ರತಿಮೆ ನಿರ್ಮಾಣಕ್ಕೆ ಕೈಹಾಕಿದ್ದಾರೆ’ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಶಿವಕುಮಾರ್‌, ‘ಅಲ್ಪರಿಂದ ಪಾಠ ಕಲಿಯಬೇಕಿಲ್ಲ. ಸರ್ಕಾರಿ ಜಮೀನು ನೀಡಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

‘ಸಿದ್ದರಾಮಯ್ಯ ನೇತೃತ್ವದಕಾಂಗ್ರೆಸ್‌ ಸರ್ಕಾರ ನೀಡಿದ್ದ ಸರ್ಕಾರಿ ಗೋಮಾಳ ಜಮೀನಿನಲ್ಲಿಪ್ರತಿಮೆ ಸ್ಥಾಪನೆ ಮಾಡುತ್ತಿರುವುದು ಸರಿಯಲ್ಲ. ಅದನ್ನು ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಲಾಗುವುದು’ ಎಂದಿರುವ ಕಂದಾಯ ಸಚಿವ ಆರ್‌.ಅಶೋಕ ಅವರು, ರಾಮನಗರ ಜಿಲ್ಲಾಧಿಕಾರಿಯಿಂದ ಈ ಬಗ್ಗೆ ವರದಿ ಕೇಳಿದ್ದಾರೆ.

ADVERTISEMENT

ಯೇಸು ಪ್ರತಿಮೆ ನಿರ್ಮಾಣ ವಿರೋಧಿಸಿ ರಾಮನಗರ ಜಿಲ್ಲೆಯ ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಹೋರಾಟಕ್ಕೆ ಸಜ್ಜಾಗುತ್ತಿದ್ದು, ‘ಕಪಾಲಿ ಬೆಟ್ಟ ಉಳಿಸಿ’ ಅಭಿಯಾನಕ್ಕೆ ಸಿದ್ಧತೆಯನ್ನೂ ನಡೆಸಿವೆ.

ಸರ್ಕಾರಿ ಜಮೀನು ದಾನ ಮಾಡುವಂತಿಲ್ಲ: ‘ನಲ್ಲಹಳ್ಳಿ ಗ್ರಾಮದ ಸರ್ವೆ ಸಂಖ್ಯೆ 283 ರಲ್ಲಿ 231 ಎಕರೆ 35 ಗುಂಟೆ ಗೋಮಾಳ ಜಮೀನು ಇದೆ. ಇದರಲ್ಲಿ 10 ಎಕರೆಯನ್ನು ಪ್ರತಿಮೆ ನಿರ್ಮಾಣಕ್ಕೆ ನೀಡಲಾಗಿದೆ. ಇಲಾಖೆ ಮಾಹಿತಿಯ ಪ್ರಕಾರ ಈ ಪ್ರದೇಶದಲ್ಲಿ
2 ಸಾವಿರಕ್ಕೂ ಹೆಚ್ಚು ಜಾನುವಾರುಗಳಿದ್ದು, ಒಟ್ಟು 548 ಎಕರೆ ಗೋಮಾಳದ ಜಮೀನು ಮೀಸಲಿಡಬೇಕು’ ಎಂದು ಅಶೋಕ ಸುದ್ದಿಗಾರರಿಗೆ ಶುಕ್ರವಾರ ತಿಳಿಸಿದರು.

‘ಕಾಂಗ್ರೆಸ್ ಸರ್ಕಾರ, 2017ರಲ್ಲಿ ಶೇ 10 ರಷ್ಟು ಮಾರ್ಗಸೂಚಿ ದರ ವಿಧಿಸಿ ಜಮೀನು ನೀಡಲು ತೀರ್ಮಾನಿಸಿತ್ತು. ಶೇ 10 ರಷ್ಟು ಹಣ ನೀಡಲು ಸಾಧ್ಯವಿಲ್ಲ. ಅದನ್ನು ಮನ್ನಾ ಮಾಡಬೇಕು ಎಂದು ಹಾರೋಬೆಲೆ ಕಪಾಲಿ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ ಸರ್ಕಾರಕ್ಕೆ ಮನವಿ ಮಾಡಿತ್ತು. ಶಿವಕುಮಾರ್‌ ಸ್ವಂತ ಹಣವನ್ನು ನೀಡಿದ್ದಾರೆ. ಸರ್ಕಾರಿ ಗೋಮಾಳ ಜಮೀನು ಬೇಕಾಬಿಟ್ಟಿದಾನ ಮಾಡಲು ಅದು ಶಿವಕುಮಾರ್‌ ಅವರ ಖಾಸಗಿ ಆಸ್ತಿ ಅಲ್ಲ’ ಎಂದೂ ಹೇಳಿದರು.

ಪರಿಸರ ಸೂಕ್ಷ್ಮವಲಯ: ‘ಈ ಜಮೀನು ಪರಿಸರ ಸೂಕ್ಷ್ಮ ವಲಯ ಮತ್ತು ಆನೆ ಕಾರಿಡಾರ್‌ ವ್ಯಾಪ್ತಿಗೆ ಬರುತ್ತದೆ. ಆನೆ ಕಾರಿಡಾರ್‌ನಲ್ಲಿ ಇರುವ ಸರ್ಕಾರಿ ಜಮೀನನ್ನು ಯಾರಿಗೂ ಪರಭಾರೆ ಮಾಡುವಂತಿಲ್ಲ. ಆನೆ ಕಾರಿಡಾರ್‌ಗಾಗಿ ಖಾಸಗಿಯವರ ಜಮೀನು ಖರೀದಿಸಲು ಇಟ್ಟುಕೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ತಿಳಿಸಿದೆ. ಗ್ರಾಮಾಂತರ ಪ್ರದೇಶದಲ್ಲಿ ಮತ್ತು ಜಾನುವಾರುಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಗೋಮಾಳ ಜಮೀನು ರಕ್ಷಿಸಬೇಕೆಂಬ ಸುಪ್ರೀಂಕೋರ್ಟ್‌ ಆದೇಶವೇ ಇದೆ’ ಎಂದು ಅಶೋಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.