ADVERTISEMENT

ರವಿಕೆ ತೆರಿಗೆ ಇದಿದ್ದರೆ ಶಿರಚ್ಛೇದ ಖಚಿತ: ಬಿ.ಕೆ. ಶಿವರಾಂ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 15:31 IST
Last Updated 17 ಜುಲೈ 2024, 15:31 IST
<div class="paragraphs"><p>ಬೆಂಗಳೂರಿನಲ್ಲಿ ಬುಧವಾರ ಸಮಾನ ಮನಸ್ಕರ ಬಳಗ ಪತ್ರಕರ್ತ ಆರ್.ಜಯಕುಮಾರ್‌ ಸ್ಮರಣೆಗಾಗಿ ಆಯೋಜಿಸಿದ್ದ ‘ದ್ರಾವಿಡ ಚಳವಳಿ ಮತ್ತು ವರ್ತಮಾನ’ ವಿಚಾರ ಸಂಕಿರಣದಲ್ಲಿ ಲೀಲಾ ಸಂಪಿಗೆ, ಬಿ.ಕೆ. ಶಿವರಾಂ, ಬಿ. ಕಾರ್ಲೋಸ್, ನ್ಯಾ.ಎಚ್.ಎನ್. ನಾಗಮೋಹನದಾಸ್, ಎ.ಬಿ. ರಾಮಚಂದ್ರಪ್ಪ ಭಾಗವಹಿಸಿದರು.</p></div>

ಬೆಂಗಳೂರಿನಲ್ಲಿ ಬುಧವಾರ ಸಮಾನ ಮನಸ್ಕರ ಬಳಗ ಪತ್ರಕರ್ತ ಆರ್.ಜಯಕುಮಾರ್‌ ಸ್ಮರಣೆಗಾಗಿ ಆಯೋಜಿಸಿದ್ದ ‘ದ್ರಾವಿಡ ಚಳವಳಿ ಮತ್ತು ವರ್ತಮಾನ’ ವಿಚಾರ ಸಂಕಿರಣದಲ್ಲಿ ಲೀಲಾ ಸಂಪಿಗೆ, ಬಿ.ಕೆ. ಶಿವರಾಂ, ಬಿ. ಕಾರ್ಲೋಸ್, ನ್ಯಾ.ಎಚ್.ಎನ್. ನಾಗಮೋಹನದಾಸ್, ಎ.ಬಿ. ರಾಮಚಂದ್ರಪ್ಪ ಭಾಗವಹಿಸಿದರು.

   

ಪ್ರಜಾವಾಣಿ ಚಿತ್ರ.

ಬೆಂಗಳೂರು: ‘ತೆರಿಗೆ ನೀಡದೇ ರವಿಕೆ ಧರಿಸುವಂತಿಲ್ಲ ಎಂಬ ನಿಯಮ ಈಗ ಜಾರಿ ಮಾಡಿದ್ದರೆ ಅಂಥವರ ಶಿರಛೇದ ಆಗುತ್ತಿತ್ತು’ ಎಂದು ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಂ ಹೇಳಿದರು.

ADVERTISEMENT

ಸಮಾನ ಮನಸ್ಕರ ಬಳಗ ಪತ್ರಕರ್ತ ಆರ್‌.ಜಯಕುಮಾರ್ ನುಡಿನಮನ ಕಾರ್ಯಕ್ರಮದ ಭಾಗವಾಗಿ ಬುಧವಾರ ಹಮ್ಮಿಕೊಂಡಿದ್ದ ‘ದ್ರಾವಿಡ ಚಳವಳಿ ಮತ್ತು ವರ್ತಮಾನ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಧರ್ಮ, ದೇವರ ಹೆಸರಿನಲ್ಲಿ ಹಲವು ಆಚರಣೆಗಳನ್ನು ಜೀವಂತವಾಗಿಡುವ ಮೂಲಕ ತಳ ಸಮುದಾಯಗಳನ್ನು ನಿರಂತರವಾಗಿ ಶೋಷಣೆ ಮಾಡುತ್ತಾ ಬಂದಿದ್ದರು. ಆಳ್ವಿಕೆ ನಡೆಸಿದ ರಾಜರೂ ಪೋಷಿಸಿದರು. ಎರಡೂವರೆ ಸಾವಿರ ವರ್ಷಗಳ ಹಿಂದೆಯೇ ಇಂತಹ ಆಚರಣೆಗಳ ವಿರುದ್ಧ ಶಾಂತವಾಗಿ ಧ್ವನಿ ಎತ್ತಿದ ಗೌತಮ ಬುದ್ಧನನ್ನೇ ಮನುವಾದಿಗಳು ತಮ್ಮ ದಶಾವತಾರಕ್ಕೆ ಸೇರ್ಪಡೆ ಮಾಡಿಕೊಂಡರು. ದಾಸ–ಆಚಾರ್ಯರು ಇಂತಹ ಪರಿಕಲ್ಪನೆಗಳನ್ನು ವಿಸ್ತರಿಸಿದರು ಎಂದು ಆರೋಪಿಸಿದರು.

ದುಡಿವ ವರ್ಗಗಳನ್ನು ತುಳಿಯುವ ಪ್ರಯತ್ನ ನಿರಂತರವಾಗಿ ನಡೆದಿದೆ. ದ್ರಾವಿಡ ವಿಚಾರದಾರೆಯ ಬೇರು ದಕ್ಷಿಣ ಭಾರತೀಯರ ಮನದಲ್ಲಿ ಆಳವಾಗಿ ಬೇರೂರಿದೆ. ಹಾಗಾಗಿ, ಅವರ ಪ್ರಯತ್ನ ಫಲ ನೀಡುತ್ತಿಲ್ಲ. ಅದರ ಶ್ರೇಯ ಬುದ್ಧ, ಬಸವ, ಅಂಬೇಡ್ಕರ್, ಪೆರಿಯಾರ್ ಅವರಿಗೆ ಸಲ್ಲಬೇಕು ಎಂದರು. 

‘ಗಣಪತಿ ಕಾಲ್ಪನಿಕ ದೇವತೆ’ ಎಂದ ಸಾಣೇಹಳ್ಳಿ ಶ್ರೀಗಳ ವಿರುದ್ಧ ಮನುವಾದಿ ಮನೋಸ್ಥಿತಿಯ ಜನರು ತಿರುಗಿ ಬಿದ್ದರು. ಅವರ ಹೇಳಿಕೆ ಸತ್ಯವಾಗಿತ್ತು. ಶೋಷಿತ ಸಮುದಾಯಗಳು ಅವರ ಪರ ಗಟ್ಟಿಯಾಗಿ ನಿಲ್ಲಬೇಕಿತ್ತು ಎಂದು ಹೇಳಿದರು. 

ವಿಚಾರವಾದಿ ಬಿ. ಕಾರ್ಲೋಸ್‌ ಮಾತನಾಡಿ, ಪೆರಿಯಾರ್ ವಿಚಾರಧಾರೆ ತಮಿಳುನಾಡಿನ ಜನರಲ್ಲಿ ಆಳವಾಗಿ ಇರುವುದರಿಂದ ರಾಷ್ಟ್ರೀಯ ಪಕ್ಷಗಳಿಗೆ ಇಂದಿಗೂ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದ ಜನರು ಬಸವಣ್ಣನ ತತ್ವ ಪಾಲಿಸದೇ ರಾಜಕೀಯ ವ್ಯವಸ್ಥೆ ಹಳಿ ತಪ್ಪಿದೆ. ಇಂದಿನ ಯುವ ಪೀಳಿಗೆಗೆ ಪೆರಿಯಾರ್, ಬಸವಣ್ಣನವರ ವಿಚಾರಧಾರೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿದರು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್,  ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತ ಎಸ್‌.ಆರ್. ಆರಾಧ್ಯ, ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ, ಅನಂತ ನಾಯಕ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.