ಬೆಂಗಳೂರು: ಕೈಗೆಟುಕುವ ಬೆಲೆಯಲ್ಲಿ ನಿವೇಶನ ಹಾಗೂ ಫ್ಲ್ಯಾಟ್ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ‘ಡ್ರೀಮ್ಸ್–ಜಿಕೆ ಇನ್ಫ್ರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥಾಪಕ ಸಚಿನ್ ನಾಯಕ್ ಸೇರಿದಂತೆ 10 ಮಂದಿ ವಿರುದ್ಧ ಸಿಐಡಿ ಬರೋಬ್ಬರಿ 16 ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದೆ.
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ನಿರ್ದೇಶಿಸಬೇಕು ಎಂದು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಅ.3ರಂದುಆ ಅರ್ಜಿಯ ವಿಚಾರಣೆ ವೇಳೆ ವಾದ ಮಂಡಿಸಿದ್ದ ರಾಜ್ಯ ಸರ್ಕಾರದ ಪರ ವಕೀಲಡಿ.ನಾಗರಾಜ್, ‘ಈಗಾಗಲೇ ಸಿಐಡಿ ಸಮಗ್ರ ತನಿಖೆ ನಡೆಸಿದೆ. ಸದ್ಯದಲ್ಲೇ ಆರೋಪ ಪಟ್ಟಿ ಸಲ್ಲಿಸಲಿದೆ’ ಎಂದು ಹೇಳಿದ್ದರು. ಅಂತೆಯೇ ಅಧಿಕಾರಿಗಳು ಒಂದು ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
‘ರಾಜ್ಯದ ವಿವಿಧ ಭಾಗಗಳಿಂದ 3,700 ಮಂದಿ ಈ ಕಂಪನಿಯಲ್ಲಿ ₹ 375 ಕೋಟಿ ಹೂಡಿದ್ದಾರೆ. ₹ 15 ಲಕ್ಷಕ್ಕೆ ಫ್ಲ್ಯಾಟ್ ಕೊಡುವುದಾಗಿ ಸಚಿನ್ ಹಣ ಸಂಗ್ರಹಿಸಿ ವಂಚಿಸಿದ್ದಾನೆ. ಈ ಜಾಲದ ವಿರುದ್ಧ ಕೆಪಿಐಡಿ (ಕರ್ನಾಟಕ ಪ್ರೊಟೆಕ್ಷನ್ ಆಫ್ ಇಂಟರೆಸ್ಟ್ ಆಫ್ ಡೆಪಾಸಿಟ್ ಫೈನಾನ್ಶಿಯಲ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 345 ಸಾಕ್ಷಿದಾರರ ಹೇಳಿಕೆಗಳನ್ನು ಪಡೆಯಲಾಗಿದೆ’ ಎಂದು ಸಿಐಡಿ ಅಧಿಕಾರಿಗಳು ಸಿಸಿಎಚ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ವಿವರಿಸಿದ್ದಾರೆ.
‘ಆರೋಪಿಯು ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ದಾಖಲೆಗಳನ್ನು ಅಳಿಸಿ ಹಾಕಿದ್ದ. ತಂತ್ರಜ್ಞರ ಮೂಲಕ ಅವುಗಳನ್ನು ವಾಪಸ್ (ರಿಟ್ರೀವ್) ಪಡೆದಿದ್ದೇವೆ. 15ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳ ವಿವರ, ಆದಾಯ ತೆರಿಗೆ ವರದಿ, ಭೂ–ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲ ಸಾಕ್ಷ್ಯಗಳು ಸಚಿನ್‘ಡ್ರೀಮ್ಸ್–ಜಿ.ಕೆ’ ಕಂಪನಿ ಹೆಸರಿನಲ್ಲಿ ₹ 375 ಕೋಟಿ ವಂಚಿಸಿರುವುದನ್ನು ದೃಢಪಡಿಸುತ್ತವೆ’ ಎಂದು ಹೇಳಿದ್ದಾರೆ.
‘ಸಚಿನ್ ನಾಯಕ್ ಅಲಿಯಾಸ್ ಯೋಗೇಶ್ ಚೌಧರಿ, ಆತನ ಪತ್ನಿಯರಾದ ದಿಶಾ ಚೌಧರಿ, ಮನ್‌ದೀಪ್ ಕೌರ್, ಫೈನಾನ್ಶಿಯರ್‌ಗಳಾದ ವೆಂಕಟೇಶ್, ಸಂಜಯ್, ಶಂಕರ್ ಅಲಿಯಾಸ್ ಜಯಶಂಕರ್ ಹಾಗೂ ಕಂಪನಿಯ ನಾಲ್ವರು ಎಂಡಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ’ ಎಂದು ತನಿಖಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಮಕ್ಕಳ ಹೆಸರಿನಲ್ಲಿ ಕಂಪನಿ: ‘ಸಚಿನ್ ಹಾಗೂ ದಿಶಾ ಚೌಧರಿ, ತಮ್ಮ ಇಬ್ಬರು ಮಕ್ಕಳ ಹೆಸರಿನಲ್ಲೇ ಕಂಪನಿ ಪ್ರಾರಂಭಿಸಿ ಜನರಿಗೆ ವಂಚಿಸಿದ್ದಾರೆ’ ಎಂಬ ಅಂಶ ಆರೋಪಪಟ್ಟಿಯಲ್ಲಿದೆ.
ಮುಂಬೈನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ದಿಶಾ, 2002ರ ಫೆ.28ರಂದು ಸಚಿನ್‌ನನ್ನು ಪ್ರೇಮ ವಿವಾಹವಾದರು. ದಂಪತಿ ತಮಗೆ ಜನಿಸಿದ ಇಬ್ಬರು ಮಕ್ಕಳಿಗೆ ಗೌರಿ ಹಾಗೂ ಕೃಷ್ಣ ಎಂಬ ಹೆಸರುಗಳನ್ನಿಟ್ಟಿದ್ದರು.
‘ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಕಟ್ಟಿದ್ದೆವು. ಹೀಗಾಗಿ, ಅವರ ಹೆಸರಿನಲ್ಲೇ ‘ಡ್ರೀಮ್ಸ್ ಜಿ–ಕೆ’ (ಡ್ರೀಮ್ಸ್–ಕನಸು, ಜಿ–ಗೌರಿ, ಕೆ–ಕೃಷ್ಣ) ಕಂಪನಿ ಪ್ರಾರಂಭಿಸಿದೆವು. ದಾಂಪತ್ಯದಲ್ಲಿ ಒಡಕು ಉಂಟಾಗಿ ದಿಶಾ ಮಕ್ಕಳೊಂದಿಗೆ ಮುಂಬೈ ಸೇರಿದಳು. 2014ರಲ್ಲಿ ಪಂಜಾಬ್‌ನ ಮನ್‌ದೀಪ್‌ಳನ್ನು ಎರಡನೇ ಮದುವೆಯಾದೆ. ಆ ನಂತರ ‘ಟಿಜಿಎಸ್’ ಕಂಪನಿ ಪ್ರಾರಂಭಿಸಿ, ಆಕೆಯನ್ನೇ ವ್ಯವಸ್ಥಾಪಕ ನಿರ್ದೇಶಕಿ ಮಾಡಿದೆ. ಎರಡೂ ಕಂಪನಿಗಳಿಂದ ಕೋಟಿಗಟ್ಟಲೇ ಲಾಭ ಬರಲು ಶುರುವಾಗಿದ್ದರಿಂದ ಅತಿಯಾಸೆಗೆ ಬಿದ್ದು, ಆಪ್ತ ಗೆಳತಿ ಮುಜುಮ್ದಾರ್ ಶಾತಕರ್ಣಿ ಜತೆಗೂಡಿ ‘ಗೃಹಕಲ್ಯಾಣ್’ ಎಂಬ ಮತ್ತೊಂದು ಕಂಪನಿ ತೆರೆದಿದ್ದೆ’ ಎಂದು ಸಚಿನ್ ಹೇಳಿಕೆ ಕೊಟ್ಟಿದ್ದಾನೆ.
ಫೈನಾನ್ಶಿಯರ್‌ಗಳ ಖಾತೆಗೆ ₹ 30 ಕೋಟಿ!
‘ಸಚಿನ್ ನಾಯಕ್‌ನ ಖಾತೆಯಿಂದ ಮೂವರು ಫೈನಾನ್ಶಿಯರ್‌ಗಳ ಖಾತೆಗೆ ₹ 30 ಕೋಟಿ ವರ್ಗಾವಣೆಯಾಗಿದೆ. ಹೀಗಾಗಿ, ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಆ ಮೂವರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ. ಫೈನಾನ್ಶಿರ್‌ಗಳಾದ ವೆಂಕಟೇಶ್ ಹಾಗೂ ಸಂಜಯ್ ಎಂಬುವರನ್ನು ವಶಕ್ಕೆ ಪಡೆದು ಹೇಳಿಕೆ ಪಡೆದಿದ್ದೇವೆ. ಆದರೆ, ಜಯಶಂಕರ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ‘ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಆರೋಪಪಟ್ಟಿಯಲ್ಲಿ ಹೇಳಿದ್ದೇವೆ’ ಎಂದು ಮಾಹಿತಿ ನೀಡಿದರು.
ಸಚಿನ್ ಕೊಟ್ಟ ‘ಕೋಟಿ’ ಲೆಕ್ಕ
‘ಡ್ರೀಮ್ಸ್ ಜಿ.ಕೆ ಹೆಸರಿನಲ್ಲಿ ಜನರಿಂದ ಸಂಗ್ರಹಿಸಿದ್ದ ಹಣದಲ್ಲಿ ಮೊದಲ ಪತ್ನಿಗೆ ₹ 25 ಕೋಟಿ ಜೀವನಾಂಶ ನೀಡಿದ್ದೇನೆ. ಜಾಹೀರಾತು ಪ್ರಕಟಿಸಲು ಮಾಧ್ಯಮಗಳಿಗೆ ₹ 65 ಕೋಟಿ ಕೊಟ್ಟಿದ್ದೇನೆ. ಕಂಪನಿ ನೌಕರರಿಗೆ ₹ 45 ಕೋಟಿ ವೇತನ ನೀಡಿದ್ದೇನೆ. ಗ್ರಾಹಕರಿಗೆ ₹ 45 ಕೋಟಿ ಮರಳಿಸಿದ್ದೇನೆ. ಪತ್ನಿ ದಿಶಾ ನಟಿಸಿದ ‘ಅನುರಾಧ’ ಹಿಂದಿ ಸಿನಿಮಾಕ್ಕೆ ₹ 10 ಕೋಟಿ ಖರ್ಚು ಮಾಡಿದ್ದೇನೆ. ನನ್ನ ಮಗುವಿನ ನಾಮಕರಣಕ್ಕೆ ಹಾಗೂ ಹುಟ್ಟುಹಬ್ಬಕ್ಕೆ ₹ 8 ಕೋಟಿ ವ್ಯಯಿಸಿದ್ದೇನೆ. ಉಳಿದ ಹಣವನ್ನು ನಿವೇಶನ ಖರೀದಿಗೆ ಬಳಸಿದ್ದೇನೆ’ ಎಂದು ಸಚಿನ್ ಲೆಕ್ಕ ಕೊಟ್ಟಿರುವುದಾಗಿ ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.