ಬೆಂಗಳೂರು:ಮೈಸೂರು ವಿಶ್ವವಿದ್ಯಾಲಯದಬಿ.ಎ. ಆರ್ಟ್ಸ್ ಕೋರ್ಸ್‌ನ ಐದನೇ ಸೆಮಿಸ್ಟರ್‌ಗೆ ‘ಏಡ್ಸ್, ಕ್ಯಾನ್ಸರ್‌ಗೆ ಮೂತ್ರ ಚಿಕಿತ್ಸೆ’ ಎಂಬ ಅಧ್ಯಾಯ ಇರುವ ಪುಸ್ತಕವನ್ನು ಪರಾಮರ್ಶನ ಗ್ರಂಥವಾಗಿ ಆಯ್ಕೆ ಮಾಡಿರುವ ಕ್ರಮವನ್ನು ಲೇಖಕರು ಪ್ರಶ್ನಿಸಿದ್ದಾರೆ.
ಈ ಕುರಿತು,ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ವಿಜಯಾ,ರಾಜೇಂದ್ರ ಚೆನ್ನಿ, ಬಂಜಗೆರೆ ಜಯಪ್ರಕಾಶ್,ವಿಮಲಾ.ಕೆ.ಎಸ್.,ಶ್ರೀಪಾದ ಭಟ್,ಟಿ.ಸುರೇಂದ್ರ ರಾವ್ ಮತ್ತಿತರರುಸಮಾಜಶಾಸ್ತ್ರ ಪಠ್ಯ ಪುಸ್ತಕ ರಚನಾ ಮಂಡಳಿ ಅಧ್ಯಕ್ಷರಾದ ರಾಮೇಗೌಡರಿಗೆ ಪತ್ರ ಬರೆದಿದ್ದಾರೆ.
‘ಅಧಿಕೃತವಲ್ಲದ, ಪರಿಶೀಲನೆ ಮಾಡದ, ಮೌಢ್ಯಾಚರಣೆಯ ವಿವರಣೆ ಇರುವ ಪುಸ್ತಕವನ್ನು ನಿಮ್ಮ ಸಮಿತಿ ಪರಿಶೀಲಿಸದೆ ಪರಾಮರ್ಶನ ಪುಸ್ತಕ ಎಂದುಪರಿವಿಡಿಯಲ್ಲಿ ಉಲ್ಲೇಖಿಸಿದೆ. ಕೂಲಂಕಶವಾಗಿ ಪರಿಶೀಲಿಸದೇ ಹೀಗೆ ಉಲ್ಲೇಖಿಸಿರುವುದು ತಪ್ಪು ನಡೆಯಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.
ಪರಾಮರ್ಶನ ಪುಸ್ತಕ ಬರೆದ ಕೆ. ಬೈರಪ್ಪನವರು ತಮ್ಮ ಪುಸ್ತಕದ ಮುಖಪುಟದಲ್ಲಿ ಐದನೇ ಸೆಮಿಸ್ಟರ್‌ನ ಎನ್‌ಇಪಿ ಪಠ್ಯ ಎಂದು ಅನಧಿಕೃತವಾಗಿ ಹಾಕಿಕೊಳ್ಳಲು ಅನುಮತಿ ಕೊಟ್ಟವರಾರು? ಹಾಗೆಯೇ, ಎನ್‌ಇಪಿ ಅಡಿಯಲ್ಲಿ ಕೇವಲ ಎರಡು ಸೆಮಿಸ್ಟರ್‌ಗಳು ಆಗಿವೆ. ಹೀಗಿರುವಾಗ ಐದನೇ ಸೆಮಿಸ್ಟರ್‌ನ ಪುಸ್ತಕವನ್ನು ಎನ್‌ಇಪಿ ಎಂದು ಪ್ರಚಾರ ಮಾಡುವುದು ಎಷ್ಟು ಸರಿ? ಪ್ರಾಧ್ಯಾಪಕರು, ವಿದ್ಯಾರ್ಥಿಗಳನ್ನು ಇದು ತಪ್ಪು ದಾರಿಗೆಳೆಯುವುದಿಲ್ಲವೇ ಎಂದೂ ಪತ್ರದಲ್ಲಿ ಕೇಳಿದ್ದಾರೆ.
‘ಕೆ. ಬೈರಪ್ಪನವರು ವಿವರಿಸಿದ ಮೌಢ್ಯಾಚರಣೆಯ ವಿಚಾರಗಳಿಗೂ ಆರೆಸ್ಸೆಸ್, ಬಿಜೆಪಿ ಮುಖಂಡರ ಹೇಳಿಕೆಗಳಿಗೂ ಸಾಮ್ಯತೆಯಿದೆ. ಪರಾಮರ್ಶನ ಪುಸ್ತಕದ ನೆಪದಲ್ಲಿ ಶಿಕ್ಷಣದಲ್ಲಿಯೂ ಇದು ಸೇರಿಕೊಳ್ಳುವ ಅಪಾಯವಿದೆ’ ಎಂದಿದ್ದಾರೆ.
'ಪರಾಮರ್ಶನ ಪುಸ್ತಕಕ್ಕೂ ಮತ್ತು ವಿ.ವಿ. ಗೂ ಸಂಬಂಧವಿಲ್ಲ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಆರ್. ಶಿವಪ್ಪನವರು ಹೇಳಿದ್ದಾರೆ. ಇದುಪಕ್ಕಾ ಹೊಣೆಗೇಡಿತನ. ಪರಾಮರ್ಶನ ಪುಸ್ತಕವನ್ನು ಆಯ್ಕೆ ಮಾಡಿದ್ದು ಯಾರು? ಯಾಕೆ ಆಯ್ಕೆ ಮಾಡಲಾಗಿದೆ’ ಎಂದು ಪ್ರಶ್ನಿಸಿರುವ ಅವರು, ‘ವೈಜ್ಞಾನಿಕ ಜ್ಞಾನಾರ್ಜನೆ, ವ್ಯಕ್ತಿತ್ವ ವಿಕಸನ ಮುಖ್ಯ ಉದ್ದೇಶವಾಗಿರುವ ಶಿಕ್ಷಣದಲ್ಲಿ ಪರಾಮರ್ಶನ ಪುಸ್ತಕಗಳು ಸಹ ಮೌಲ್ಯಯುತವಾಗಿರಬೇಕು. ಕುಲಸಚಿವರ ಹೇಳಿಕೆ ಇದನ್ನು ಉಲ್ಲಂಘಿಸುವಂತಿದೆ’ ಎಂದೂ ಆಕ್ಷೇಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.