ADVERTISEMENT

ಕುಡಿಯುವ ನೀರು, ಸ್ವಚ್ಛತೆ ಶೃಂಗಸಭೆ ಇಂದು: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 23:35 IST
Last Updated 28 ಅಕ್ಟೋಬರ್ 2024, 23:35 IST
<div class="paragraphs"><p> ಸಚಿವ ಪ್ರಿಯಾಂಕ್‌ ಖರ್ಗೆ</p></div>

ಸಚಿವ ಪ್ರಿಯಾಂಕ್‌ ಖರ್ಗೆ

   

ಬೆಂಗಳೂರು: ‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಸ್ಯೆಗಳಿಗೆ ಸುಧಾರಿತ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ‘ಕರ್ನಾಟಕ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸುಸ್ಥಿರತೆ’ ವಿಷಯದ ಕುರಿತ ಶೃಂಗಸಭೆಯನ್ನು ಮಂಗಳವಾರ (ಅ. 29) ಆಯೋಜಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಐಟಿ ಮತ್ತು ಬಿಟಿ) ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ನಗರದ ಬಳ್ಳಾರಿ ರಸ್ತೆಯ ಫೋರ್‌ ಸೀಜನ್ಸ್‌ ಹೋಟೆಲ್‌ನಲ್ಲಿ ಈ ಸಭೆ ನಡೆಯಲಿದೆ.

ADVERTISEMENT

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್, ‘ಗ್ರಾಮೀಣ ಕರ್ನಾಟಕದಲ್ಲಿ ‘ನೀರಿನ ಸುರಕ್ಷತೆಗಾಗಿ ನವೀನ ತಂತ್ರಜ್ಞಾನಗಳ ಬಳಕೆ’ ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಶೃಂಗಸಭೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಂರಕ್ಷಣೆ ಮತ್ತು ಸಮರ್ಥನೀಯ ನಿರ್ವಹಣೆ, ನೀರಿನ ಗುಣಮಟ್ಟಕ್ಕಾಗಿ ಸುಧಾರಿತ ತಂತ್ರಜ್ಞಾನಗಳ ಕುರಿತು ಸಮಗ್ರ ಚರ್ಚೆಗೆ ವೇದಿಕೆ ಕಲ್ಪಿಸಲಾಗುವುದು’ ಎಂದರು.

‘ಈ ಶೃಂಗಸಭೆಯಲ್ಲಿ ಭಾಗವಹಿಸಲು ಒಟ್ಟು 119 ಅರ್ಜಿಗಳು ಬಂದಿವೆ. ಆ ಪೈಕಿ, ಅತ್ಯುತ್ತಮವಾದ 20 ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ. ಆಯ್ದ ಸ್ಟಾರ್ಟ್-ಅಪ್‌ಗಳ ಕುರಿತು ತಜ್ಞರು ವಿವರಣೆ ನೀಡಲಿದ್ದಾರೆ. ವಿಜೇತರಿಗೆ ಕನಿಷ್ಠ ₹ 25 ಲಕ್ಷ ಧನ ಸಹಾಯ ನೀಡಲಾಗುವುದು. ಇಲಾಖೆಯ ಸಹಯೋಗದೊಂದಿಗೆ ತಮ್ಮ ಆವಿಷ್ಕಾರಗಳನ್ನು ಪ್ರಾಯೋಗಿಕವಾಗಿ ನಡೆಸಲು ‌ಅವಕಾಶ ನೀಡಲಾಗುವುದು’ ಎಂದೂ ಸಚಿವರು ಹೇಳಿದರು.

‘ನೀರಿನ‌ ಸದ್ಬಳಕೆ, ಪುನರ್ ಬಳಕೆ ಕುರಿತು ಶೃಂಗಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸಮುದ್ರದ ನೀರಿನಿಂದ ಕುಡಿಯುವ ನೀರು ಮಾಡಬಹುದೇ? ಗಾಳಿಯಿಂದ ಹೇಗೆ ನೀರು‌ ಮಾಡಬಹುದು. ಈ ಎಲ್ಲ ತಂತ್ರಜ್ಞಾನಗಳ ಬಗ್ಗೆಯೂ ವಿಚಾರ ವಿನಿಮಯ ನಡೆಸಲಿದ್ದೇವೆ. ಪೈಲೆಟ್ ಯೋಜನೆ ಜಾರಿ‌ಗೊಳಿಸಿ, ಯಶಸ್ವಿಯಾದರೆ ರಾಜ್ಯದಾದ್ಯಂತ ವಿಸ್ತರಿಸಲಾಗುವುದು’ ಎಂದೂ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.