ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಗಜಪಯಣದ ಸಿದ್ಧತೆ ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ‘ದ್ರೋಣ’ನ ಸ್ಥಾನ ತುಂಬುವ ಆನೆಗಾಗಿ ಅರಣ್ಯ ಇಲಾಖೆ ಹುಡುಕಾಟ ಆರಂಭಿಸಿದೆ.
ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ದ್ರೋಣ ಆನೆಯು ಏಪ್ರಿಲ್‌ನಲ್ಲಿ ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಹೃದಯಾಘಾತದಿಂದ ಮೃತಪಟ್ಟಿತ್ತು.
ಬದಲಿ ವ್ಯವಸ್ಥೆಗಾಗಿ ಸಮರ್ಥ ಆನೆ ಹುಡುಕಾಟ ನಡೆಸುವಂತೆ ವನ್ಯಜೀವಿ ವಿಭಾಗದ (ಪಿಸಿಸಿಎಫ್) ಮುಖ್ಯಸ್ಥರು, ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಶಾಂತ್ ಕುಮಾರ್ ಅವರಿಗೆ ಸೂಚನೆ ನೀಡಿದ್ದಾರೆ.
‘ವನ್ಯಜೀವಿ ವಿಭಾಗದ ಮುಖ್ಯಸ್ಥರು ಬುಧವಾರ ಭೇಟಿ ನೀಡಿದ್ದರು. ಅವರ ಜೊತೆ ಮೈಸೂರು, ಹುಣಸೂರು ಪ್ರವಾಸ ಕೈಗೊಂಡಿದ್ದೆವು. ಗಜಪಡೆ ಸಂಬಂಧ ಅವರ ಜೊತೆ ಚರ್ಚಿಸಲಾಗಿದೆ. ಎಲ್ಲೆಲ್ಲಿ ಸಾಕಾನೆ ಶಿಬಿರಗಳಿವೆಯೋ ಅಲ್ಲಿಗೆ ಹೋಗಿ ಪರಿಶೀಲನೆ ನಡೆಸಿ ಸದ್ಯದಲ್ಲೇ ವರದಿ ನೀಡಲಿದ್ದೇವೆ’ ಎಂದು ಡಿಸಿಎಫ್ ಪ್ರಶಾಂತ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಾಗಲೇ ಕೆಲ ಆನೆಗಳನ್ನು ಗುರುತಿಸಲಾಗಿದೆ. ಮಾವುತರು ತರಬೇತಿ ನೀಡುತ್ತಿದ್ದಾರೆ. ಆದರೆ, ಜಂಬೂಸವಾರಿಗೆ ಹೊಂದಿಕೊಳ್ಳುವಂಥ ಆನೆ ನಮಗೆ ಅಗತ್ಯವಿದೆ. ಹೀಗಾಗಿ, ಮತ್ತೊಮ್ಮೆ ಪರಿಶೀಲನೆ ನಡೆಸುತ್ತೇವೆ’ ಎಂದರು.
ಈ ಬಾರಿ ದಸರಾ ಮಹೋತ್ಸವ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ. ಹೀಗಾಗಿ, ಜುಲೈ ಅಂತ್ಯದಲ್ಲಿ ಗಜಪಡೆಯ ಮೊದಲ ತಂಡ ಸಾಂಸ್ಕೃತಿಕ ನಗರಿಗೆ ಬರಲಿದೆ.
37 ವರ್ಷ ವಯಸ್ಸಿನ ಜೂನಿಯರ್ ‘ದ್ರೋಣ’ ಆನೆಯು 2016ರಿಂದ 2018ರ ತನಕ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಅರ್ಜುನನ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದಿತ್ತು.
ಬಳ್ಳೆ ಶಿಬಿರದ ಅರ್ಜುನ (59 ವರ್ಷ), ದುಬಾರೆ ಶಿಬಿರದ ಧನಂಜಯ (36), ಗೋಪಿ (37), ವಿಕ್ರಮ (46), ಕಾವೇರಿ (41), ಪ್ರಶಾಂತ (63), ವಿಜಯ (62), ಮತ್ತಿಗೋಡು ಶಿಬಿರದ ಅಭಿಮನ್ಯು (53), ಬಲರಾಮ (61), ವರಲಕ್ಷ್ಮಿ (63), ಬಂಡೀಪುರ ಶಿಬಿರದ ಚೈತ್ರಾ (48) ಈ ಬಾರಿಯೂ ಪಾಲ್ಗೊಳ್ಳುವುದು ಬಹುತೇಕ ಖಚಿತ. 2018ರಲ್ಲಿ ಧನಂಜಯ ಹೊಸದಾಗಿ ಸೇರ್ಪಡೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.