ಬೆಂಗಳೂರು: ರಾಜ್ಯದಲ್ಲಿ ಡ್ರೋನ್ ಬಳಸಿ ಜಮೀನುಗಳ ಹಾಗೂ ಆಸ್ತಿಗಳ ಭೂಮಾಪನಾ ಕಾರ್ಯ ನಡೆಸಲು ಕಂದಾಯ ಇಲಾಖೆ ಹಾಗೂ ಭಾರತೀಯ ಸರ್ವೇಕ್ಷಣಾ ಸಂಸ್ಥೆ ಒಪ್ಪಂದ ಮಾಡಿಕೊಂಡಿವೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಸರ್ವೇಕ್ಷಣಾ ಸಂಸ್ಥೆಯ ಮಹಾನಿರ್ದೇಶಕ ಗಿರೀಶ್ ಕುಮಾರ್ ಒಪ್ಪಂದಕ್ಕೆ ಸಹಿ ಹಾಕಿದರು.
‘ಬೆಂಗಳೂರಿನ ಜಯನಗರ ನಾಲ್ಕನೇ ವಾರ್ಡ್ ಹಾಗೂ ರಾಮನಗರದಲ್ಲಿ ಡ್ರೋನ್ ತಂತ್ರಜ್ಞಾನ ಬಳಸಿ ಪ್ರಾಯೋಗಿಕ ಸಮೀಕ್ಷೆ ನಡೆಸಲಾಗಿತ್ತು. ಇದಕ್ಕೆ ಉತ್ತಮ ಯಶಸ್ಸು ಸಿಕ್ಕಿತ್ತು. ಆರಂಭಿಕ ಹಂತದಲ್ಲಿ ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಜಿಲ್ಲೆ ಹಾಗೂ ಬೆಂಗಳೂರು ನಗರದಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಎರಡು ವರ್ಷಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 2019–20ನೇ ಸಾಲಿನಲ್ಲಿ ವಿಜಯಪುರ, ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಮೈಸೂರು, ಗದಗ, ದಾವಣಗೆರೆ, ಕಲಬುರ್ಗಿ ಜಿಲ್ಲೆಗಳಲ್ಲಿ ಸರ್ವೆ ನಡೆಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದ ಸರ್ವೆ ಕಾರ್ಯಕ್ಕೆ ₹110 ಕೋಟಿ ವೆಚ್ಚವಾಗಲಿದ್ದು, ಅದನ್ನು ಕೇಂದ್ರ ಸರ್ಕಾರ ನೀಡಲಿದೆ. ನಗರ ಪ್ರದೇಶದ 2 ಸಾವಿರ ಚದರ ಕಿ.ಮೀ. ಪ್ರದೇಶದ ಸರ್ವೆಗೆ ₹15 ಕೋಟಿ ವೆಚ್ಚವಾಗಲಿದ್ದು, ಅದನ್ನು ರಾಜ್ಯ ಸರ್ಕಾರ ಭರಿಸಬೇಕಿದೆ’ ಎಂದು ಅವರು ತಿಳಿಸಿದರು.
‘1920ರಲ್ಲಿ ಮರು ಸಮೀಕ್ಷೆ ನಡೆಸಲಾಗಿತ್ತು. 1928ರಿಂದ 1940ರ ವರೆಗೆ ಹಿಸ್ಸಾ ಸರ್ವೆ ಕೈಗೊಳ್ಳಲಾಗಿತ್ತು. 1959ರಿಂದ 1965ರ ವರೆಗೆ ಮರು ವರ್ಗೀಕರಣ ಮಾಡಲಾಗಿತ್ತು. ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಪ್ರಕಾರ, ಪ್ರತಿ 30 ವರ್ಷಗಳಿಗೊಮ್ಮೆ ಮರು ಸರ್ವೆ ಮಾಡಬೇಕಿದೆ. ಆ ಪ್ರಕಾರ, 1996ರಲ್ಲಿ ಮರು ಸರ್ವೆ ಮಾಡಬೇಕಿತ್ತು. ಮರುಸರ್ವೆ ವಿಳಂಬವಾಗಿರುವ
ಕಾರಣ ಆಧುನಿಕ ತಂತ್ರಜ್ಞಾನ ಬಳಸಿ ಮರು ಭೂಮಾಪನ ಮಾಡಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ನೆರವಿನಿಂದ ಭೂಮಾಪನ ಮಾಡಲಾಗುತ್ತಿದೆ’ ಎಂದರು.
ಪ್ರಯೋಜನಗಳು: ಹತ್ತನೇ ಒಂದು ಭಾಗದ ಸಮಯದಲ್ಲಿ ಪ್ರತಿಯೊಂದು ಆಸ್ತಿಯ ಗಣಕೀಕೃತ, ಭೌಗೋಳಿಕ ಉಲ್ಲೇಖ ಆಗಿರುವ, ನಿಖರವಾದ ನಕ್ಷೆ ಸಿದ್ಧಗೊಳ್ಳುತ್ತದೆ.
ಈ ಸರ್ವೆ ಕಾರ್ಯಕ್ಕೆ ಕಡಿಮೆ ಸಮಯ ಸಾಕು. ಜತೆಗೆ, ಸಾಂಪ್ರದಾಯಿಕ ಪದ್ಧತಿಯ ಅಳತೆಗಿಂತ ಕಡಿಮೆ ವೆಚ್ಚದಲ್ಲಿ ನಿರ್ವಹಿಸಬಹುದು.
ಈ ಭೂಮಾಪನ ವಸ್ತುನಿಷ್ಠ ವಾಗಿದ್ದು, ಇದರಲ್ಲಿ ವ್ಯಕ್ತಿಗತವಾದ ಪಕ್ಷಪಾತಕ್ಕಾಗಲಿ, ಯಾವುದೇ ರೀತಿಯ ತೊಂದರೆಗೆ ಅವಕಾಶ ಇರುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.