ADVERTISEMENT

ಸೊರಗುತ್ತಿವೆ ಗೋಶಾಲೆಯ ಜಾನುವಾರುಗಳು

ಬೀದರ್‌ ಜಿಲ್ಲೆಯಲ್ಲಿ ಒಣಮೇವಿಗೂ ಬಂತು ಬರ!

ಚಂದ್ರಕಾಂತ ಮಸಾನಿ
Published 9 ಡಿಸೆಂಬರ್ 2018, 21:00 IST
Last Updated 9 ಡಿಸೆಂಬರ್ 2018, 21:00 IST
   

ಬೀದರ್: ಬೇಸಿಗೆ ಬರಲು ಇನ್ನೂ ಮೂರು ತಿಂಗಳು ಬಾಕಿ ಇವೆ. ಆದರೆ, ಜಿಲ್ಲೆಯಲ್ಲಿ ಬರದ ಛಾಯೆ ತೀವ್ರವಾಗಿ ಕಾಣಿಸಿಕೊಂಡಿದ್ದು ಜಾನುವಾರುಗಳಿಗೆ ಹಸಿಮೇವು ಇರಲಿ, ಒಣಮೇವು ಸಹ ಸಿಗುತ್ತಿಲ್ಲ. ತಿಂಗಳಿಂದ ಸೋಯಾ ಹೊಟ್ಟು, ಕಣಿಕೆ ತಿಂದು ಸೊರಗಿ ಬಡಕಲಾಗಿವೆ.

ಇದು ಒಂದು ಗೋಶಾಲೆಯದಲ್ಲ; ಜಿಲ್ಲೆಯ ನಾಲ್ಕು ಗೋಶಾಲೆಗಳ ಕತೆಯೂ ಹೌದು.

ಔರಾದ್‌ನ ಅಮರೇಶ್ವರ ದೇವಸ್ಥಾನ, ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ, ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನ ಹಾಗೂ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನದ ಗೋಶಾಲೆಗಳು ಸೇರಿ ಒಟ್ಟು 462 ಜಾನುವಾರುಗಳಿವೆ.

ADVERTISEMENT

ಔರಾದ್‌ನ ಹೊರವಲಯದ ಅಮರೇಶ್ವರ ಗೋಶಾಲೆಯಲ್ಲಿ ಮೇವಿನ ಕೊರತೆಯಿಂದ ಜಾನುವಾರುಗಳು ಸೊರಗಿರುವುದು ಕಂಡುಬಂತು.

‘ಗೋಶಾಲೆಯಲ್ಲಿ ಇರುವ ಜಾನುವಾರುಗಳಿಗೆ ನಿತ್ಯ ಒಂದು ಟ್ರ್ಯಾಕ್ಟರ್‌ ಮೇವು ಬೇಕು. ಆದರೆ, ಇಡೀ ಔರಾದ್‌ ತಾಲ್ಲೂಕು ಸುತ್ತಿದರೂ ಒಂದು ಟ್ರ್ಯಾಕ್ಟರ್‌ನಷ್ಟೂ ಹಸಿಮೇವು ಸಿಗುತ್ತಿಲ್ಲ. ನೆರೆಯ ತೆಲಂಗಾಣದಿಂದ ಮೇವು ತರಿಸುತ್ತಿದ್ದೇವೆ. ಮಾರ್ಚ್‌ ವೇಳೆಗೆ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ’ ಎನ್ನುತ್ತಾರೆ ಅಮರೇಶ್ವರ ಗೋಶಾಲೆಯ ಅಧ್ಯಕ್ಷ ಶಿವರಾಜ್‌ ಅಲ್ಮಾಜೆ.

‘ಚಾಂಗಲೇರಾದಲ್ಲೂ ಮೇವಿನ ಕೊರತೆಯಾಗಿದೆ. 168 ಜಾನುವಾರುಗಳಿಗೆ ಮೇವು ಒದಗಿಸುವುದು ಕಷ್ಟವಾಗಿರುವುದರಿಂದ ಅವುಗಳನ್ನು ಮೇಯಿಸಲು ನಾಲ್ಕು ಮಂದಿಯನ್ನು ನೇಮಿಸಲಾಗಿದೆ. ಜಾನುವಾರುಗಳು ಕೆರೆದಂಡೆಯಲ್ಲಿ ಬೆಳೆದ ಹುಲ್ಲು ಮೇಯುತ್ತಿವೆ. ಮೇವು ಬೆಳೆಯಲು 12 ಎಕರೆ ಭೂಮಿ ಇದೆ. ಆದರೆ, ಈ ವರ್ಷ ಆರು ಎಕರೆಯಲ್ಲೂ ಸರಿಯಾಗಿ ಮೇವು ಬೆಳೆದಿಲ್ಲ’ ಎಂದು ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದ ಕಾರ್ಯದರ್ಶಿ ಪ್ರಶಾಂತ ಕೋಟಿ ಅವರು ಸಮಸ್ಯೆ ಕುರಿತು ಬೆಳಕು ಚೆಲ್ಲಿದರು.

‘ಒಂದು ತಿಂಗಳಿಗೆ ಸಾಕಾಗುವಷ್ಟು ಮೇವನ್ನು ಮೊದಲೇ ಸಂಗ್ರಹಿಸಿಕೊಳ್ಳುತ್ತಿದ್ದೇವೆ. ಬೇಸಿಗೆಯಲ್ಲಿ ಸಮಸ್ಯೆ ಆಗುವ ಸಾಧ್ಯತೆ ಇರುವುದರಿಂದ ಕೊಳವೆಬಾವಿಯ ನೀರು ಬಳಸಿ ಐದು ಎಕರೆಯಲ್ಲಿ ಮೇವು ಬೆಳೆಸಲು ನಿರ್ಧರಿಸಿದ್ದೇವೆ’ ಎಂದು ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣ ದೇವಸ್ಥಾನದ ಕಾರ್ಯದರ್ಶಿ ಸಂಜೀವಕುಮಾರ ಸುಂದಾಳ ಹೇಳಿದರು.

ನಿಷೇಧ

‘ಬೇಸಿಗೆಯಲ್ಲಿ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಈಗಾಗಲೇ ₹13.92 ಕೋಟಿ ಅಂದಾಜು ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್‌.ಮಹಾದೇವ ಹೇಳುತ್ತಾರೆ.

‘ಜಿಲ್ಲೆಯಲ್ಲಿ 14 ವಾರಗಳಿಗೆ ಬೇಕಾಗುವಷ್ಟು ಒಣಮೇವು ಲಭ್ಯವಿದೆ ಎಂದು ಪಶು ಸೇವಾ ಇಲಾಖೆ ವರದಿ ನೀಡಿದೆ.

ಅಂಕಿ ಅಂಶ

*ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗೋಶಾಲೆ–162

*ಔರಾದ್‌ನ ಅಮರೇಶ್ವರ ದೇವಸ್ಥಾನದ ಗೋಶಾಲೆ–145

*ಭಾಲ್ಕಿ ತಾಲ್ಲೂಕಿನ ಖಾನಾಪುರದ ಮೈಲಾರ ಮಲ್ಲಣ್ಣ ದೇವಸ್ಥಾನದ ಗೋಶಾಲೆ–110

*ಬೀದರ್ ತಾಲ್ಲೂಕಿನ ಹೊನ್ನಿಕೇರಿ ಸಿದ್ಧೇಶ್ವರ ದೇವಸ್ಥಾನದ ಗೋಶಾಲೆ–45

* ಔರಾದ್‌ನ ಗೋಶಾಲೆಯ ಸಮೀಪ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಕೆರೆಯನ್ನು ದುರಸ್ತಿ ಪಡಿಸಿದರೆ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

- ಶಿವರಾಜ್‌ ಅಲ್ಮಾಜೆ, ಔರಾದ್‌ನ ಅಮರೇಶ್ವರ ಗೋಶಾಲೆಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.