ADVERTISEMENT

‘ಜೀವನೋಪಾಯ’ದ ಜಟಾಪಟಿ

ರಾಜ್ಯ ಸರ್ಕಾರ ಕೇಳಿದ್ದು ₹12,557 ಕೋಟಿ, ಕೇಂದ್ರ ಕೊಟ್ಟಿದ್ದು ₹232 ಕೋಟಿ

ಮಂಜುನಾಥ್ ಹೆಬ್ಬಾರ್‌
Published 13 ಜುಲೈ 2024, 23:40 IST
Last Updated 13 ಜುಲೈ 2024, 23:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಗ್ರಾಮೀಣ ಭಾಗದ ಜನರ ಜೀವನೋಪಾಯಕ್ಕೆ ನೆರವಾಗಲು ₹12,557 ಕೋಟಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರ ಮೊರೆ ಇಟ್ಟಿತ್ತು. ಕೇಂದ್ರ ಸರ್ಕಾರ ₹232 ಕೋಟಿಯನ್ನಷ್ಟೇ ನೀಡಿದೆ. ಇದು ಅತ್ಯಲ್ಪ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಗಾದೆ ಎತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದೊಂದಿಗೆ ಇನ್ನೊಂದು ಸುತ್ತಿನ ಜಟಾಪಟಿಗೆ ಅಣಿಯಾಗಿದೆ. 

ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ, ಬರದಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬದ ಇಬ್ಬರಿಗೆ ಜೀವನೋಪಾಯಕ್ಕಾಗಿ ಪರಿಹಾರ ನೀಡಲು ಅವಕಾಶ ಇದೆ. ರಾಜ್ಯ ಸರ್ಕಾರವು ಕುಟುಂಬದ ಒಬ್ಬ ವ್ಯಕ್ತಿಗೆ 90 ದಿನಗಳ ಮಟ್ಟಿಗೆ ಪರಿಹಾರ ನೀಡಲು ಉದ್ದೇಶಿಸಿದೆ. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ₹12,577 ಕೋಟಿ ಪರಿಹಾರ ಕೋರಿತ್ತು. ಈ ವಿಷಯವನ್ನು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಚಿಕ್ಕಾಸನ್ನು ಪರಿಹಾರವಾಗಿ ನೀಡಲಾಗಿದೆ ಎಂದು ರಾಜ್ಯ ಆಕ್ಷೇಪ ವ್ಯಕ್ತಪಡಿಸಿದೆ. ಈ ಸಂಬಂಧ ವಕೀಲ ಡಿ.ಎಲ್‌.ಚಿದಾನಂದ ಮೂಲಕ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. 

ADVERTISEMENT

ರಾಜ್ಯದ ಕೃಷಿ ವಲಯವು ಜಿಎಸ್‌ಡಿಪಿಗೆ ಶೇ 15ರಷ್ಟು ಕೊಡುಗೆ ಕೊಡುತ್ತಿದೆ. ರಾಜ್ಯದ ಶೇ 41ರಷ್ಟು ಜನರು ಈ ವಲಯದಲ್ಲಿ ತೊಡಗಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಜೀವನೋಪಾಯಕ್ಕಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅವರೆಲ್ಲ ಸಣ್ಣ ಹಾಗೂ ಮಧ್ಯಮ ಕೃಷಿಕರು. ಬರದಿಂದಾಗಿ ಕೃಷಿ ನಾಶವಾಗಿ ಅವರ ಬದುಕು ದುರ್ಬರವಾಗಿದೆ. ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡುವುದು ತುರ್ತು ಅಗತ್ಯ. ಬಾಧಿತ ರೈತರ ಕುರಿತು ವೈಜ್ಞಾನಿಕವಾಗಿ ದತ್ತಾಂಶಗಳನ್ನು ಕಲೆ ಹಾಕಿ ಪ್ರಸ್ತಾವ ಸಲ್ಲಿಸಲಾಗಿತ್ತು. ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡುವ ₹265 ಕೂಲಿ ಪ್ರಕಾರ ಜೀವನೋಪಾಯಕ್ಕೆ ನೆರವು ನೀಡುವಂತೆ ಮನವಿ ಮಾಡಲಾಗಿತ್ತು. ಒಟ್ಟು ₹50 ಲಕ್ಷ ರೈತರಿಗೆ ಜೀವನೋಪಾಯಕ್ಕೆ ನೆರವಾಗಲು ಉದ್ದೇಶಿಸಲಾಗಿತ್ತು. ಕೇಂದ್ರದ ಅವೈಜ್ಞಾನಿಕ ಲೆಕ್ಕಾಚಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಕುಡಿಯುವ ನೀರಿಗೆ ನೆರವು ಶೂನ್ಯ

ಬರ ಪೀಡಿತ ಪ್ರದೇಶದ ಜನರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಜಾನುವಾರುಗಳ ಸಂರಕ್ಷಣೆಗೆ ಎನ್‌ಡಿಆರ್‌ಎಫ್‌ ಅಡಿಯಲ್ಲಿ ಯಾವುದೇ ಮೊತ್ತವನ್ನು ಕೇಂದ್ರದ ತಂಡದ ವರದಿಯಲ್ಲಿ ಶಿಫಾರಸು ಮಾಡಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. 

ರಾಜ್ಯದಲ್ಲಿ ಕಳೆದ ವರ್ಷ ಶೇ 38ರಷ್ಟು ಮಳೆ ಕೊರತೆಯಾಗಿತ್ತು. ಬರದ ಪರಿಣಾಮ ಈ ವರ್ಷದ ಜೂನ್‌ವರೆಗೂ ಇತ್ತು. ಏ‍ಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಬರ ಪರಿಸ್ಥಿತಿ ಬಿಗಡಾಯಿಸಿತ್ತು. ಕೊಳವೆಬಾವಿ ಹಾಗೂ ಟ್ಯಾಂಕರ್‌ಗಳ ಮೂಲಕ 2,468 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲಾಗಿದೆ. 21,314 ಗೋವುಗಳ ಸಂರಕ್ಷಣೆಗೆ 29 ಗೋಶಾಲೆ‌ಗಳನ್ನು ಹಾಗೂ 66 ಮೇವಿನ ಶಿಬಿರಗಳನ್ನು ತೆರೆಯಲಾಗಿತ್ತು. ಆದರೆ, ಕೇಂದ್ರದ ತಂಡವು ರಾಜ್ಯದ ಮನವಿಯನ್ನು ಪುರಸ್ಕರಿಸಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರಮಾಣಪತ್ರದಲ್ಲಿ ದೂರಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.