ADVERTISEMENT

ಬರ ಪರಿಹಾರ ಅತ್ಯಲ್ಪ: ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ವಾದ

ತಜ್ಞರ ಸಮಿತಿ ವರದಿ ಸಲ್ಲಿಕೆಗೆ ನ್ಯಾಯಪೀಠ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 0:32 IST
Last Updated 30 ಏಪ್ರಿಲ್ 2024, 0:32 IST
   

ನವದೆಹಲಿ: ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ₹3,454 ಕೋಟಿ ಮೊತ್ತವು ಕೇಳಿದ್ದಕ್ಕಿಂತ ತೀರಾ ಕಡಿಮೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಾದಿಸಿದೆ.

ಬರ ನಿರ್ವಹಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್‌ಡಿಆರ್‌ಎಫ್‌) ಹಣಕಾಸು ನೆರವು ನೀಡುವಂತೆ ಕೇಂದ್ರಕ್ಕೆ ಸೂಚಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ  ಬಿ.ಆರ್‌.ಗವಾಯಿ ಹಾಗೂ ಸಂದೀಪ್‌ ಮೆಹ್ತಾ ಅವರಿದ್ದ ಪೀಠ ನಡೆಸುತ್ತಿದೆ. ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಪರ ವಕೀಲ ಕಪಿಲ್ ಸಿಬಲ್‌, ಅಂತರ್ ಸಚಿವಾಲಯದ ವರದಿಯ ಪ್ರತಿ ಸಲ್ಲಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು. ಈ ಸಂಬಂಧ ಕೇಂದ್ರಕ್ಕೆ ನಿರ್ದೇಶನ ನೀಡಿರುವ ಪೀಠವು ವಿಚಾರಣೆಯನ್ನು ಸೋಮವಾರಕ್ಕೆ (ಮೇ 6) ಮುಂದೂಡಿದೆ. 

ಕಳೆದ ಸೋಮವಾರದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ, ‘ಪರಿಹಾರ ನೀಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ತ್ವರಿತವಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ವಾಗ್ದಾನ ಮಾಡಿದ್ದರು. ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡುವಂತೆ ಕೋರಿದ್ದರು. ರಾಜ್ಯಕ್ಕೆ ₹3,454 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವು ಶನಿವಾರ ಘೋಷಿಸಿತ್ತು. 

ADVERTISEMENT

ನ್ಯಾಯಾಲಯದಲ್ಲಿ ಏನಾಯಿತು?

• ಬರ ಪರಿಹಾರದ ರೂಪದಲ್ಲಿ ಕರ್ನಾಟಕಕ್ಕೆ ಈಗಾಗಲೇ ₹3,400 ಕೋಟಿ ಬಿಡುಗಡೆ ಮಾಡಲಾಗಿದೆ–ಆರ್.ವೆಂಕಟರಮಣಿ, ಅಟಾರ್ನಿ ಜನರಲ್‌

ಕೇಂದ್ರ ಸರ್ಕಾರ ಕೊನೆಗೂ ಬರ ಪರಿಹಾರ ಬಿಡುಗಡೆ ಮಾಡಿದೆ. ಅದಕ್ಕಾಗಿ ಧನ್ಯವಾದಗಳು. ಆದರೆ, ರಾಜ್ಯ ಸರ್ಕಾರವು ₹18,000 ಕೋಟಿ ಪರಿಹಾರ ಕೇಳಿತ್ತು. ಬಿಡುಗಡೆ ಮಾಡಿರುವುದು ಬಹಳ ಕಡಿಮೆ. ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಜೀವನೋಪಾಯಕ್ಕೆ ₹12,577 ಕೋಟಿ ಪರಿಹಾರ ಕೋರಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಜೀವನೋ ಪಾಯಕ್ಕೆ ಪರಿಹಾರ ನೀಡಲು ಅವಕಾಶ ಇದೆ. ಅದನ್ನು ಪರಿಗಣಿಸಿಲ್ಲ

ಕಪಿಲ್ ಸಿಬಲ್‌, ಕರ್ನಾಟಕ ಸರ್ಕಾರದ ಪರ ವಕೀಲ 

• ಕೇಂದ್ರ ಸರ್ಕಾರ ನೇಮಿಸಿದ ಅಂತರ್ ಸಚಿವಾಲಯದ ತಜ್ಞರ ಸಮಿತಿಯು ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಿತ್ತು. ಆ ವರದಿಯ ಆಧಾರದಲ್ಲಿ ಸಚಿವರ ಸಮಿತಿಯು ಪರಿಹಾರ ಘೋಷಣೆ ಮಾಡಿದೆ– ಆರ್‌.ವೆಂಕಟರಮಣಿ

ತಜ್ಞರ ಸಮಿತಿಯ ವರದಿಯಲ್ಲಿ ಏನಿದೆ ಎಂಬುದು ರಾಜ್ಯ ಸರ್ಕಾರಕ್ಕೆ ತಿಳಿದಿಲ್ಲ. ಅದರ ಪ್ರತಿಯನ್ನು ರಾಜ್ಯಕ್ಕೆ ನೀಡಿಲ್ಲ. ವರದಿಯ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅದಕ್ಕೆ ಅನುಗುಣವಾಗಿ, ಏನು ನಿರ್ಧರಿಸಿದರೂ ನಮಗೆ ತೊಂದರೆ ಇಲ್ಲ

ಕಪಿಲ್ ಸಿಬಲ್‌

ತಜ್ಞರ ಸಮಿತಿಯ ಶಿಫಾರಸಿನ ಆಧಾರದಲ್ಲಿ ಸಚಿವರ ಉನ್ನತಾಧಿಕಾರ ಸಮಿತಿಯು ಪರಿಹಾರ ಘೋಷಣೆ ಮಾಡಿದೆ. ತಜ್ಞರ ಸಮಿತಿ ವರದಿಯ ಪ್ರತಿ ಸಲ್ಲಿಸಲು ಕಾಲಾವಕಾಶ ನೀಡಬೇಕು– ಆರ್.ವೆಂಕಟರಮಣಿ

ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಮುಂದಿನ ಸೋಮವಾರದೊಳಗೆ ವರದಿ ಪ್ರತಿ ಸಲ್ಲಿಸಬೇಕು

ನ್ಯಾಯಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.