ADVERTISEMENT

ಬರ ಪರಿಹಾರ: ಕೇಂದ್ರದ ಮೇಲೆ ಗೂಬೆ ಕೂರಿಸಲು ಕಾಂಗ್ರೆಸ್‌ ಯತ್ನ- ಬಿ.ವೈ.ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 10:59 IST
Last Updated 24 ಏಪ್ರಿಲ್ 2024, 10:59 IST
<div class="paragraphs"><p>ಬಿ.ವೈ.ವಿಜಯೇಂದ್ರ</p></div>

ಬಿ.ವೈ.ವಿಜಯೇಂದ್ರ

   

ಶಿವಮೊಗ್ಗ: ’ರಾಜ್ಯದಲ್ಲಿ ಖಜಾನೆ ಸಂಪೂರ್ಣ ಖಾಲಿಯಾಗಿದೆ. ರೈತರಿಗೆ ಕೊಡಲು ಸರ್ಕಾರದ ಬಳಿ ಹಣ ಇಲ್ಲ. ಹೀಗಾಗಿ ಬರ ಪರಿಹಾರ ನೀಡಿಕೆ ವಿಚಾರದಲ್ಲಿ ಕೇಂದ್ರವನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಖಜಾನೆ ಬರಿದಾಗಿರುವ ಕಾರಣ ಪರಿಶಿಷ್ಟರ ಪಾಲಿನ ಎಸ್‌ಇಪಿ, ಟಿಎಸ್‌ಪಿ ಹಣವನ್ನು ರಾಜ್ಯ ಸರ್ಕಾರ, ಬೇರೆ ಯೋಜನೆಗೆ ವರ್ಗಾವಣೆ ಮಾಡಿಕೊಂಡಿದೆ. ರೈತರಿಗೆ ಬರ ಪರಿಹಾರ ಕೊಡಲು ಹಣ ಇಲ್ಲ. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಹಣ ಇರುವುದಿಲ್ಲ‘ ಎಂದು ಭವಿಷ್ಯ ನುಡಿದರು.

ADVERTISEMENT

ರೈತರಿಗೆ ಬರ ಪರಿಹಾರ ಕೊಡೊಲ್ಲ ಎಂದು ಕೇಂದ್ರ ಸರ್ಕಾರ ಯಾವತ್ತೂ ಹೇಳಿಲ್ಲ. ಪರಿಹಾರ ಬಿಡುಗಡೆಗೆ ಅದರದ್ದೇ ಆದ ಮಾನದಂಡ ಇದೆ. ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ತಡವಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಕೇಂದ್ರದಿಂದ ನೆರೆ ಪರಿಹಾರದ ವಿತರಣೆ ವಿಳಂಬವಾಗಿತ್ತು. ಆಗಲೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದ್ದರೂ ತಡ ಆಗಿತ್ತು. ಯಡಿಯೂರಪ್ಪ ಆಗ ಕೇಂದ್ರದ ನೆರವಿಗೆ ಕಾಯದೇ ರಾಜ್ಯದ ಖಜಾನೆಯಿಂದಲೇ ಸಂತ್ರಸ್ತರಿಗೆ ಪರಿಹಾರ ಕೊಟ್ಟಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹10 ಸಾವಿರ ಕೋಟಿ ಕೊಡುವುದಾಗಿ ಹೇಳಿ ಸಿದ್ದರಾಮಯ್ಯ ತಕ್ಷಣ ₹2 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ. ಆದರೆ ರೈತರಿಗೆ ಬರ ಪರಿಹಾರ ಕೊಡಲು ಯಾಕೆ ಮೀನಾಮೇಷ ಎಣಿಸುತ್ತಿದ್ದಾರೆ. ಅದರಲ್ಲೂ ರಾಜಕಾರಣ ಮಾಡುವ ಪ್ರಯತ್ನ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಅಲ್ಪಸಂಖ್ಯಾತರ ಅಭಿವೃದ್ಧಿಗೆ ತೋರುತ್ತಿರುವ ಉತ್ಸಾಹವನ್ನು ಸಿದ್ದರಾಮಯ್ಯ ಸಂಕಷ್ಟದಲ್ಲಿರುವ ರೈತರ ವಿಚಾರದಲ್ಲೂ ತೋರಿಸಬಹುದಿತ್ತು. ಅವರಿಗೆ ಪರಿಹಾರ ಕೊಡಬಹುದಿತ್ತು. ರಾಜ್ಯ ಸರ್ಕಾರ ರೈತರ ಬಗ್ಗೆ ಅಸಡ್ಡೆ ಭಾವನೆಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.

’ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರ ಕೊಡುವುದಾಗಿ ಸ್ವಯಂಪ್ರೇರಿತವಾಗಿ ಅಫಿಡವಿಟ್ ಸಲ್ಲಿಸಿದೆಯೇ ಹೊರತು ರಾಜ್ಯ ಸರ್ಕಾರದ ಒತ್ತಡದ ಕಾರಣಕ್ಕೆ ಅಲ್ಲ‘ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.