ನವದೆಹಲಿ: ಬರ ಪರಿಹಾರ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಪ್ರಮಾಣಪತ್ರ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯಕ್ಕೆ ಪರಿಹಾರ ರೂಪದಲ್ಲಿ ₹3,454 ಕೋಟಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವು ಕೇಳಿದ್ದಕ್ಕಿಂತ ತೀರಾ ಕಡಿಮೆ ಎಂದು ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠವು ವಿಚಾರಣೆಯನ್ನು ನಾಲ್ಕು ವಾರಗಳ ಕಾಲ ಮುಂದೂಡಿದೆ.
‘ಈಗಾಗಲೇ ಬರ ಪರಿಹಾರ ಬಿಡುಗಡೆ ಮಾಡಿದೆಯೆಂದು ಕೇಂದ್ರ ಸರ್ಕಾರ ಹೇಳಿದೆಯಲ್ಲ’ ಎಂದು ಗವಾಯಿ ಅವರು ಕರ್ನಾಟಕ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ ಹಾಗೂ ಡಿ.ಎಲ್.ಚಿದಾನಂದ ಅವರನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ‘ಬರ ಪರಿಹಾರ ಬಿಡುಗಡೆಯಾಗಿದೆ. ಆದರೆ, ಕುಡಿಯುವ ನೀರು ಸೇರಿದಂತೆ ಕೆಲವು ವಲಯಗಳಲ್ಲಿ ಹಣ ನೀಡಿಲ್ಲ. ಜತೆಗೆ ಎನ್‌ಡಿಆರ್‌ಎಫ್ ನಿಯಮಗಳಲ್ಲಿ ಮಾರ್ಪಾಡು ಆಗಬೇಕಿದೆ’ ಎಂದರು.
‘ಕರ್ನಾಟಕ ಸರ್ಕಾರ ಈಗಾಗಲೇ ಪ್ರಮಾಣಪತ್ರ ಸಲ್ಲಿಸಿದೆ. ಇದಕ್ಕೆ ಸ್ಪಷ್ಟನೆ ನೀಡಲು ಹಾಗೂ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಬೇಕು’ ಎಂದು ಕೇಂದ್ರದ ಪರ ವಕೀಲರು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.