ADVERTISEMENT

ಉದ್ಯಮ ವೃದ್ಧಿಗೆ ನಡೆಯುತ್ತಿತ್ತು ಡ್ರಗ್ಸ್ ಪಾರ್ಟಿ; ನಟಿ ರಾಗಿಣಿ ವಿಶೇಷ ಅತಿಥಿ

ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣ: ಸಿಸಿಬಿ ತನಿಖೆಯಲ್ಲಿ ಬಹಿರಂಗ

ಸಂತೋಷ ಜಿಗಳಿಕೊಪ್ಪ
Published 28 ಆಗಸ್ಟ್ 2021, 1:44 IST
Last Updated 28 ಆಗಸ್ಟ್ 2021, 1:44 IST
ಶಿವಪ್ರಕಾಶ್
ಶಿವಪ್ರಕಾಶ್   

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದಲ್ಲಿ ಒಂದನೇ ಆರೋಪಿ (ಎ1) ಆಗಿರುವ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ, ತನ್ನ ಕಲ್ಲುಕ್ವಾರಿ ವ್ಯವಹಾರ ಹಾಗೂ ರಿಯಲ್ ಎಸ್ಟೇಟ್‌ ಉದ್ಯಮ ವೃದ್ಧಿಗಾಗಿ ‘ಡ್ರಗ್ಸ್ ಪಾರ್ಟಿ’ಗಳನ್ನು ಆಯೋಜಿಸುತ್ತಿದ್ದ. ಗೆಳತಿ, ನಟಿ ರಾಗಿಣಿ ದ್ವಿವೇದಿಯನ್ನು ಪ್ರತಿಯೊಂದು ಪಾರ್ಟಿಗೂ ‘ವಿಶೇಷ ಅತಿಥಿ’ ಆಗಿ ಕರೆಸುತ್ತಿದ್ದ. ಅದೇ ಪಾರ್ಟಿಯಲ್ಲೇ ಡ್ರಗ್ಸ್ ದಂಧೆ ಜೋರಾಗಿತ್ತು ಎಂದು ಸಿಸಿಬಿ ಹೇಳಿದೆ.

ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಡ್ರಗ್ಸ್ ದಂಧೆ ಆರಂಭವಾದ ಬಗ್ಗೆ ಉಲ್ಲೇಖಿಸಲಾಗಿದೆ.

‘ಉದ್ಯಮ ವೃದ್ಧಿಗೆ ಸಹಾಯ ಮಾಡುವ ಉದ್ಯಮಿಗಳು, ವ್ಯಾಪಾರಿಗಳು, ಮಧ್ಯವರ್ತಿಗಳು ಹಾಗೂ ಇತರರನ್ನು ಪರಿಚಯಿಸಿಕೊಂಡಿದ್ದ ಶಿವಪ್ರಕಾಶ್, ಅವರಿಗೆಲ್ಲ ತಿಂಗಳಿಗೊಮ್ಮೆ ಪಾರ್ಟಿ ಕೊಡುತ್ತಿದ್ದ. ಬೆಂಗಳೂರಿನ ಲಲಿತ್‌ ಅಶೋಕ ಹೋಟೆಲ್‌ನ ಕೊನೆಯ ಮಹಡಿಯಲ್ಲಿರುವ ‘ಕಿಟ್ಟಿಕೊ’ ರೆಸ್ಟೊರೆಂಟ್, ರೇಸ್‌ಕೋರ್ಸ್‌ ಬಳಿಯ ‘ಪೆಬನ್ಸ್ ಬಾರ್’, ರೆಸಿಡೆನ್ಸಿ ರಸ್ತೆಯ ರಿಡ್ಜ್ ಕಾರ್ಲ್‌ಟನ್‌ನಲ್ಲಿರುವ ‘ಬ್ಯಾಂಕ್ ಆ್ಯಂಡ್ ಲಾಂಜ್’ ಬಾರ್ ಹಾಗೂ ಬ್ರಿಗೇಡ್ ರಸ್ತೆಯ ಶೂಲೆ ವೃತ್ತ ಬಳಿಯ ’ಒಲಿವ್’ ಬಾರ್‌ನಲ್ಲಿ ಪಾರ್ಟಿ ಆಯೋಜಿಸಿದ್ದ ಬಗ್ಗೆ ದಾಖಲೆಗಳು ಸಿಕ್ಕಿವೆ’ ಎಂಬುದನ್ನು ಪಟ್ಟಿಯಲ್ಲಿ ತಿಳಿಸಲಾಗಿದೆ.

ADVERTISEMENT

’ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಾಗಿಣಿಯ ಸ್ನೇಹ ಬೆಳೆಸಿದ್ದ ಆರೋಪಿ, ಆಕೆಯನ್ನು ಪಾರ್ಟಿಯ ಅತಿಥಿಯಾಗಿ ಆಹ್ವಾನಿಸುತ್ತಿದ್ದ. ‍ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರತಿಯೊಬ್ಬರಿಗೂ ಆಕೆಯನ್ನು ಪರಿಚಯ ಮಾಡಿಕೊಟ್ಟು, ಉದ್ಯಮ ವೃದ್ಧಿಗೆ ಸಹಕರಿಸುವಂತೆ ಕೋರುತ್ತಿದ್ದ. ಅದೇ ಪಾರ್ಟಿಯಲ್ಲಿ ಎಕ್ಸೈಟೆಸ್ಟಿ ಡ್ರಗ್ಸ್ ಮಾತ್ರೆಗಳನ್ನು ಸರಬರಾಜು ಮಾಡಲಾಗುತ್ತಿತ್ತು. ಶಿವಪ್ರಕಾಶ್ ಹಾಗೂ ರಾಗಿಣಿ ಸಹ ಮಾತ್ರೆ ತೆಗೆದುಕೊಳ್ಳುತ್ತಿದ್ದರು.’

‘ದಾಬಸ್‌ಪೇಟೆಯ ಶಿವಗಂಗೆ ರಸ್ತೆಯಲ್ಲಿರುವ ತನ್ನ ಒಡೆತನದ ‘ಶಿವಾಸ್’ ಫಾರ್ಮ್‌ಹೌಸ್‌ನಲ್ಲೂ ಶಿವಪ್ರಕಾಶ್ ಹಲವು ಬಾರಿ ಪಾರ್ಟಿ ಆಯೋಜಿಸಿದ್ದ. ರಿಯಲ್ ಎಸ್ಟೇಟ್ ಉದ್ಯಮಿಗಳು, ಏಜೆಂಟರು ಹಾಗೂ ಶ್ರೀಮಂತರ ಮಕ್ಕಳನ್ನು ಪಾರ್ಟಿಗೆ ಕರೆಸುತ್ತಿದ್ದ. ಪ್ರತಿ ಗ್ರಾಂಗೆ ₹ 5,000 ಬೆಲೆಯಲ್ಲಿ ಕೊಕೇನ್ ಡ್ರಗ್ಸ್ ಮಾರುತ್ತಿದ್ದ. ರಾಗಿಣಿ ಸಹ ಅದಕ್ಕೆ ಸಹಕರಿಸುತ್ತಿದ್ದಳು. ನೈಜೀರಿಯಾ ಪ್ರಜೆಗಳೇ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಫಾರ್ಮ್‌ಹೌಸ್‌ನ ಶೌಚಾಲಯದಲ್ಲೂ ಕೆಲವರು ಡ್ರಗ್ಸ್ ಸೇವಿಸಿದ್ದರು’ ಎಂಬ ಅಂಶವೂ ಆರೋಪ ಪಟ್ಟಿಯಲ್ಲಿದೆ.

ಮೂಗಿನಲ್ಲಿ ಕೊಕೇನ್ ಎಳೆಯುತ್ತಿದ್ದರು: ‘ರಾಗಿಣಿಯ ಮತ್ತೊಬ್ಬ ಸ್ನೇಹಿತನಾದ ಸಾರಿಗೆ ಇಲಾಖೆ ನೌಕರ ಬಿ.ಕೆ. ರವಿಶಂಕರ್ ಸಹ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ. ಇಬ್ಬರೂ ಮೂಗಿನ ಮೂಲಕ ಕೊಕೇನ್ ಪೌಡರ್‌ ಎಳೆದು ನಶೆ ಏರಿಸಿಕೊಳ್ಳುತ್ತಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

‘ಕಾರು ಚಾಲಕನನ್ನು ನೈಜೀರಿಯಾ ಪ್ರಜೆ ಬಳಿ ಕಳುಹಿಸಿ ಕೊಕೇನ್‌ ಪಾರ್ಸೆಲ್ ತರಿಸುತ್ತಿದ್ದ ರಾಗಿಣಿ, ಮನೆಯಲ್ಲೇ ಹಲವು
ಬಾರಿ ಡ್ರಗ್ಸ್ ಸೇವಿಸಿದ್ದಳು. ತಟ್ಟೆಯಲ್ಲಿ ಕೊಕೇನ್ ಪೌಡರ್ ಹಾಕಿ, ಎಟಿಎಂ ಕಾರ್ಡ್‌ನಿಂದ ಉಜ್ಜಿ ಎರಡು ಭಾಗ ಮಾಡುತ್ತಿದ್ದಳು. ₹ 100 ಮುಖಬೆಲೆಯ ನೋಟನ್ನು ಸುರುಳಿ ಸುತ್ತಿ ಅದರ ಮೂಲಕ ಮೂಗಿನಲ್ಲಿ ಕೊಕೇನ್ ಎಳೆಯುತ್ತಿದ್ದಳು’ ಎಂಬುದನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.

‘ಡ್ರಗ್ಸ್ ಮಾರಾಟಕ್ಕೆ ಹುಟ್ಟುಹಬ್ಬ ನೆಪ’

‘ಗ್ರಾಹಕರನ್ನು ಒಂದೆಡೆ ಸೇರಿಸಿ ಡ್ರಗ್ಸ್ ಮಾರಾಟ ಮಾಡುವ ಉದ್ದೇಶದಿಂದ ಕೆಲ ಆರೋಪಿಗಳು, ಒಂದೇ ವರ್ಷದಲ್ಲಿ ಐದಕ್ಕೂ ಹೆಚ್ಚು ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. 2019ರ ಮೇ 26ರಂದು ’1 ಕ್ಯೂ 1’ ಪಬ್‌ನಲ್ಲಿ ನಟಿ ರಾಗಿಣಿ ತನ್ನ ಹುಟ್ಟುಹಬ್ಬ ಪಾರ್ಟಿ ಆಯೋಜಿಸಿದ್ದಳು' ಎಂಬ ಸಂಗತಿ ಆರೋಪ ಪಟ್ಟಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.