ಕಲಬುರ್ಗಿ: ‘ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಮ್ಮ ಪುತ್ರ ಡಾ.ಅವಿನಾಶ ಜಾಧವ ಅವರ ಹೆಸರನ್ನೇ ಬಿಜೆಪಿ ಹೈಕಮಾಂಡ್ ಶಿಫಾರಸು ಮಾಡಿದೆ. ಸೋಮವಾರ (ಏ. 29) ನಾಮಪತ್ರ ಸಲ್ಲಿಸಲಾಗುವುದು’ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ತಿಳಿಸಿದ್ದಾರೆ.
‘ಹಿರಿಯ ಸಹೋದರ ರಾಮಚಂದ್ರ ಜಾಧವ ಅವರ ಆರೋಗ್ಯ ಸರಿ ಇಲ್ಲ. ಹಾಗಾಗಿ, ಅವರು ಸ್ಪರ್ಧಿಸುತ್ತಿಲ್ಲ. ಕ್ಷೇತ್ರದ ಜನರ ಅನಿಸಿಕೆ ಕೂಡ ಡಾ.ಅವಿನಾಶ ಅವರನ್ನೇ ಕಣಕ್ಕಿಳಿಸಬೇಕು ಎಂಬುದಾಗಿದೆ. ಹಾಗಾಗಿ, ಟಿಕೆಟ್ ವಿಚಾರದಲ್ಲಿ ನಮ್ಮ ಕುಟುಂಬ ಒಮ್ಮತದ ನಿರ್ಧಾರ ಕೈಗೊಂಡಿದೆ’ ಎಂದು ಅವರು ಶನಿವಾರ ಮಾಧ್ಯಮದವರಿಗೆ ತಿಳಿಸಿದರು.
‘ಮಾಜಿ ಸಚಿವ ಸುನಿಲ್ ವಲ್ಲ್ಯಾಪುರ ಒಳ್ಳೆಯ ವ್ಯಕ್ತಿ. ಅವರೂ ನಮ್ಮೊಂದಿಗೆ ಇದ್ದಾರೆ. ಉಪ ಚುನಾವಣೆಯಲ್ಲಿ ಹೇಗೆ ಗೆಲುವು ಸಾಧಿಸಬೇಕು ಎಂಬ ಬಗ್ಗೆ ಅವರು ಸಭೆಗಳನ್ನು ನಡೆಸುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಗುಲಬರ್ಗಾ ಲೋಕಸಭಾ ಮತದಾನ ನ್ಯಾಯಸಮ್ಮತವಾಗಿ ನಡೆದಿಲ್ಲ. ಮತದಾನ ವೇಳೆ ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೂತ್‌ಗಳಲ್ಲಿ ಕೇವಲ ಒಬ್ಬ ಕಾನ್‌ಸ್ಟೆಬಲ್ ಹಾಗೂ ಒಬ್ಬ ಹೋಮ್‌ಗಾರ್ಡ್ ನಿಯೋಜಿಸಿದ್ದರು. ಇದರಿಂದ ಅಕ್ರಮಕ್ಕೆ ದಾರಿ ಮಾಡಿ ಕೊಟ್ಟಂತಾಯಿತು’ ಎಂದು ಉಮೇಶ ಜಾಧವ ದೂರಿದರು.
‘ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲವು ಪಿಎಸ್‌ಐಗಳು ತಮ್ಮ ವಾಹನದಲ್ಲೇ ದುಡ್ಡು ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಂಥವರನ್ನು ವರ್ಗಾವಣೆ ಮಾಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಅವರು ಸ್ಪಂದಿಸಲಿಲ್ಲ. ಇದು ಕೂಡ ಅಕ್ರಮಕ್ಕೆ ಅನುವು ಮಾಡಿಕೊಟ್ಟಿತು. ಅವರ ಇಷ್ಟೆಲ್ಲ ಅಡ್ಡ ಕಸರತ್ತುಗಳ ಮೇಲೂ ನಾನು ಗೆಲ್ಲುತ್ತೇನೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
* ಚಿಂಚೋಳಿಯನ್ನು ದತ್ತು ಪಡೆಯುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಅವರಿಗೆ ಧೈರ್ಯವಿದ್ದರೆ ಉಪ ಚುನಾವಣೆಯಲ್ಲಿ ನಮ್ಮ ಪುತ್ರನ ವಿರುದ್ಧ ಬಂದು ಸ್ಪರ್ಧಿಸಲಿ
–ಡಾ.ಉಮೇಶ ಜಾಧವ,ಗುಲಬರ್ಗಾ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.