ADVERTISEMENT

ರಾಜ್ಯದಲ್ಲಿ ಒಣಹವೆ: ಜನವರಿವರೆಗೆ ಹೆಚ್ಚು ಚಳಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 19:31 IST
Last Updated 12 ಡಿಸೆಂಬರ್ 2020, 19:31 IST

ಬೆಂಗಳೂರು: ‘ರಾಜ್ಯದಲ್ಲಿ ಒಣಹವೆ ಮುಂದುವರಿದಿರುವ ಪರಿಣಾಮ ಚಳಿ ದಿಢೀರ್ ತೀವ್ರಗೊಂಡಿದೆ. ಈ ಸ್ಥಿತಿ ಜನವರಿ 14ರವರೆಗೂ ಮುಂದುವರಿಯಲಿದೆ’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬುರೇವಿ’ ಚಂಡಮಾರುತದ ಪ್ರಭಾವದಿಂದ ರಾಜ್ಯದಾದ್ಯಂತ ಕಳೆದ ವಾರ ಮೋಡ ಆವರಿಸಿತ್ತು. ಆಗ ಚಳಿ ತುಸು ಕಡಿಮೆಯಾಗಿತ್ತು. ಈ ವಾರ ಒಣಹವೆಯೊಂದಿಗೆ ಆಕಾಶ ಶುಭ್ರಗೊಂಡಿರುವುದರಿಂದ ಚಳಿ ಬೇಗನೆ ಆವರಿಸಿಕೊಳ್ಳುತ್ತಿದೆ’ ಎಂದು ವಿವರಿಸಿದರು.

‘ಮೋಡಗಳ ಅಡೆತಡೆ ಇಲ್ಲದಿರುವುದರಿಂದ ಭೂಮಿಗೆ ಚಳಿ ನೇರವಾಗಿ ತಟ್ಟುತ್ತಿದೆ. ರಾತ್ರಿವೇಳೆ ಏರುತ್ತಿದ್ದ ಚಳಿ ಈಗ ಸಂಜೆಯಿಂದಲೇ ಆರಂಭಗೊಳ್ಳುತ್ತಿದೆ. ಸಂಜೆ ವೇಳೆ ಇಬ್ಬನಿ ಶುರುವಾಗುತ್ತಿದ್ದು, ಸೂರ್ಯೋದಯದ ಬಳಿಕ ಎರಡು ಗಂಟೆಗಳವರೆಗೂ ಮಂಜು ಆವರಿಸುತ್ತಿದೆ’ ಎಂದವರು ತಿಳಿಸಿದರು.

ADVERTISEMENT

‘ದಟ್ಟ ಮಂಜು ಆವರಿಸಿಕೊಳ್ಳುತ್ತಿರುವುದರಿಂದ ವಿಮಾನಗಳ ಹಾರಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆಗಳಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಚಳಿಗಾಲದಲ್ಲಿ ಪ್ರತಿವರ್ಷವೂ ಈ ವೈಪರೀತ್ಯಗಳು ಸಾಮಾನ್ಯ. ಆದರೆ, ಈ ಸಲ ಚಳಿ ಪ್ರಮಾಣ ಹೆಚ್ಚಾಗಿದೆ. ಜನವರಿ ಮೊದಲ ವಾರದಲ್ಲಿ ಉತ್ತರ ದಿಕ್ಕಿನಿಂದ ಗಾಳಿ ಬೀಸಲಿದ್ದು, ಚಳಿ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದರು.

ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಮೂರು ದಿನಗಳಿಂದ ಕನಿಷ್ಠ 8 ಡಿಗ್ರಿ ಸೆಲ್ಸಿಯಸ್‍ವರೆಗೆ ತಾಪಮಾನ ಕುಸಿದಿತ್ತು. ಬೀದರ್‌ನಲ್ಲಿ ಶನಿವಾರ 12.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಹಾಗೂ ಹೊನ್ನಾವರ, ಕಾರವಾರದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.