ಶಿವಮೊಗ್ಗ: ಅನೇಕ ದಶಕಗಳಿಂದ ವಿಮರ್ಶೆ, ವಿಶ್ಲೇಷಣೆ, ವಾದ–ಪ್ರತಿವಾದ ಹಾಗೂ ಜಗಳಗಳ ಮೂಲಕ ಕನ್ನಡದ ನೈತಿಕ ಪ್ರಜ್ಞೆಯನ್ನು ಹಸನಾಗಿಡಲು ದಣಿವಿಲ್ಲದೆ ದುಡಿದ ಡಿ.ಎಸ್. ನಾಗಭೂಷಣರು ಇನ್ನಿಲ್ಲ.
ಶಾಶ್ವತವಾದ ವಿರೋಧ ಪಕ್ಷದಂತೆ ಅತಾರ್ಕಿಕತೆ, ಅಪ್ರಾಮಾಣಿಕತೆ ಹಾಗೂ ಅಜ್ಞಾನಗಳಿಂದ ಹದಗೆಡುತ್ತಿದ್ದ ಸಮುದಾಯದ ಸಂವೇದನೆಯನ್ನು ಎಚ್ಚರಿಸುವಧೀಮಂತ ಚಿಂತಕರಾಗಿದ್ದರು. ಅವರು ಲೋಹಿಯಾ ವಾದವನ್ನು ಪರ್ಯಾಯ ರಾಜಕೀಯ ಹಾಗೂ ನೈತಿಕ ಸಂಹಿತೆಯನ್ನಾಗಿ ರೂಪಿಸಿಕೊಂಡು ಲೋಹಿಯಾ ಮಾದರಿಯ ವ್ಯಕ್ತಿತ್ವವನ್ನು ತಮ್ಮದಾಗಿಸಿಕೊಂಡಿದ್ದರು. 1980ರಿಂದಾಚೆಗಿನ ಜನಪರ ಚಳವಳಿಗಳ ಬುನಾದಿಯಾಗಿದ್ದ ಜಾತಿವಿರೋಧಿ ಸಮಾಜವಾದಿ ಆಶಯಗಳನ್ನು ನಂಬಿದ್ದರು. ಜಾಗತೀಕರಣದ ಹಿಂದಿನ ಬಂಡವಾಳಶಾಹಿಯ ರಾಕ್ಷಸ ಸ್ವರೂಪದ ಹಪಾಹಪಿಗಳನ್ನು ಖಂಡಿಸುತ್ತಾ, ಪರ್ಯಾಯ ಜೀವನಶೈಲಿಯನ್ನು
ಅಳವಡಿಸಿಕೊಳ್ಳದೆ ವೈಚಾರಿಕ ವಿರೋಧದಿಂದ ಪರಿಹಾರವಲ್ಲವೆಂದು ವಾದಿಸಿದರು. ಇತ್ತೀಚಿನ ವರ್ಷಗಳಲ್ಲಿ ಸಾವಯವ ಕೃಷಿ, ಸರಳ ಜೀವನ, ಕೊಳ್ಳುಬಾಕ ಮನೋಭಾವದಿಂದ ಬಿಡುಗಡೆ ಇಂದಿಗೆ ಬೇಕಾದ ಮೌಲ್ಯಗಳೆಂದು ಪ್ರತಿಪಾದಿಸುತ್ತಿದ್ದರು. ಸಮಾಜವಾದದಲ್ಲಿ ಅವರಿಗಿದ್ದ ಅಪ್ಪಟ ವಿಶ್ವಾಸವು ಬೆರಗು ಹುಟ್ಟಿಸುವಂತಿತ್ತು. ‘ಹೊಸ ಮನುಷ್ಯ’ ಪತ್ರಿಕೆಯ ಅವರ ಸಂಪಾದಕೀಯ ಬರಹಗಳು ಒಂದು ಕಡೆಗೆ ನಮ್ಮ ಈ ಕಾಲದ ಸಮಗ್ರ ವಿಮರ್ಶೆ ಹಾಗೂ ಇನ್ನೊಂದೆಡೆ ಪರ್ಯಾಯ ಸಮಾಜದ ಹುಡುಕಾಟದ ಎಳೆಗಳನ್ನು ಜೋಡಿಸುತ್ತಾ ಒಂದು ಸಂವೇದನಾಶೀಲ ಓದುಗ ಸಮುದಾಯವನ್ನು ಕಟ್ಟಿದವು. ‘ಹೊಸ ಮನುಷ್ಯ’ ಪತ್ರಿಕೆಯ ಕೊನೆಯ ಸಂಚಿಕೆಯನ್ನು ಅಚ್ಚುಕಟ್ಟಾಗಿ ತಂದು ವಿದಾಯ ಹೇಳಿದ ನಾಗಭೂಷಣರಿಗೆ ‘ಗಾಂಧಿಕಥನ’ಕ್ಕೆ ಕನ್ನಡ ಸಮುದಾಯ ನೀಡಿದ ಅದ್ಭುತ ಪ್ರತಿಕ್ರಿಯೆ ಸಾರ್ಥಕತೆಯನ್ನು ತಂದಿತ್ತು.
ಅದು ಕನ್ನಡದ ಸರ್ವಕಾಲಿಕ ಕ್ಲಾಸಿಕ್ ಕೃತಿ. ಅರ್ಥಪೂರ್ಣವಲ್ಲದ ಯಾವ ಕೆಲಸವನ್ನೂ ಅವರು ಒಪ್ಪುತ್ತಿರಲಿಲ್ಲ. ‘ಲೋಹಿಯಾ’ದ ಮೂಲಕ ಕುಪ್ಪಳಿಯಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಅವರೇ ನಿಂತು ನಡೆಸುತ್ತಿದ್ದ ಶಿಬಿರಗಳಲ್ಲಿ ಎಚ್ಚರದಿಂದ ಆಯ್ದ ವಿಷಯಗಳನ್ನು ಕುರಿತು ಗಂಭೀರ ಚರ್ಚೆ ನಡೆಸುತ್ತಿದ್ದರು. ಪ್ರಾಯಶಃ ಹರಿತವಾದ ಟೀಕೆಗಳ ಹೊರತಾಗಿಯೂ ಸಮುದಾಯದ ವಿವೇಕದಲ್ಲಿ ಅವರಿಗೆ ನಂಬಿಕೆ
ಯಿತ್ತು. ವಾದ–ಪ್ರತಿವಾದ–ಸಂವಾದಗಳ ಮೂಲಕ ಪ್ರಜಾಪ್ರಭುತ್ವದ ಉಳಿವಿಗೆ ಆವಶ್ಯಕವಾದ ಒಂದು ಸಾರ್ವಜನಿಕ ವಲಯವನ್ನು (Public sphere) ಕಟ್ಟುವುದರ ಭಾಗವಾಗಿ ಅವರ ಬರಹ ಹಾಗೂ ಶಿಬಿರಗಳು ಇದ್ದವು.
ಕನ್ನಡವೇ ಅವರಿಗೆ ಆದ್ಯತೆಯಾಗಿತ್ತು. ಕನ್ನಡ ಮಾಧ್ಯಮ ಶಿಕ್ಷಣಕ್ಕಾಗಿ ಒತ್ತಾಯಿಸಿ ತಮಗೆ ಬಂದ ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ್ದರು. ಇಂಗ್ಲಿಷ್ ಮತ್ತು ಆಧುನಿಕತೆಯ ಕಡೆಗೆ ಒಲವಿದ್ದವರು ಎಂದು ನಮ್ಮ ಜೊತೆ ಜಗಳವಾಡುತ್ತಿದ್ದರು. ಅವರು ಪರಿಭಾವಿಸಿದ ಕನ್ನಡವು ಬರಿ ಭಾಷೆಯಾಗಿರಲಿಲ್ಲ; ಒಂದು ಸ್ವಯಂಪೂರ್ಣ ನಾಗರಿಕತೆ, ಸಂಸ್ಕೃತಿಯಾಗಿತ್ತು.
ಅವರು ಸಾಹಿತ್ಯದ ಅತ್ಯಂ ಸೂಕ್ಷ್ಮಗ್ರಾಹಿ ಓದುಗರಾಗಿದ್ದರು. ಇತ್ತೀಚೆಗೆ ಅವರು ಬರೆದ ಜಯಂತ ಕಾಯ್ಕಿಣಿ ಕತೆಗಳ ವಿಮರ್ಶೆ, ವೈದೇಹಿ ಬರಹದ ವಿಮರ್ಶೆ ಶ್ರೇಷ್ಠ ವಿಮರ್ಶೆಯ ಮಾದರಿಗಳು. ಕಾವ್ಯವಂತೂ ಅವರಿಗೆ ಬಹುದೊಡ್ಡ ಪ್ಯಾಷನ್ ಆಗಿತ್ತು. ವಿಮರ್ಶೆ ಹಾಗೂ ಪ್ರತಿರೋಧಗಳು ದೇಶದ್ರೋಹವೆಂದು ಪರಿಗಣಿತವಾದ ಈ ಕಾಲದಲ್ಲಿ ನಾಗಭೂಷಣರು ಸಮಜಾಯಿಷಿಯೇ ಇಲ್ಲದೆ ಸಮಗ್ರ ಸಾಂಸ್ಕೃತಿಕ ಪ್ರತಿರೋಧದ ಉಜ್ವಲ ಸಂಕೇತವಾಗಿ ಕಾಣುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.