ADVERTISEMENT

ಸಾಣೇಹಳ್ಳಿ ಶ್ರೀ, ನಾಗತಿಹಳ್ಳಿ ಸೇರಿ 11 ಮಂದಿಗೆ ಡಿಎಸ್‌ಮ್ಯಾಕ್ಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 4:18 IST
Last Updated 16 ಜೂನ್ 2022, 4:18 IST
ಎಸ್.ಪಿ. ದಯಾನಂದ್
ಎಸ್.ಪಿ. ದಯಾನಂದ್   

ಬೆಂಗಳೂರು: ‘ಡಿಎಸ್‌ಮ್ಯಾಕ್ಸ್‌ ಪ್ರಾಪರ್ಟೀಸ್‌ ಪ್ರೈವೇಟ್ ಲಿಮಿಟೆಡ್ ಸಂಸ್ಥೆ’ಯು ಸಾಣೇಹಳ್ಳಿಯ ಸಿರಿಗೆರೆ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ, ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಹನ್ನೊಂದು ಮಂದಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಪಿ.ದಯಾನಂದ್ ಅವರು, 2022ನೇ ಸಾಲಿನ ‘ಡಿಎಸ್‌ಮ್ಯಾಕ್ಸ್‌ ರತ್ನಶ್ರೀ ಪ್ರಶಸ್ತಿ’ಗೆ 9 ಮಂದಿ ಮತ್ತು ಕಲಾಶ್ರೀ ಪ್ರಶಸ್ತಿ’ಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದರು.

ಭಾರತೀಯ ಚಿತ್ರರಂಗದಲ್ಲಿ ಕೊಡುಗೆ ನೀಡಿದ ಸಾಹಿತಿ, ನಟ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ತೆಲುಗು ಸಾಹಿತಿ, ನಟ ಮತ್ತು ನಿರ್ದೇಶಕ ತಣಿಕಲ್ಲ ಭರಣಿ ಅವರು ‘ಡಿಎಸ್‌ಮ್ಯಾಕ್ಸ್‌ ಕಲಾಶ್ರೀ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ADVERTISEMENT

‘ಡಿಎಸ್‌ಮ್ಯಾಕ್ಸ್ ಕರುನಾಡು ರತ್ನಶ್ರೀಪ್ರಶಸ್ತಿ’ಗೆ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‌ ಕುಮಾರ್, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಟಿ ಭಾರತಿ ವಿಷ್ಣುವರ್ಧನ್, ಪರಿಸರ ಉಳಿಸಲು ಕೆಲಸ ಮಾಡಿದ ಸಾಲುಮರದ ತಿಮ್ಮಕ್ಕ ಮತ್ತುತುಳಸಿಗೌಡ, ರಂಗಭೂಮಿ ಕಲಾವಿದೆ ಮಂಜಮ್ಮ ಜೋಗತಿ, ಕವಿ–ಗೀತರಚನೆಕಾರ ದೊಡ್ಡರಂಗೇಗೌಡ, ಅಂತರರಾಷ್ಟ್ರೀಯ ಪ್ಯಾರಾ ಅಥ್ಲೀಟ್‌ ಮಾಲತಿ ಕೃಷ್ಣಮೂರ್ತಿ ಹೊಳ್ಳ, ಸಬಿತಾ ಮೋನಿಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

‘ಪ್ರಶಸ್ತಿ ಪುರಸ್ಕೃತರಿಗೆ ₹25 ಸಾವಿರ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಿದ್ದೇವೆ. ಇದೇ 19ರ ಮಧ್ಯಾಹ್ನ 2.30ಕ್ಕೆ ಬೆಂಗಳೂರು ಅರಮನೆಯಲ್ಲಿ ಸಂಸ್ಥೆಯ ಸಂಸ್ಥಾಪನಾ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಸಾನ್ನಿಧ್ಯ ವಹಿಸಲಿದ್ದಾರೆ. ವಸತಿ ಸಚಿವ ವಿ.ಸೋಮಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪಬ್ಲಿಕ್‌ ಟಿ.ವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್‌ ಹಾಗೂ ಶಾಸಕ ರಾಜು ಗೌಡ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ಕ್ಷೇತ್ರದ ಹೆಸರಾಂತ ನಟ–ನಟಿಯರು ಪಾಲ್ಗೊಳ್ಳಲಿದ್ದಾರೆ.ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮನೆ, ಕಾರು ಸೇರಿದಂತೆ 166 ಮಂದಿಗೆ ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.

ಸಂಸ್ಥೆಯ ಅಧ್ಯಕ್ಷ ಕೆ.ವಿ. ಸತೀಶ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.