ಬೆಂಗಳೂರು: ಡಿಸೆಂಬರ್ ತಿಂಗಳಿನಲ್ಲೇ ‘ಐಕ್ಯತಾ ಸಮಾವೇಶ’ ನಡೆಸುವ ಮೂಲಕ ಬಿಜೆಪಿ ವಿರುದ್ಧ ಚಳವಳಿಗೆ ಕರೆ ನೀಡಿದ್ದ ರಾಜ್ಯದ ವಿವಿಧ ದಲಿತ ಸಂಘಟನೆಗಳು, ಚುನಾವಣೆಯಲ್ಲೂ ಜೋರಾಗಿ ಸದ್ದು ಮಾಡಿದವು.
ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳ ಪ್ರಮುಖರೂ ಸೇರಿದಂತೆ ದಲಿತ ಚಳವಳಿಯ ಹಲವು ನಾಯಕರು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಅಭಿಯಾನ ನಡೆಸಿದರು. ಕೆಲವು ಸಂಘಟನೆಗಳು ನೇರವಾಗಿಯೇ ಕಾಂಗ್ರೆಸ್ ಪರ ಮತ ಯಾಚಿಸಿದವು.
ಡಿಸೆಂಬರ್ 6ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಐಕ್ಯತಾ ಸಮಾವೇಶದಲ್ಲಿ ಭಾರೀ ಸಂಖ್ಯೆಯ ಜನರು ಭಾಗವಹಿಸಿದ್ದರು. ಆಗಲೇ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳ ವಿರುದ್ಧ ನಿರ್ಣಯ ಅಂಗೀಕರಿಸಲಾಗಿತ್ತು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹಾಗೂ ಒಳ ಮೀಸಲಾತಿ ಅನುಷ್ಠಾನಕ್ಕೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದರ ನೆರವಿನಲ್ಲೇ ಪರಿಶಿಷ್ಟರ ಮತಗಳನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇತ್ತು. ಈ ವಿಷಯದಲ್ಲೂ ಪರಿಶಿಷ್ಟರಿಗೆ ಬಿಜೆಪಿ ಮೋಸ ಮಾಡುತ್ತಿದೆ ಎಂದು ದಲಿತ ಸಂಘಟನೆಗಳ ಪ್ರಮುಖರು ಚುನಾವಣೆಯುದ್ದಕ್ಕೂ ನೆನಪಿಸುವ ಕೆಲಸ ಮಾಡಿದರು.
ನೇರವಾಗಿ ಪಕ್ಷ ಸೇರಿದರು: ಪರಿಶಿಷ್ಟ ಜಾತಿಯವರಿಗೆ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದೀರ್ಘ ಕಾಲದಿಂದ ಹೋರಾಟ ನಡೆಸುತ್ತಿದ್ದ ಪ್ರಮುಖರಾದ ಅಂಬಣ್ಣ ಅರೋಲಿ, ಸುಧಾಮದಾಸ್ ಸೇರಿದಂತೆ ಹಲವರು ನೇರವಾಗಿ ಕಾಂಗ್ರೆಸ್ ಪಕ್ಷವನ್ನೇ ಸೇರಿದರು. ಇದು ಕೂಡ ಈ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.