ಬೆಂಗಳೂರು: ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಡಚ್ ಕಂಪನಿಗಳು ಮುಂದೆ ಬಂದಿವೆ.
ರಾಜ್ಯದಲ್ಲಿ ಡಚ್ ಕಂಪನಿಗಳ ಹೂಡಿಕೆಗೆ ಉತ್ತೇಜನ ಹಾಗೂ ಈಗಾಗಲೇ ಹೂಡಿಕೆ ಮಾಡಿರುವ ಕಂಪನಿಗಳು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ದುಂಡು ಮೇಜಿನ ಸಭೆಯನ್ನು ಸೋಮವಾರ ಏರ್ಪಡಿಸಲಾಗಿತ್ತು.
ರಾಜ್ಯ ಪ್ರವಾಸದಲ್ಲಿರುವ ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ನೇತೃತ್ವದ ಅಧಿಕಾರಿಗಳು ಮತ್ತು ಡಚ್ ಉದ್ಯಮಿಗಳ ನೇತೃತ್ವದ ನಿಯೋಗವು ಈ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಬೇಡಿಕೆಗಳನ್ನು ಸಭೆಯ ಮುಂದಿಟ್ಟಿತು. ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹಾಗೂ ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪಾಲ್ಗೊಂಡಿದ್ದರು. ಹೂಡಿಕೆಗೆ ಪೂರಕವಾದ ಪಾರದರ್ಶಕ ವ್ಯವಸ್ಥೆ ಹಾಗೂ ಅಬಕಾರಿ ನಿಯಮಗಳಲ್ಲಿ ಕೆಲವು ಬದಲಾವಣೆ ತರುವ ಕುರಿತು ಪ್ರಸ್ತಾವನೆಗಳನ್ನು ಮುಂದಿಟ್ಟಿತು.
ಈ ಕುರಿತು ಸದ್ಯದಲ್ಲೇ ಮತ್ತೊಂದು ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿಯೋಗಕ್ಕೆ ಭರವಸೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಹೀನ್‌ಕೆನ್ ಬ್ರಿವರೀಸ್‌ನ ಸಿಎಫ್ಒ ರಾಡೋವನ್ ಸಿಕೋರ್ಸ್ಕಿ, ‘ನಮ್ಮ ಕಂಪನಿಯು ಕಿಂಗ್‌ಫಿಷರ್ ಮತ್ತು ಹೀನ್‌ಕೆನ್ ಬ್ರ್ಯಾಂಡ್‌ಗಳ ಅಡಿಯಲ್ಲಿ ಗುಣಮಟ್ಟದ ಬಿಯರ್ ತಯಾರಿಸುತ್ತಿದ್ದು, ಹೂಡಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.
ಎಂ.ಬಿ. ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮತ್ತು ಜೈವಿಕ ಇಂಧನಗಳ ಉತ್ಪಾದನೆಗೆ ಹೇರಳ ಅವಕಾಶಗಳಿವೆ. ಡಚ್ ಕಂಪನಿಗಳು ಇದರತ್ತ ಗಮನ ಹರಿಸಬೇಕು’ ಎಂದರು.
‘ಹಂಪಿ, ಬಾದಾಮಿ, ವಿಜಯಪುರದಂಥ ಐತಿಹಾಸಿಕ ಸ್ಥಳಗಳು ನಮ್ಮಲ್ಲಿವೆ. ಜೊತೆಗೆ ಅಪಾರ ಸಂಖ್ಯೆಯ ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿರುವ ಹೂಡಿಕೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಆಹಾರ ಸಂಸ್ಕರಣೆ, ಬಯೊಟೆಕ್, ಫಾರ್ಮಾ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ವೃದ್ಧಿಸಬೇಕು’ ಎಂದರು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 1 ಸಾವಿರ ಎಕರೆ ಪ್ರದೇಶದಲ್ಲಿ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನಾ ನಗರಿ ನಿರ್ಮಿಸಲಿರುವ ವಿಚಾರವನ್ನು ಡಚ್ ನಿಯೋಗದ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಮಾರ್ಕ್ ರುಟ್ಟೆ, ‘ಭಾರತದಲ್ಲಿ ನಮ್ಮ ದೇಶದ ಒಟ್ಟು 25 ಕಂಪನಿಗಳು ವಹಿವಾಟು ನಡೆಸುತ್ತಿವೆ. ಇವು ಭಾರತದಲ್ಲಿ ಹೂಡಿಕೆ ಮಾಡಿರುವ ಒಟ್ಟು ಮೊತ್ತದಲ್ಲಿ ಶೇ 9ರಷ್ಟನ್ನು ಕರ್ನಾಟಕದಲ್ಲೇ ತೊಡಗಿಸಿವೆ’ ಎಂದರು.
ಸಭೆಯಲ್ಲಿ ಮಾತನಾಡಿದ ಫಿಲಿಪ್ಸ್ ಕಂಪನಿಯ ಅರವಿಂದ್ ವೈಷ್ಣವ್, ತಾವು ಸದ್ಯದಲ್ಲೇ ಯಲಹಂಕದಲ್ಲಿ ಇರುವ ಎಂಬೆಸಿ ಬಿಜಿನೆಸ್ ಹಬ್‌ಗೆ ತಮ್ಮ ಕ್ಯಾಂಪಸ್ಸನ್ನು ಸ್ಥಳಾಂತರಿಸುತ್ತಿದ್ದೇವೆ. ಕಂಪನಿಯ 5 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಸುಗಮ ಓಡಾಟಕ್ಕೆ ಬಿಎಂಟಿಸಿ ವೋಲ್ವೊ ಬಸ್ಸುಗಳನ್ನು ಒದಗಿಸಬೇಕು ಮತ್ತು ಸ್ಪರ್ಧಾತ್ಮಕತೆಯನ್ನು ಎದುರಿಸಲು ರಾಜ್ಯ ಸರ್ಕಾರವು ವಿದ್ಯುತ್ ವೆಚ್ಚದ ಮೇಲೆ ಶೇ 20ರಷ್ಟು ಸಬ್ಸಿಡಿ ನೀಡಬೇಕು ಹಾಗೂ ಜಿಎಸ್‌ಟಿ ಮರುಪಾವತಿಯನ್ನು ಸುಲಭಗೊಳಿಸಬೇಕು ಎಂದು ಮನವಿ ಮಾಡಿದರು.
ಡಚ್ ಕಂಪನಿಗಳಾದ ಬುಕಿಂಗ್ ಡಾಟ್‌ಕಾಂ ಪ್ರತಿನಿಧಿ ಪೀಟರ್ ಲಾಕ್ಬಿಹಲೆರ್, ಶೆಲ್ ಕಂಪನಿಯ ನಿತಿನ್ ಪ್ರಸಾದ್, ಕೆಎಲ್ಎಂನ ಕ್ರಿಶ್ಚಿಯನ್ ವ್ಯಾನ್ ಡಿ ಕೊಪೆಲ್, ಎನ್ಎಕ್ಸ್‌ಪಿಯ ಮಾರಿಸ್ ಗೆರೇಟ್ಸ್, ಕೆಪಿಎಂಜಿಯ ಮಾರ್ಕ್ ಬ್ರೋಸ್ಕ್ಜಿ, ಆರ್ಕ್ಯಾಡಿಸ್ ನ ವೆಂಕಟ ಚುಂಡೂರು, ರಾಂಡ್ ಸ್ಟಡ್ ಕಂಪನಿಯ ವಿಶ್ವನಾಥ್ ಪುದುಕ್ಕಾಡ್, ಈಸ್ಟ್ ವೆಸ್ಟ್ ಸೀಡ್ಸ್‌ನ ದಿಲೀಪ್ ರಂಜನ್, ಕೋಪರ್ಟ್ ಕಂಪನಿಯ ಹೆನ್ರಿ ಓಶ್ತಿಯೋಕ್ ಭಾಗವಹಿಸಿದ್ದರು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.