ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸಭೆಯೊಂದರಲ್ಲಿ ಅಸಮಾಧಾನ ವ್ಯಕ್ತಪಡಿಸಿರುವುದು ಪಕ್ಷದ ಆಂತರಿಕ ವಿಚಾರ’ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದಲ್ಲಿ ಕೆಲವು ಗೊಂದಲಗಳಿರುವುದು ನಿಜ. ಅದನ್ನು ಯಡಿಯೂರಪ್ಪ ಪಕ್ಷದ ನಾಯಕರು ಇರುವ ಸಭೆಯಲ್ಲಿ ಹೇಳಿದ್ದಾರೆ. ಬಹಿರಂಗವಾಗಿಯೇನೂ ಅವರು ಅಸಮಾಧಾನ ಹೊರಹಾಕಿಲ್ಲವಲ್ಲ’ ಎಂದರು.
‘ಸಹಜವಾಗಿ ಮಾತನಾಡಿರುವುದನ್ನು ಯಾರೋ ವಿಡಿಯೊ ಮಾಡಿದ್ದಾರೆ. ಹೀಗೆ, ಕದ್ದು ಮುಚ್ಚಿ ವಿಡಿಯೊ ಮಾಡಿ ಹರಿಯಬಿಡುವುದು ಈ ದಿನಗಳಲ್ಲಿ ಸಾಮಾನ್ಯವಾಗಿದೆ’ ಎಂದರು.
ಇದನ್ನೂ ಓದಿ:‘ಸಿ.ಎಂ ಆಗಿ ಅಪರಾಧ ಮಾಡಿದೆ’
‘ವಿಡಿಯೊ ಬಹಿರಂಗವಾಗಿರುವುದು ಪಕ್ಷಕ್ಕೆ ಮುಜುಗರ ತಂದಿಲ್ಲ. ಮುಖ್ಯಮಂತ್ರಿಯಾಗಿ ಅವರು ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಯಾರು ರಾಜೀನಾಮೆ ನೀಡಿದ್ದಾರೋ ಅಂತಹ ಶಾಸಕರ ನೆರವಿನಿಂದ ನಮಗೆ ಅಧಿಕಾರ ಸಿಕ್ಕಿದೆ ಎಂದು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ ಅವರು, ‘ಶಾಸಕರು ರಾಜೀನಾಮೆ ನೀಡಿರುವುದು ನಮ್ಮ ಪಕ್ಷದ ಹೈಕಮಾಂಡ್‌ನ ಸೂಚನೆಯಂತೆ ಎಂದು ಯಡಿಯೂರಪ್ಪ ಹೇಳಿರುವುದು ನನಗೆ ತಿಳಿದಿಲ್ಲ. ನಾನು ಇನ್ನೂ ಆ ವಿಡಿಯೊ ನೋಡಿಲ್ಲ. ಪತ್ರಿಕೆಗಳಲ್ಲಿ ಮಾತ್ರ ಓದಿದ್ದೇನೆ’ ಎಂದರು.
‘ರಾಜಕಾರಣದಲ್ಲಿ ಯಡಿಯೂರಪ್ಪನವರಿಗೆ 40 ವರ್ಷಗಳ ಅನುಭವವಿದೆ. ಅವರು ಈ ರೀತಿ ಮಾತನಾಡಿರಲು ಸಾಧ್ಯವಿಲ್ಲ’ ಎಂದು ಸದಾನಂದ ಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.