ADVERTISEMENT

ಟಿಪ್ಪು ಜಯಂತಿ: ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಗೈರು

ಹೊಸಪೇಟೆಯಲ್ಲೂ ಕಾಂಗ್ರೆನ್‌ನ ನಾಲ್ವರು ಶಾಸಕರು ಗೈರು

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 14:39 IST
Last Updated 10 ನವೆಂಬರ್ 2018, 14:39 IST
ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜಯಮಾಲಾ, ರೋಷನ್ ಬೇಗ್ ಮತ್ತು  ಜಮೀರ್ ಅಹ್ಮದ್ ಖಾನ್ ಇದ್ದಾರೆ –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಜಯಮಾಲಾ, ರೋಷನ್ ಬೇಗ್ ಮತ್ತು  ಜಮೀರ್ ಅಹ್ಮದ್ ಖಾನ್ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನ ಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರೂ ಭಾಗವಹಿಸಲಿಲ್ಲ.

ಅನಾರೋಗ್ಯದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ವೈದ್ಯರು ವಿಶ್ರಾಂತಿ ಪಡೆಯುವುದಂತೆ ಸೂಚಿಸಿದ್ದರಿಂದ ಅವರು ಮೂರು ದಿನಗಳು ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಹಾಗಾಗಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಇರಲಿಲ್ಲ. ಉದ್ಘಾಟಕರಾಗಿ ಪರಮೇಶ್ವರ ಅವರ ಹೆಸರನ್ನು ಮುದ್ರಿಸಲಾಗಿತ್ತು.

ಪರಮೇಶ್ವರ ಅವರ ಗೈರು ಹಾಜರಿ ಬಗ್ಗೆ ಸ್ಪಷ್ಟೀಕರಣ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌, ‘ಪರಮೇಶ್ವರ ಅವರ ಆಪ್ತ, ಮಾಜಿ ಸಚಿವ ಚೆನ್ನಿಗಪ್ಪ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಸಿಂಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ಕಾಣಲು ಸಿಂಗಪುರಕ್ಕೆ ತೆರಳಿದ್ದ ಉಪಮುಖ್ಯಮಂತ್ರಿ ಸಂಜೆ ಒಳಗೆ ನಗರಕ್ಕೆ ಮರಳುವವರಿದ್ದರು. ಸಂಜೆ 6 ಗಂಟೆಗೆ ಆಯೋಜನೆ ಆಗಿದ್ದ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಬೆಳಿಗ್ಗೆ 11.30ಕ್ಕೆ ನಿಗದಿಪಡಿಸಲಾಗಿದೆ. ಸಮಯ ಬದಲಾವಣೆ ವಿಚಾರ ಪರಮೇಶ್ವರ ಅವರಿಗೆ ತಿಳಿಯದ ಕಾರಣ ಗೊಂದಲ ಉಂಟಾಗಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಮುದ್ರಿಸದ ಬಗ್ಗೆಯೂ ಸಮಜಾಯಿಷಿ ನೀಡಿದ ಜಮೀರ್‌, ‘ವಾಲ್ಮೀಕಿ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಅವರ ಹೆಸರು ಮುದ್ರಿಸಲಾಗಿತ್ತು. ಅವರು ಅನಾರೋಗ್ಯದ ಕಾರಣ ಆ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದನ್ನೇ ದೊಡ್ಡ ಸುದ್ದಿ ಮಾಡಲಾಯಿತು. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿ, ಕಾರ್ಯಕ್ರಮಕ್ಕೆ ಗೈರು ಹಾಜರಾದರೆ ಬಿಜೆಪಿಯವರು ಅದನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಾರೆ. ಅದಕ್ಕೆ ಆಸ್ಪದ ನೀಡಬಾರದು ಎಂಬ ಉದ್ದೇಶದಿಂದಲೇ ಕುಮಾರಸ್ವಾಮಿ ತಮ್ಮ ಹೆಸರನ್ನು ಮುದ್ರಿಸುವುದು ಬೇಡ ಎಂದು ಸೂಚಿಸಿದ್ದರು’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌, ಬಿಜೆಪಿ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಹಾಗೂ ಆರ್‌.ಅಶೋಕ ಅವರು ಟಿಪ್ಪುವನ್ನು ಹೊಗಳಿದ್ದನ್ನು ನೆನಪಿಸಿದರು.

‘ಟಿಪ್ಪು ಇಡೀ ಭಾರತದ ಆಸ್ತಿ. ಬಿಜೆಪಿ ಸ್ನೇಹಿತರಿಗೆ ಟಿಪ್ಪು ಜಯಂತಿಯಿಂದ ಪಾಪ ಏಕೆ ಸಮಸ್ಯೆ ಎಂದು ಅರ್ಥವಾಗುತ್ತಿಲ್ಲ. ಇದರಿಂದ ಮತ ಜಾಸ್ತಿ ಆಗುತ್ತದೆಯೇ’ ಎಂದು ಪ್ರಶ್ನಿಸುತ್ತಲೇ ಮಾತು ಆರಂಭಿಸಿದರು.

‘ಸಂವಿಧಾನದ ಪುಸ್ತಕದಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೊತೆ ಟಿಪ್ಪುವಿನ ಫೋಟೊ ಹಾಕಿದ್ದಾರೆ.ವಿಧಾನಸೌಧಕ್ಕೆ 60 ವರ್ಷ ತುಂಬಿದ್ದ ಸಲುವಾಗಿ ಏರ್ಪಡಿಸಿದ್ದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಟಿಪ್ಪು ಗುಣಗಾನ ಮಾಡಿದ್ದರು. ಬರೆದುಕೊಟ್ಟಿದ್ದನ್ನು ಓದಲು ಅವರೇನು ದಡ್ಡರೇ. ಟಿಪ್ಪುವಿನ ಬಗ್ಗೆ ನಾವು ರಾಷ್ಟ್ರಪತಿ ಹಾಗೂ ಇತಿಹಾಸಕಾರು ಹೇಳಿದ ಮಾತು ಕೇಳಬೇಕೋ ಅಥವಾ ಮಂಗಳೂರಿನಲ್ಲಿ ಯಾವನೋ ಒಬ್ಬ ಸಂಸದ ಮಾತನಾಡುತ್ತಾನೆ ಎಂದು ಅವನ ಮಾತು ಕೇಳಬೇಕೋ’ ಎಂದು ಪ್ರಶ್ನಿಸಿದರು.

‘ದೆಹಲಿಯಲ್ಲಿ ನಿಮ್ಮವರದೇ ಅಧಿಕಾರ ಇದೆ. ಟಿಪ್ಪು ಜಯಂತಿ ಬೇಡ ಎಂದಾದರೆ, ಅಲ್ಲಿಂದಲೇ ಫರ್ಮಾನು ಹೊರಡಿಸಿ. ನಾವು ಅಂಗಡಿ ಮುಚ್ಚಿ ಕೂರುತ್ತೇವೆ. ಇಲ್ಲ ಹೊರಗಡೆ ಮಾಡುತ್ತೇವೆ. ಬೇಕಿದ್ದರೆ, ರಾಷ್ಟ್ರಪತಿಯವರಿಗೆ, ಅವರ ಭಾಷಣ ಹಿಂದಕ್ಕೆ ಪ‍ಡೆಯುವಂತೆ ಹೇಳಿ. ಯಾರು ಬೇಡ ಎನ್ನುತ್ತಾರೆ’ ಎಂದು ಬಿಜೆಪಿಯವರನ್ನು ಉದ್ದೇಶಿಸಿ ಹೇಳಿದರು.

‘ಯಾರನ್ನೂ ಮೆಚ್ಚಿಸುವುದಕ್ಕಾಗಿ, ರಾಜಕಾರಣಕ್ಕಾಗಿ, ನಿರ್ದಿಷ್ಟ ಧರ್ಮದವರ ಓಲೈಕೆಗಾಗಿ ಈ ಕಾರ್ಯಕ್ರಮ ಮಾಡುತ್ತಿಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು ಎಂಬುದು ನನ್ನ ವಾದ. ದೇಶಕ್ಕಾಗಿ ಮಾಡಿದ ತ್ಯಾಗವನ್ನು ನೆನಪಿಸಿಕೊಳ್ಳಲು ಕಾರ್ಯಕ್ರಮ ಮಾಡುತ್ತಿದ್ದೇವೆ. ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ದೇಶಕ್ಕಾಗಿ ತ್ಯಾಗ ಮಾಡಿದ ವ್ಯಕ್ತಿ. ಅಂತಹ ಧೀಮಂತ ಹೋರಾಟಗಾರನ ಸ್ಮರಣೆ ಮಾಡುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

‘ಶ್ರೀರಂಗಪಟ್ಟಣ, ನಂಜನಗೂಡು, ಮೇಲುಕೋಟೆ ಹಾಗೂ ಶೃಂಗೇರಿ ದೇವಸ್ಥಾನಗಳಲ್ಲಿ ಟಿಪ್ಪು ಹೆಸರಿನಲ್ಲಿ ಪೂಜೆ ನಡೆಯುತ್ತಿರುವುದು ಏಕೆ. ಎಲ್ಲ ಧರ್ಮಗಳು ಜಾತಿಗಳು ಒಟ್ಟಿಗೆ ಕೆಲಸ ಮಾಡುವುದೇ ದೇಶದ ಸಂಸ್ಕೃತಿ. ಆದರೆ, ಕೆಲವರು ಶಾಂತಿ ಭಂಗ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದರು.

‘ಮುಸ್ಲಿಂ ನಾಯಕರಿಗೆ ಏನೇನು ತೊಂದರೆ ನೀಡಲಾಗುತ್ತಿದೆ ಎಂದು ನನಗೆ ತಿಳಿದಿದೆ. ಗುಜರಾತಿನ ನಾಯಕರಿಗೆ ಚುನಾವಣೆ ಸಂದರ್ಭದಲ್ಲಿ ಏನೇನು ಕಿರುಕುಳ ನೀಡಲಾಯಿತು ಎಂದು ವಿವರಿಸಬೇಕಾಗಿಲ್ಲ. ಅವರು ಏನೆಲ್ಲ ಅನುಭವಿಸಿದರು, ನನಗೆ ಏನು ಕಷ್ಟ ನೀಡಲಾಯಿತು ಎಂಬುದು ನನಗೆ ಮಾತ್ರ ಗೊತ್ತಿದೆ. ಯಾರೂ ಎದೆಗುಂದುವುದು ಬೇಡ. ಸರ್ಕಾರ ನಿಮ್ಮ ಜೊತೆ ಇದೆ. ಈ ದೇಶಕ್ಕೆ ಒಬ್ಬ ಟಿಪ್ಪು ಸಾಲದು, ಹಲವಾರು ಟಿಪ್ಪುಗಳ ಅವಶ್ಯಕತೆ ಇದೆ’ ಎಂದರು.

ಶಾಸಕ ರೋಷನ್‌ ಬೇಗ್‌, ‘ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರ ಟಿಪ್ಪು ಜಯಂತಿ ಆಚರಿಸಿದರೆ ಕೆಲವರಿಗೆ ಹೊಟ್ಟೆ ಉರಿ ಆಗುತ್ತದೆ. ಇದಕ್ಕೆ ಏನು ಮಾಡಲು ಸಾಧ್ಯ’ ಎಂದರು.

‘ಸಾವಿರಾರು ಮುಸ್ಲೀಮರು ಈ ದೇಶಕ್ಕಾಗಿ ರಕ್ತ ಹರಿಸಿದ್ದಾರೆ. ಅದನ್ನೆಲ್ಲಾ ಮರೆತಿದ್ದೀರಾ. 2019ರ ಚುನಾವಣೆ ಸಮೀಪಿಸುತ್ತಿದ್ದು, ಈಗ ದೇಶದಲ್ಲಿ ನಾಟಕ ಆರಂಭವಾಗಿದೆ. ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್‌, ಆಗ್ರಾ ಹೆಸರನ್ನು ಅಗರವಾಲ್‌ ಎಂದು ಬದಲಾಯಿಸಲಾಗುತ್ತಿದೆ. ಹಿಂದೂ ಮುಸ್ಲೀಮರ ನಡುವೆ ಜಗಳ ತಂದಿಡುವ ಪ್ರಯತ್ನ ಇದು. ಹಿಂದೂಗಳು ನಮ್ಮ ಸಹೋದರರು. ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ’ ಎಂದರು.

‘ಶ್ರೀರಂಗಪಟ್ಟಣ ಪೂಜಾರಿಗಳು ಈಗಲೂ ಟಿಪ್ಪು ಮಾಡಿದ್ದ ಸಹಾಯವನ್ನು ನೆನೆಯುತ್ತಾರೆ. ಮೂಕಾಂಬಿಕಾ ದೇವಸ್ಥಾನದಲ್ಲಿ ಈಗಲೂ ಸುಲ್ತಾನ್‌ ಆರತಿ ನಡೆಯುತ್ತಿದೆ. ಶೃಂಗೇರಿಯ ಶಾರದಾಂಬೆಯ ಮಂದಿರ ಲೂಟಿ ಆದಾಗ ರಕ್ಷಣೆಗೆ ಧಾವಿಸಿದ್ದು ಟಿಪ್ಪು. ಶೃಂಗೇರಿ ಸ್ವಾಮೀಜಿಗೆ ಟಿಪ್ಪು ಬರೆದ ಆ ಪತ್ರ ಈಗಲೂ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಇದೆ. ‘ನನ್ನ ಮತ್ತು ನನ್ನ ಪ್ರಜೆಗೆ ಪ್ರಾರ್ಥನೆ ಮಾಡಿ’ ಎಂದ ಧೀಮಂತ ದೊರೆ ಟಿಪ್ಪು. ಆದರೆ, ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ’ ಎಂದರು.

ಟಿಪ್ಪುವಿನ ಕುರಿತು ಉಪನ್ಯಾಸ ನೀಡಿದ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಸದಾಶಿವ, ‘ಬಡವರ ಹಾಗೂ ಶೋಷಿತರ ಬಗ್ಗೆ ಟಿಪ್ಪು ಎಷ್ಟು ಕಾಳಜಿ ವಹಿಸುತ್ತಿದ್ದ ಎಂಬುದಕ್ಕೆ ಆತ ಹೊರಡಿಸಿದ್ದ ಆಜ್ಞೆಗಳೇ ಸಾಕ್ಷಿ’ ಎಂದರು.

‘ಟಿಪ್ಪುವಿಗೆ ಹಿಂದೂ ವಿರೋಧಿ ಎಂಬ ಕಳಂಕ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಮಲಬಾರ್‌ ಪ್ರಾಂತ್ಯದಲ್ಲಿ ಆತ ನಂಬೂದಿರಿಗಳನ್ನು ಹಾಗೂ ನಾಯರ್‌ಗಳನ್ನು ಆತ ಕೊಲ್ಲಿಸಿದ್ದು ಧಾರ್ಮಿಕ ಕಾರಣಕ್ಕಾಗಿ ಅಲ್ಲ. ಅಲ್ಲಿ ಉಳುವವರಿಗೆ ಭೂಮಿಯನ್ನು ಬಿಟ್ಟುಕೊಡುವಂತೆ ಫರ್ಮಾನು ಹೊರಡಿಸಿದ್ದರಿಂದ ಮೇಲ್ಜಾತಿಯವರು ಭೂಮಿ ಕಳೆದುಕೊಂಡು ಕಾಡು ಮೇಡುಗಳಲ್ಲಿ ಅಲೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಕೆಳವರ್ಗದ ರೈತರು ಬೆಳೆದ ಬೆಳೆಗಳನ್ನು ನಾಯರ್‌ಗಳು ಹಾಗೂ ನಂಬೂದಿರಿಗಳು ಲೂಟಿ ಮಾಡುತ್ತಿದ್ದರು. ಈ ಕಾರಣಕ್ಕೆ ಟಿಪ್ಪು ಅಂತಹವರನ್ನು ಕೊಲ್ಲಿಸಿದ್ದ’ ಎಂದರು.

‘ಅಕ್ಕಿ, ಕರಿಮೆಣಸು, ಏಲಕ್ಕಿಯಂತಹ ಪದಾರ್ಥಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇತ್ತು. ಒಂದು ಕೆ.ಜಿ. ಕರಿಮೆಣಸನ್ನು ಒಂದು ಕೆ.ಜಿ.ಚಿನ್ನಕ್ಕೆ ವಿಕ್ರಯ ಮಾಡಲಾಗುತ್ತಿತ್ತು. ಇದರ ಲಾಭ ಬ್ರಿಟಿಷರು ಪಡೆಯುತ್ತಿದ್ದರು. ಇದನ್ನು ತಪ್ಪಿಸಲು ಟಿಪ್ಪು, ಯಾವ ರೈತರೂ ಇಂತಹ ಪದಾರ್ಧಗಳನ್ನು ಬ್ರಿಟಿಷರಿಗೆ ಮಾರುವಂತಿಲ್ಲ ಎಂದು ಆಜ್ಞೆ ಮಾಡಿದ್ದ. ಕೊಡಗು ಹಾಗೂ ಕರಾವಳಿ ಪ್ರದೇಶದಲ್ಲಿ ಕೆಲವರು ಇದನ್ನು ಉಲ್ಲಂಘಿಸಿ ಬ್ರಿಟಿಷರಿಗೆ ಅಕ್ಕಿ ಮಾರುತ್ತಿದ್ದರು. ಅಂತಹವರನ್ನು ಟಿಪ್ಪು ಶಿಕ್ಷಿಸಿದ್ದ’ ಎಂದರು.

‘ಟಿಪ್ಪು ಸತ್ತು ಐದಾರು ವರ್ಷಗಳ ಬಳಿಕವೂ ಜನರು ಅವರ ಬಗ್ಗೆ ಜನಪದ ಗೀತೆಗಳನ್ನು ಕಟ್ಟಿ ಹಾಡುತ್ತಿದ್ದರು. ಬ್ರಿಟಿಷ್‌ ಪ್ರವಾಸಿಗನೊಬ್ಬ ಇದನ್ನು ಉಲ್ಲೇಖಿಸಿದ್ದಾನೆ’ ಎಂದರು.

***

ಬಿಜೆಪಿಯವರು ಏನಾದರೂ ಮಾಡಿಕೊಳ್ಳಲಿ. ಯಾರು ಏನೇ ಹೇಳಲಿ ಟಿಪ್ಪು ಜಯಂತಿ ಆಚರಣೆ ನಿಲ್ಲುವುದಿಲ್ಲ
– ಜಮೀರ್‌ ಅಹಮದ್‌ ಖಾನ್‌, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ, ಸಮಯ ಬಂದಾಗ ನವದೆಹಲಿಯಲ್ಲೂ ನಾವು ಟಿಪ್ಪು ಜಯಂತಿ ಆಚರಿಸುತ್ತೇವೆ
– ರೋಷನ್‌ ಬೇಗ್‌, ಶಾಸಕ

ವ್ಯಕ್ತಿ ಅಧಿಕಾರ ಹಾಗೂ ಹಣಬಲದಿಂದ ದೊಡ್ಡವನಾಗುವುದಿಲ್ಲ. ತಾರತಮ್ಯಗಳನ್ನು ಅಳಿಸುವವರು, ನಿರ್ಣಾಯಕ ಸಂದರ್ಭದಲ್ಲಿ ಪ್ರಾಣವನ್ನು ಲೆಕ್ಕಿಸದೆ ಪ್ರಜೆಗಳ ಹಿತ ಕಾಯುವವರು ಇತಿಹಾಸದ ಪುಟಗಳಲ್ಲಿ ನಾಯಕರಾಗುತ್ತಾರೆ. ಅಂತಹ ನಾಯಕ ಟಿಪ್ಪು

– ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.