ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಸೌಹಾರ್ದಕಾಪಾಡುವುದರ ಮಹತ್ವಸಾರುವಉದ್ದೇಶದಿಂದಡಿವೈಎಫ್‌ಐಮನೆಮನೆಅಭಿಯಾನವನ್ನುಹಮ್ಮಿಕೊಂಡಿದೆ.
ಪಂಜಿಮೊಗರು, ಕೊಂಚಾಡಿ, ಜಪ್ಪಿನಮೊಗರು, ಬಜಾಲ್, ಕಾಟಿಪಳ್ಳ ಮೊದಲಾದ ಕಡೆ ಸಂಘಟನೆಯ ಕಾರ್ಯಕರ್ತರು ಮನೆ, ಮನೆಗೆ ತೆರಳಿ ದ್ವೇಷ ಹರಡುವ ಸಂದೇಶಗಳಿಗೆ ಕಿವಿಗೊಡದಂತೆ ಭಾನುವಾರ ಮನವಿ ಮಾಡಿದರು. ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸ್ಥಳೀಯ ನಿವಾಸಿಗಳು ಸೌಹಾರ್ದದ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿದರು.
‘ದಕ್ಷಿಣ ಕನ್ನಡ ನಡೆಯುತ್ತಿರುವ ಕೊಲೆ ರಾಜಕಾರಣದ ವಿರುದ್ಧ ಹಾಗೂ ಕೋಮುವಾದದ ರಾಜಕಾರಣದ ಅನಾಹುತದ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸಬೇಕಿದೆ. ಜನಪರ ಸಂಘಟನೆಗಳು, ಜಾಗೃತ ನಾಗರಿಕರು ಈ ಅಭಿಯಾನವನ್ನು ಮುಂದಕ್ಕೊಯ್ಯಬೇಕು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ವಿನಂತಿಸಿದರು.
‘ಸರ್ಕಾರದ ಆಡಳಿತ ಯಂತ್ರ, ಶಾಸಕರು ಧರ್ಮಾಧರಿತ ತಾರತಮ್ಯ ನಡೆಸುತ್ತಿದ್ದಾರೆ. ಕೊಲೆಗೀಡಾದ ಯುವಕರ ಪೋಷಕರು ಹಾಗೂ ಜೈಲು ಪಾಲಾದ ಯುವಕರ ಪೋಷಕರು ಕಣ್ಣೀರು ಸುರಿಸುತ್ತಿದ್ದಾರೆ. ಹಿಂದು, ಮುಸ್ಲಿಂ ಸೌಹಾರ್ದದಿಂದ ಮಾತ್ರಇಂತಹ ಅಹಿತಕರ ಘಟನೆ ಮರುಕಳಿಸುವುದನ್ನು ತಡೆಯಬಹುದು’ ಎಂದರು.
‘ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಯಾವುದೇ ಕೋಮುಹತ್ಯೆಯ ತನಿಖೆಯೂ ಸರಿಯಾಗಿ ನಡೆದಿಲ್ಲ. ಈಚೆಗೆ ನಡೆದ ಕೋಮು ಹತ್ಯೆ ಪ್ರಕರಣಗಳ ತನಿಖೆ ಬಗ್ಗೆಯೂ ಸಾರ್ವಜನಿಕರಲ್ಲಿ ನಂಬಿಕೆ ಉಳಿದಿಲ್ಲ. ಫಾಝಿಲ್ ಕೊಲೆಯಾದ ಜಾಗದಲ್ಲಿ ಕೆಲವೇ ದಿನ ಮುನ್ನ ಏರ್ಪಡಿಸಿದ್ದ ಕಾರ್ಗಿಲ್ ವಿಜಯ ದಿನಾಚರಣೆಯಲ್ಲಿ ಈ ಹತ್ಯೆಯ ನಾಲ್ವರು ಆರೋಪಿಗಳೂ ಭಾಗಿಯಾಗಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಶ್ರದ್ಧಾಂಜಲಿ ಸಲ್ಲಿಸದ ಬಜರಂಗದ ದಳದ ಜಿಲ್ಲೆಯ ಕೆಲವು ನಾಯಕರು ಫಾಝಿಲ್ ಹತ್ಯೆ ನಡೆದ ಅರ್ಧ ಗಂಟೆಯಲ್ಲಿ ಪ್ರವೀಣ್‌ಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಇವರನ್ನು ಪೊಲೀಸರು ತನಿಖೆಗೆ ಒಳಪಡಿಸಿಲ್ಲ. ಈ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ಸಿಗಬೇಕಾದರೆ, ದಕ್ಷ ಈಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ತನಿಖೆ ನಡೆಸಬೇಕು’ ಎಂದು ಅವರು ಒತ್ತಾಯಿಸಿದರು.
‘ಮುಖ್ಯಮಂತ್ರಿಯವರು ಬಿಡಿ, ಕನಿಷ್ಠಪಕ್ಷ ತಹಸೀಲ್ದಾರ್ ಕೂಡಾ ಫಾಝಿಲ್ ಹಾಗೂ ಮಸೂದ್ ಮನೆಗೆ ಹೋಗಿ ಸಾಂತ್ವನ ಹೇಳಿಲ್ಲ. ಸಂತ್ರಸ್ತರಿಗೆ ಪರಿಹಾರವನ್ನು ಇನ್ನೂ ಘೋಷಣೆ ಮಾಡಿಲ್ಲ. ಇನ್ನಾದರೂ ಈ ತಾರತಮ್ಯವನ್ನು ಸರಿಪಡಿಸಲು ಸರ್ಕಾರ ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.