ಮಂಗಳೂರು: ನಗರದಲ್ಲಿ ರಾಜಾರೋಷವಾಗಿ ನಡೆಯುವ ಅಕ್ರಮ, ಅನ್ಯಾಯಗಳ ವಿರುದ್ಧ, ಬಿಜೆಪಿ ನೇತೃತ್ವದ ಸರ್ಕಾರದ ಜನವಿರೋಧಿ ನೀತಿಗಳ ವಿರುಧ್ದ ನಿರಂತರ ಮತ್ತು ನಿರ್ಭೀತವಾಗಿ ಧ್ವನಿ ಎತ್ತುತ್ತಿದ್ದ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿಯವರನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿರುವುದನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸಿದೆ.
ರಾಜ್ಯದ ಬಿಜೆಪಿ ಸರಕಾರದ ದುರಾಡಳಿತದ ವಿರುದ್ಧ, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಅವರ ಅಕ್ರಮ, ಅನ್ಯಾಯಗಳನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬರಹಗಳ ಮತ್ತು ವ್ಯಂಗ್ಯ ಚಿತ್ರಗಳ ಮೂಲಕ ವಿರೋಧ ದಾಖಲಿಸುತ್ತಿದ್ದರು. ಅವರ ಹೇಳಿಕೆಗಳು ಜನರ ಗಮನವನ್ನು ಸೆಳೆಯುತ್ತಿದ್ದುದರಿಂದ ಮುಜುಗರಕ್ಕೊಳಗಾಗುತ್ತಿದ್ದ ಸ್ಥಳೀಯ ಶಾಸಕರು ತಮ್ಮ ಅಧಿಕಾರ ಪ್ರಯೋಗಿಸಿ ಪೊಲೀಸರ ಮೂಲಕ ಹೋರಾಟಗಾರ ಸುನಿಲ್ ಬಜಿಲಕೇರಿ ಬಾಯಿಯನ್ನು ಮುಚ್ಚಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದೆ.
ಆಧಾರ ರಹಿತ ದೂರಿನಡಿಯಲ್ಲಿ ಸುನಿಲ್ ಅವರನ್ನು ಬಂಧಿಸಲಾಗಿದೆ. ಈ ಹಿಂದೆಯೂ ಇದೇ ರೀತಿ ಹೋರಾಟಗಾರ ಸುನಿಲ್ ಬಜಿಲಕೇರಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಮ್ಮೆ ಈ ರೀತಿ ಬಂಧಿಸಿದ್ದು ತೀರಾ ಖಂಡನೀಯ ಎಂದು ಕಿಡಿಕಾರಿದೆ.
ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜನಪ್ರತಿನಿಧಿಗಳ ವಿರುದ್ದ ಧ್ವನಿ ಎತ್ತಿದ್ದರೆ ಆಧಾರರಹಿತ ದೂರಿನಡಿ ಬಂಧಿಸಿ ಜೈಲಿಗಟ್ಟುವ ಮೂಲಕ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನವನ್ನು ಪದೇ ಪದೇ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರಗಳ ವರೆಗೂ ಇದೇ ರೀತಿಯ ನೀತಿಗಳನ್ನು ಅಳವಡಿಸುವ ಮೂಲಕ ಎಡಪಂಥೀಯ ಹೋರಾಟಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ ಜೈಲಿಗಟ್ಟಲಾಗುತ್ತಿದೆ. ಇದು ಸರ್ವಾಧಿಕಾರಿ ಧೋರಣೆ. ಜನವಿರೋಧಿ ನೀತಿಗಳನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಿಸಲಾಗುತ್ತಿದೆ. ಇಂತಹ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಕರೆ ನೀಡಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರದ ಈ ನಡೆಯನ್ನು ಹಾಗೂ ನಗರದ ಪೊಲೀಸ್ ಇಲಾಖೆಯ ಕ್ರಮವನ್ನು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಖಂಡಿಸುತ್ತದೆ ಎಂದು ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.