ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ಹೆದರಿಸಿ ₹10 ಲಕ್ಷ ವಸೂಲಿ ಮಾಡಿದ್ದ ಡಿವೈಎಸ್ಪಿ!

ಆರ್‌.ಡಿ. ಪಾಟೀಲ ಸಲಹೆ ಆಧರಿಸಿ ಮೇಳಕುಂದಿ, ಕಾಶಿನಾಥಗೆ ಕರೆ ಮಾಡಿದ್ದ ಸಾಲಿ

ಮನೋಜ ಕುಮಾರ್ ಗುದ್ದಿ
Published 10 ಜುಲೈ 2022, 18:45 IST
Last Updated 10 ಜುಲೈ 2022, 18:45 IST
ಮಲ್ಲಿಕಾರ್ಜುನ ಸಾಲಿ
ಮಲ್ಲಿಕಾರ್ಜುನ ಸಾಲಿ   

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಶಾಮೀಲಾದವರ ಮಾಹಿತಿ ಇದ್ದರೂ ಬಂಧಿಸುವುದನ್ನು ಬಿಟ್ಟು ₹80 ಲಕ್ಷಕ್ಕೆ ಬೇಡಿಕೆ ಇಟ್ಟು ಸಂಧಾನದ ಬಳಿಕಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ₹10 ಲಕ್ಷ ಪಡೆದಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ದಾಖಲಿಸಿದ್ದಾರೆ.

‘ಅಕ್ರಮದ ಕಿಂಗ್‌ಪಿನ್ ಅಫಜಲ ಪುರದ ಆರ್.ಡಿ.ಪಾಟೀಲ ಸೂಚನೆ ಆಧರಿಸಿ ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಮಂಜುನಾಥ ಮೇಳಕುಂದಿ ಹಾಗೂ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ ಚಿಳ್ಳ ಅವರಿಗೆ ಕರೆ ಮಾಡಿ ಸಾಲಿ ಬೆದರಿಕೆ ಹಾಕಿದ್ದಾರೆ. ಅಕ್ರಮವನ್ನು ಬಹಿರಂಗಪಡಿಸಬಾರದು ಎಂದಿದ್ದರೆ ಹಣ ನೀಡಬೇಕು. ಅಲ್ಲದೇ, ಆರ್.ಡಿ.ಪಾಟೀಲ ಹೇಳಿದಂತೆ ಕೇಳಬೇಕು’ ಎಂದೂ ತಾಕೀತು ಮಾಡಿದ್ದ ಬಗ್ಗೆ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

ಕರೆ ಮಾಡಿ ಬೆದರಿಕೆ ಹಾಕುವುದಕ್ಕೂ ಮುನ್ನ ಆರ್‌.ಡಿ.ಪಾಟೀಲ ಭೇಟಿ ಮಾಡಿದ್ದ ಸಾಲಿ ತಮಗೆ ₹10 ಲಕ್ಷ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನಾನು ಮನೆ ಕಟ್ಟಿಸುತ್ತಿದ್ದು, ಅಷ್ಟು ಹಣ ಕೊಡಲಾಗದು. ಮೇಳಕುಂದಿ, ಕಾಶಿನಾಥರನ್ನು ಹೆದರಿಸಿದರೆ ಹಣ ಸಿಗಬಹುದು ಎಂದು ಪಾಟೀಲ ಸಲಹೆ ಕೊಟ್ಟಿದ್ದರು.

ADVERTISEMENT

ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಗಿದ ಒಂದು ವಾರದ ಬಳಿಕ ಇಬ್ಬರಿಗೂ ಕರೆ ಮಾಡಿದ್ದ ಸಾಲಿ, ‌‘ನೀವು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಬಗ್ಗೆ ದೂರು ಬಂದಿದೆ. ಇಬ್ಬರೂ ನನ್ನನ್ನು ಭೇಟಿ ಮಾಡಬೇಕು ಎಂದು ತಾಕೀತು ಮಾಡಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಂಗಾಲಾದ ಮೇಳಕುಂದಿ, ಕಾಶಿನಾಥ ಇಬ್ಬರೂ ಆರ್‌.ಡಿ.ಪಾಟೀಲ ಮನೆಗೆ ಸಂಧಾನಕ್ಕೆ ತೆರಳುತ್ತಾರೆ. ಅಲ್ಲಿಂದಲೇ ಸಾಲಿ ಅವರಿಗೆ ವಾಟ್ಸ್‌ಆ್ಯಪ್ ಕರೆ ಮಾಡಿದ ಪಾಟೀಲ ಇಬ್ಬರೂ ಮನೆಗೆ ಬಂದಿದ್ದನ್ನು ತಿಳಿಸುತ್ತಾರೆ. ಅದೇ ಫೋನ್‌ನಲ್ಲಿ ಮೇಳಕುಂದಿ, ಕಾಶೀನಾಥ ಅವರೊಂದಿಗೆ ಮಾತನಾಡಿದ ಸಾಲಿ, ‘ಪ್ರಕರಣ ಮುಚ್ಚಿಹಾಕಲು ₹80 ಲಕ್ಷ ಕೊಡಬೇಕು’ ಎಂದು ಬೇಡಿಕೆ ಇಡುತ್ತಾರೆ. ಆದರೆ, ಅಷ್ಟು ಕೊಡಲು ಆಗುವುದಿಲ್ಲ. ₹10 ಲಕ್ಷ ಕೊಡುತ್ತೇವೆ ಎಂದು ಹೇಳಿದ್ದಕ್ಕೆ ಒಪ್ಪುತ್ತಾರೆ. ಅದಾದ ಎರಡು ದಿನದ ಬಳಿಕ ₹500 ಮುಖಬೆಲೆಯ ₹10 ಲಕ್ಷ ಮೊತ್ತದ 20 ಬಂಡಲ್ ನೋಟುಗಳನ್ನು ಪಾಟೀಲಗೆ ತಲುಪಿಸುತ್ತಾರೆ. ಅದೇ ದಿನ ರಾತ್ರಿ ಈ ಹಣವನ್ನು ಕಲಬುರಗಿಯ ಉದನೂರ ರಸ್ತೆಯಲ್ಲಿ ಸಾಲಿ ಅವರಿಗೆ ತಲುಪಿಸಿದ್ದಾಗಿ ಪಾಟೀಲ ಒಪ್ಪಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ಚಾರ್ಜ್ ಶೀಟ್‌ನಲ್ಲಿ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.