ನವದೆಹಲಿ: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಸಿಬಿಐ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ವಿಶೇಷ ಮೇಲ್ಮನವಿ ಅರ್ಜಿ ವಜಾಗೊಂಡಿದೆ.
ಸಿಬಿಐ ಕ್ರಮ ಪ್ರಶ್ನಿಸಿ ಗಣಪತಿ ಸಹೋದರಿ ಸಬಿತಾ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ಚಂದ್ರ ಶರ್ಮ ಅವರನ್ನೊಳಗೊಂಡ ಪೀಠ ಮಂಗಳವಾರ ವಜಾಗೊಳಿಸಿದೆ.
ಗಣಪತಿ ಆತ್ಮಹತ್ಯೆಗೆ ಜಾರ್ಜ್, ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಾಂತಿ ಕಾರಣ ಎಂಬ ಆರೋಪದಡಿ ದಾಖಲಾದ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ‘ಬಿ’ ವರದಿ ಸಲ್ಲಿಸಿತ್ತು.
ಆದರೆ, ಸಿಬಿಐ ವರದಿಯನ್ನು ತಿರಸ್ಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿತ್ತು. ವಿಶೇಷ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತ್ತು.
ಪಶ್ಚಿಮ ವಲಯದ (ಮಂಗಳೂರು) ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಹುದ್ದೆಯಲ್ಲಿದ್ದ ಗಣಪತಿ 2016ರ ಜುಲೈ 7ರಂದು ಮಡಿಕೇರಿಯ ಲಾಡ್ಜ್ ಒಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣವ್ ಮೊಹಾಂತಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಸಾಯುವ ಮುನ್ನ ಸ್ಥಳೀಯ ಟಿ.ವಿ. ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ಆತ್ಮಹತ್ಯೆಗೆ ಜಾರ್ಜ್ ಮತ್ತು ಐಪಿಎಸ್ ಅಧಿಕಾರಿಗಳು ಕಾರಣ ಎಂದು ಆರೋಪಿಸಿ ಗಣಪತಿ ಅವರ ಮಗ ನೇಹಲ್ ಸಲ್ಲಿಸಿದ್ದ ಖಾಸಗಿ ದೂರಿನ ಆಧಾರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ವರ್ಗಾಯಿಸಿತ್ತು. 42 ದಾಖಲೆಗಳನ್ನು ಸಂಗ್ರಹಿಸಿ, 108 ಸಾಕ್ಷಿಗಳ ವಿಚಾರಣೆ ನಡೆಸಿದ್ದ ಸಿಬಿಐ ತನಿಖಾ ತಂಡ, 2019ರ ಅಕ್ಟೋಬರ್ 30ರಂದು ‘ಬಿ’ ವರದಿ ಸಲ್ಲಿಸಿತ್ತು.
‘ಸಾಯುವ ಮುನ್ನ ಗಣಪತಿ ಹೇಳಿದ್ದ ಯಾವುದೇ ಸಂಗತಿಯೂ ಅವರ ಆತ್ಮಹತ್ಯೆಗೆ ಕಾರಣವಲ್ಲ’ ಎಂದು ವರದಿಯಲ್ಲಿ ಹೇಳಿತ್ತು. 2020ರ ಆಗಸ್ಟ್‌ನಲ್ಲಿ ‘ಬಿ’ ವರದಿ ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯ, ಮೂವರಿಗೂ ಸಮನ್ಸ್ ಜಾರಿ ಮಾಡಿತ್ತು.
ಇದಕ್ಕೂ ಮೊದಲು ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರಣೆಗೆ ನ್ಯಾ. ಕೆ.ಎನ್. ಕೇಶವನಾರಾಯಣ ನೇತೃತ್ವದಲ್ಲಿ ರಚಿಸಿದ್ದ ಏಕಸದಸ್ಯ ಆಯೋಗವು 2018ರ ಫೆಬ್ರವರಿ 27ರಂದು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. ಜಾರ್ಜ್ ಹಾಗೂ ಪ್ರಣಬ್ ಮೊಹಾಂತಿ, ಎ.ಎಂ. ಪ್ರಸಾದ್ ಅವರಿಗೆ ಈ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿತ್ತು.
‘ಈ ನೆಲದ ಕಾನೂನಿನ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ನ್ಯಾಯ ಯಾವತ್ತೂ ಸತ್ಯದ ಪರವಾಗಿರುತ್ತದೆ ಎಂಬುದು ಈಗ ಮತ್ತೊಮ್ಮೆ ಸಾಬೀತಾಗಿದೆ. ನನ್ನ ವಿರುದ್ಧ ಮಾಡಿದ್ದ ಸುಳ್ಳು ಆರೋಪಗಳಿಂದ ಮುಕ್ತಿ ಸಿಕ್ಕಿದೆ’ ಎಂದು ಜಾರ್ಜ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.