ಬೆಳಗಾವಿ: ರಾಜ್ಯ ಸರ್ಕಾರದ ಇ–ಆಡಳಿತ ಇಲಾಖೆಯು, ತಂತ್ರಾಂಶ ಅಭಿವೃದ್ಧಿಯಲ್ಲಿ ಮಾಡಿದ ಲೋಪದಿಂದಾಗಿ ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿವರೆಗಿನ 31 ಲಕ್ಷ ವಿದ್ಯಾರ್ಥಿಗಳಿಗೆ ಇನ್ನೂ ವಿದ್ಯಾರ್ಥಿ ವೇತನ ಸಿಕ್ಕಿಲ್ಲ.
ಇ–ಆಡಳಿತ ಇಲಾಖೆಯು ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ಘಟಕದ ಸಹಯೋಗದಲ್ಲಿ ಸಮಗ್ರ ಹಾಗೂ ಏಕೀಕೃತ ವಿದ್ಯಾರ್ಥಿವೇತನ ವಿತರಣೆ ತಂತ್ರಾಂಶ ಅಭಿವೃದ್ಧಿಪಡಿಸಿತ್ತು. ಅದನ್ನು ಮುಖ್ಯಮಂತ್ರಿ ಅವರು ಸೆಪ್ಟೆಂಬರ್‌ನಲ್ಲಿ ಲೋಕಾರ್ಪಣೆ ಮಾಡಿದ್ದರು. ಇನ್ನು ವ್ಯವಸ್ಥೆ ಸುಲಲಿತ ಎಂದು ಮುಖ್ಯಮಂತ್ರಿ ಹಾಗೂ ಸಚಿವರು ಬಣ್ಣಿಸಿದ್ದರು. ಆದರೆ, ತಂತ್ರಾಂಶ ಇನ್ನೂ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ.
ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಇ–ಆಡಳಿತ ಇಲಾಖೆ ತಿಳಿಸಿತ್ತು.
‘ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಮೆಟ್ರಿಕ್‌ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಗಳ ವಿತರಣೆ ಪ್ರಕ್ರಿಯೆ ಸರಳಗೊಳಿಸಲಾಗಿದ್ದು, ಅನಗತ್ಯ ವಿಳಂಬ ತಪ್ಪಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದರು. ಆದರೆ, ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ತಂತ್ರಾಂಶದ ಲಾಭ ಸಿಕ್ಕಿದೆ.ಇ–ಆಡಳಿತ ಇಲಾಖೆಯ ಅಧಿಕಾರಿಗಳು ಆರಂಭದಲ್ಲಿ ಸಬೂಬು ಹೇಳುತ್ತಾ ಕಾಲಹರಣ ಮಾಡಿದರು. ಬಳಿಕ ಅಧಿಕಾರಿಗಳು ಕೈಚೆಲ್ಲಿದರು. ಇದರಿಂದಾಗಿ, ವಿದ್ಯಾರ್ಥಿ ವೇತನದ ವಿತರಣೆಯಲ್ಲಿ ಬಹಳ ವಿಳಂಬವಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ತಂತ್ರಾಂಶ ಅಭಿವೃದ್ಧಿಪಡಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಈ ವರ್ಷ ತಂತ್ರಾಂಶ ಅಭಿವೃದ್ಧಿ ಕಷ್ಟ ಎಂದು ಪ್ರತಿಕ್ರಿಯಿಸಿದರು. ಹಾಗಾಗಿ, ಹಳೆ ಪದ್ಧತಿಯಲ್ಲೇ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. 1.1 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದ್ದು, 1.5 ಲಕ್ಷ ಮಂದಿಗೆ ಬಾಕಿ ಇದೆ’ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 29 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಗುತ್ತದೆ. ತಂತ್ರಾಂಶಕ್ಕಾಗಿ ಇಲಾಖೆಯ ಅಧಿಕಾರಿಗಳು ಸೆಪ್ಟೆಂಬರ್‌ವರೆಗೆ ಕಾದರು. ಇನ್ನು ಕಾದರೆ ಇನ್ನಷ್ಟು ವಿಳಂಬವಾಗಲಿದೆ ಎಂದು ಅರಿತ ಇಲಾಖೆಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಗಮನಕ್ಕೆ ತಂದರು. ಹಳೆಯ ಪದ್ಧತಿಯಂತೆ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಎಂದು ಮುಖ್ಯ ಕಾರ್ಯದರ್ಶಿ ಸೂಚನೆ ನೀಡಿದರು. ಬಳಿಕ ಪ್ರಕ್ರಿಯೆ ವೇಗ ಪಡೆದುಕೊಂಡಿತು. ಡಿಸೆಂಬರ್ ಅಂತ್ಯದ ವೇಳೆಗೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗಬಹುದು. ಸಾಮಾನ್ಯವಾಗಿ, ನವೆಂಬರ್ 15ರೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳ ದತ್ತಾಂಶ ಲಭ್ಯ ಇತ್ತು. ಅದನ್ನು ತಂತ್ರಾಂಶಕ್ಕೆ ಅಳವಡಿಸಿ ತ್ವರಿತವಾಗಿ ವಿದ್ಯಾರ್ಥಿಗಳಿಗೆ ಹಣ ವರ್ಗಾಯಿಸಿದೆವು. ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿಗಳ ದತ್ತಾಂಶ ಲಭ್ಯ ಇರಲಿಲ್ಲ. ಅಲ್ಲದೆ, ಒಂದೊಂದು ವಿಭಾಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಒಂದೊಂದು ಬಗೆಯಿದೆ. ಇದರಿಂದಾಗಿ, ತಂತ್ರಾಂಶ ಅಭಿವೃದ್ಧಿಯಲ್ಲಿ ವಿಳಂಬವಾಯಿತು’ ಎಂದು ಇ–ಆಡಳಿತ ಇಲಾಖೆಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.
ಈಗಿನ ವ್ಯವಸ್ಥೆ ಹೇಗೆ?
ವಿವಿಧ ಇಲಾಖೆಗಳು ಈವರೆಗೆ ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ವಿದ್ಯಾರ್ಥಿ ವೇತನ ವಿತರಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿದ್ದು, ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಅದರ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ತಾಲ್ಲೂಕು ಕಚೇರಿಗೆ ಸಲ್ಲಿಸಬೇಕಿದೆ. ಇಲಾಖಾ ಅಧಿಕಾರಿಗಳು ಪರಿಶೀಲನೆ ನಡೆಸಿ ಮಂಜೂರಾತಿ ನೀಡುತ್ತಾರೆ. ವ್ಯವಸ್ಥೆಯಲ್ಲಿ ಏಕರೂಪತೆಯ ಕೊರತೆಯಿಂದ ಅರ್ಜಿಗಳ ಪರಿಶೀಲನೆ ಹಾಗೂ ಅನುಷ್ಠಾನ ವಿಳಂಬವಾಗುತ್ತಿದೆ.
*
ವಿದ್ಯಾರ್ಥಿ ವೇತನಕ್ಕೆ ಆಧಾರ್ ಜೋಡಣೆ ಮಾಡಲಾಗಿದ್ದು, ಒಂದು ವಾರದೊಳಗೆ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ.
-ಮೊಹಮ್ಮದ್ ಮೊಹಿಸಿನ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ
ಅಂಕಿ– ಅಂಶಗಳು
* 50 –ಲಕ್ಷ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳು (ಎಸ್ಸೆಸ್ಸೆಲ್ಸಿಯಿಂದ ಸ್ನಾತಕೋತ್ತರ ಪದವಿ)
*29 ಲಕ್ಷ –ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿಗಳು
*20 ಲಕ್ಷ – ವಿದ್ಯಾರ್ಥಿಗಳ ಪರಿಶೀಲನೆ ಪೂರ್ಣ
*9 ಲಕ್ಷ –ವಿದ್ಯಾರ್ಥಿಗಳ ಪರಿಶೀಲನೆ ಇನ್ನಷ್ಟೇ ನಡೆಯಬೇಕಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.