ಬೆಂಗಳೂರು: ಸರ್ಕಾರದ ಅಧಿಕೃತ ದತ್ತಾಂಶವನ್ನು ತ್ವರಿತಗತಿಯಲ್ಲಿ ಹಂಚಿಕೊಳ್ಳಲು ‘ಇ–ಸಹಮತಿ’ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಈ ವ್ಯವಸ್ಥೆ ದೇಶದಲ್ಲಿ ಪ‍್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೊಳ್ಳುತ್ತಿದೆ.
'ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್' (ಎನ್‌ಐಸಿ) ಅಭಿವೃದ್ಧಿಪಡಿಸಿರುವ ಈ ತಂತ್ರಾಂಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಷ್ಠಾನಗೊಳಿಸುತ್ತಿದೆ. ನಾಗರಿಕರ ಬಳಕೆಗೆ ಅವಕಾಶ ಕಲ್ಪಿಸುವ ಮೊಬೈಲ್ ಆ್ಯಪ್ ಸಹ ಶೀಘ್ರ ಲಭ್ಯವಾಗಲಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಇ– ಆಡಳಿತ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ಕುರಿತ ವಿವರ ನೀಡಿದರು.
‘ವಿದ್ಯಾರ್ಥಿಗಳಿಗೆ ಈ ಸಾಫ್ಟ್‌ವೇರ್‌ನಿಂದ ಅತಿ ಹೆಚ್ಚು ಅನುಕೂಲ. ಈ ವ್ಯವಸ್ಥೆಯ ಮಾಹಿತಿಯ ಮೇಲೆ ನಾಗರಿಕರೇ ಸಂಪೂರ್ಣ ನಿಯಂತ್ರಣ ಹೊಂದಿರುತ್ತಾರೆ. ಇದರಲ್ಲಿ ಸರ್ಕಾರದ ಪಾತ್ರ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ವಿವಿಧ ಕಂಪನಿಗಳು ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ವಿವರಗಳ ದಾಖಲೆಗಳನ್ನು ಪರಿಶೀಲಿಸಲು ಬಯಸುತ್ತವೆ. ಅಂತಹ ಕಂಪನಿಗಳು, ವಿಶ್ವವಿದ್ಯಾಲಯಗಳು ಅಥವಾ ಪರೀಕ್ಷಾ ಮಂಡಳಿಗಳಿಂದ ಲಭ್ಯವಿರುವ ವಿವಿಧ ವಿಷಯಗಳ ಅಂಕಗಳ ಮಾಹಿತಿಯನ್ನು ಇ–ಸಹಮತಿ ಮೂಲಕ ಪಡೆಯಬಹುದು. ಇಲ್ಲಿ ಇ–ಸಹಮತಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಆದರೆ, ಇದಕ್ಕೆ ವಿದ್ಯಾರ್ಥಿಗಳ ಒಪ್ಪಿಗೆ ಕಡ್ಡಾಯ’ ಎಂದು ತಿಳಿಸಿದರು.
‘ಅಧಿಕೃತ ಕಂಪನಿಗಳಿಗೆ ಮಾತ್ರ ಇ–ಸಹಮತಿಯಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಂಪನಿಗಳು ₹50 ಸಾವಿರ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯು ಅನುಮೋದನೆ ನೀಡಿದರೆ ಮಾತ್ರ ಕಂಪನಿಗಳ ನೋಂದಣಿಗೆ ಅವಕಾಶ ಇದೆ. ಇದರಿಂದ, ನಕಲಿ ಕಂಪನಿಗಳಿಗೆ ಮತ್ತು ದತ್ತಾಂಶ ದುರುಪಯೋಗಪಡಿಸಿಕೊಳ್ಳುವವರಿಗೆ ಅವಕಾಶ ಇರುವುದಿಲ್ಲ’ ಎಂದು ವಿವರಿಸಿದರು.
‘ರಾಜ್ಯದ 63 ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳು ಈಗಾಗಲೇ ಇ–ಸಹಮತಿ ವೇದಿಕೆಯಲ್ಲಿ ನೋಂದಾಯಿಸಿಕೊಂಡಿವೆ. ಧಾರವಾಡದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಮತ್ತು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ) ನೋಂದಾಯಿಸಿಕೊಂಡಿಲ್ಲ. ಶೀಘ್ರದಲ್ಲಿ ಈ ಎರಡು ಸಂಸ್ಥೆಗಳು ಸಹ ನೋಂದಾಯಿಸಿಕೊಳ್ಳಲಿವೆ’ ಎಂದು ತಿಳಿಸಿದರು.
‘ಈ ವ್ಯವಸ್ಥೆಯಿಂದ ಕಾಗದ ರೂಪದ ಬದಲು ಡಿಜಿಟಲ್ ವ್ಯವಸ್ಥೆಯ ಮೂಲಕ ಮಾಹಿತಿ ಪಡೆದುಕೊಳ್ಳಬಹುದು. ಇದರಿಂದ ದಾಖಲೆಗಳನ್ನು ತಿರುಚಲು ಅವಕಾಶ ಇರುವುದಿಲ್ಲ. ಕಂಪನಿಗಳಿಗೂ ಪ್ರತಿಗಳನ್ನು ಸಲ್ಲಿಸುವ ಅಗತ್ಯವೇ ಬೀಳುವುದಿಲ್ಲ. ಹಂತ ಹಂತವಾಗಿ ಎಲ್ಲ ಇಲಾಖೆಗಳೂ ಈ ವೇದಿಕೆ ವ್ಯಾಪ್ತಿಯಲ್ಲಿ ಸೇರಿಕೊಳ್ಳಲಿವೆ. ಈ ಸಾಫ್ಟ್‌ವೇರ್ ಅಳವಡಿಸಿಕೊಳ್ಳಲು ತೆಲಂಗಾಣ ಸರ್ಕಾರವೂ ಆಸಕ್ತಿ ತೋರಿದ್ದು, ನಮ್ಮನ್ನು ಸಂಪರ್ಕಿಸಿದೆ’ ಎಂದು ತಿಳಿಸಿದರು.
ಕಾರ್ಯನಿರ್ವಹಣೆ ಹೇಗೆ?
ವಿದ್ಯಾರ್ಥಿಯ ಒಪ್ಪಿಗೆ ಅನ್ವಯ, ‘ಆಧಾರ್’ ಸಂಖ್ಯೆಯ ದೃಢೀಕರಣ ಮೂಲಕ ದತ್ತಾಂಶ ಪಡೆಯಬಹುದು.
ವಿದ್ಯಾರ್ಥಿಯು ಲಾಗಿನ್ ಆದ ಬಳಿಕ ‘ಆಧಾರ್’ ಸಂಖ್ಯೆ ನಮೂದಿಸಬೇಕು. ಬಳಿಕ, ‘ಒಟಿಪಿ’ ಸಂದೇಶ ರವಾನೆಯಾಗುತ್ತದೆ. ವಿದ್ಯಾರ್ಥಿಯು ‘ಒಟಿಪಿ’ ದಾಖಲಿಸಿದಾಗ ಮಾತ್ರ ನೋಂದಾಯಿಸಿಕೊಂಡಿರುವ ಕಂಪನಿಯು ಆಯಾ ಪರೀಕ್ಷಾ ಮಂಡಳಿ ಅಥವಾ ಶಿಕ್ಷಣ ಸಂಸ್ಥೆಗಳಿಂದ ದತ್ತಾಂಶ ಪಡೆಯಬಹುದು. ಕಂಪನಿಗಳು ಗರಿಷ್ಠ ಎರಡು ವರ್ಷಗಳವರೆಗೆ ಮಾತ್ರ ಈ ದತ್ತಾಂಶವನ್ನು ನೋಡಬಹುದು.
‘ಸದ್ಯ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಿಗೆ ಸಂಬಂಧಿಸಿದ 2003ರ ನಂತರದ ಮಾಹಿತಿ ಮತ್ತು ಪಿಯು ಪರೀಕ್ಷೆಗಳ 2008ರ ನಂತರದ ವಿವರಗಳನ್ನು ಸಂಗ್ರಹಿಸಲಾಗಿದೆ. ಇತರ ಶಿಕ್ಷಣ ಸಂಸ್ಥೆಗಳ ಹತ್ತು ವರ್ಷಗಳ ಮಾಹಿತಿಯೂ ನಮ್ಮ ಬಳಿ ಇದೆ’ ಎಂದು ರಾಜೀವ್ ಚಾವ್ಲಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.