ADVERTISEMENT

ಶರಾವತಿ ಯೋಜನೆಗೆ ಪರಿಸರ ಸೂಕ್ಷ್ಮ ಕಾಡು

*ಯೋಜನೆಗೆ 125 ಎಕರೆ ಅರಣ್ಯ ಬಳಕೆ *ವನ್ಯಜೀವಿ ಅನುಮೋದನೆಗೆ ಕೇಂದ್ರಕ್ಕೆ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 23:45 IST
Last Updated 12 ಆಗಸ್ಟ್ 2024, 23:45 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಅಳಿವಿನಂಚಿನಲ್ಲಿರುವ ’ಸಿಂಹದ ಬಾಲದ ಸಿಂಗಳಿಕ’ದ ಆವಾಸಸ್ಥಾನದಲ್ಲಿ ಅನುಷ್ಠಾನಗೊಳ್ಳಲಿರುವ ‘ಶರಾವತಿ ಪಂಪ್ಡ್‌ ಸ್ಟೋರೇಜ್‌’ ಯೋಜನೆಗೆ 125 ಎಕರೆ ಕಾಡು ಬಳಸಲು ಅನುಮೋದನೆ ಕೋರಿ ಕೇಂದ್ರ ಅರಣ್ಯ, ಪರಿಸರ ಹಾಗೂ ತಾ‍ಪಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕ ವಿದ್ಯುತ್‌ ನಿಗಮ (ಕೆಪಿಸಿ) ಮತ್ತೆ ಪ್ರಸ್ತಾವನೆ ಸಲ್ಲಿಸಿದೆ. 

ವಿದ್ಯುತ್‌ ಉತ್ಪಾದನೆಗೆ ಬಳಸಿದ ನೀರನ್ನು ಮತ್ತೆ ಮತ್ತೆ ಪಂಪ್‌ಗಳ ಮೂಲಕ ಹಿಂದಕ್ಕೆ ಕೊಂಡೊಯ್ದು, ತಲಾ 250 ಮೆಗಾವಾಟ್‌ ಸಾಮರ್ಥ್ಯದ ಎಂಟು ಜಲ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬಳಸುವ ಈ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ವಿದ್ಯುತ್‌ ಪ್ರಾಧಿಕಾರ ಈಚೆಗೆ ಅನುಮೋದನೆ ನೀಡಿತ್ತು. ಯೋಜನೆಗೆ ಅರಣ್ಯ ಹಾಗೂ ವನ್ಯಜೀವಿ ಅನುಮೋದನೆ ಪಡೆಯಬೇಕಿದೆ. ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಪರಿಶೀಲಿಸಿ ಕೇಂದ್ರ ಪರಿಸರ ಸಚಿವರ ಅಧ್ಯಕ್ಷತೆಯ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ವನ್ಯಜೀವಿ ಅನುಮೋದನೆ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಿದೆ. 

ADVERTISEMENT

ಯೋಜನೆಗೆ ಶಿವಮೊಗ್ಗ, ಸಾಗರ ಹಾಗೂ ಹೊನ್ನಾವರ ವಲಯಗಳ ವನ್ಯಜೀವಿ ಧಾಮ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ 125 ಎಕರೆ ಕಾಡು ಹಾಗೂ 215 ಎಕರೆ ಅರಣ್ಯೇತರ ಜಾಗ ಬಳಸಲು ಪ್ರಸ್ತಾಪಿಸಲಾಗಿದೆ. ಈ ವಿದ್ಯುತ್‌ ಯೋಜನೆಯನ್ನು ಅಸ್ತಿತ್ವದಲ್ಲಿರುವ ಎರಡು ಜಲಾಶಯಗಳ ನಡುವೆ ನಿರ್ಮಿಸಲಾಗುತ್ತದೆ. ತಲಕಳಲೆ ಅಣೆಕಟ್ಟೆ ಮೇಲಿನ ಜಲಾಶಯ ಆಗಿರಲಿದೆ. ಗೇರುಸೊಪ್ಪ ಅಣೆಕಟ್ಟೆ ಕೆಳಗಿನ ಜಲಾಶಯ ಆಗಿರಲಿದೆ. ಹೊಸ ಜಲಾಶಯ ನಿರ್ಮಿಸುವ ಪ್ರಸ್ತಾಪ ಇಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ. 

ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ನಾಲ್ಕು ಗ್ರಾಮಗಳ ಜನರು ನೆಲೆ ಕಳೆದುಕೊಳ್ಳಲಿದ್ದಾರೆ. ಅವರಿಗೆ ಪುನರ್ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅದಕ್ಕೆ ಯೋಜನೆ ರೂಪಿಸಲಾಗುತ್ತದೆ. ಯೋಜನೆಯಿಂದ 15 ಸಾವಿರ ಮರಗಳಿಗೆ ಕುತ್ತು ಉಂಟಾಗಲಿದೆ. ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಜಾಗ ಗುರುತಿಸಲಾಗಿದೆ. ವಾರ್ಷಿಕ 2,977 ಮಿಲಿಮೀಟರ್ ಮಳೆಯಾಗುವ ಈ ಪ್ರದೇಶದಲ್ಲಿ 13.10 ಕೋಟಿ ಕ್ಯೂಬಿಕ್‌ ಮೀಟರ್‌ (ಎಂಸಿಎಂ) ನೀರು ಲಭ್ಯ ಇದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. 

‘ಸಿಂಹ ಬಾಲದ ಸಿಂಗಳಿಕ ಪಶ್ಚಿಮ ಘಟ್ಟದಲ್ಲಿರುವ ಅಪರೂಪದ ಪ್ರಾಣಿ. ಇದು ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ಪಶ್ಚಿಮ ಘಟ್ಟದಲ್ಲಷ್ಟೇ ಇದೆ. ಪ್ರಸ್ತಾವಿತ ಯೋಜನೆಯು ಶರಾವತಿ ಕಣಿವೆ ಸಿಂಗಳಿಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿದೆ. ಈ ಯೋಜನೆ ಅನುಷ್ಠಾನಗೊಂಡರೆ ಈ ಪ್ರಾಣಿ ಸಂಕುಲಕ್ಕೆ ಕಂಟಕ ಎದುರಾಗಲಿದೆ’ ಎಂದು ಪರಿಸರ ಕಾರ್ಯಕರ್ತ ರಾಮಪ್ರಸಾದ್‌ ಎಚ್ಚರಿಸಿದರು. 

‘ಪಶ್ಚಿಮ ಘಟ್ಟದ ಉದ್ದಕ್ಕೂ ವಿವಿಧ ಅಭಿವೃದ್ಧಿ ಕಾಮಗಾರಿ, ಪ್ರವಾಸೋದ್ಯಮ ಚಟುವಟಿಕೆಗಳಿಂದಾಗಿ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ಶರಾವತಿ ಯೋಜನೆಯಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಹೀಗಾಗಿ, ಈ ಯೋಜನೆ ಕೈಬಿಡಬೇಕು’ ಎಂದು ಅವರು ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.