ಬೆಂಗಳೂರು: ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ (ಯುವಿಸಿಇ) ಖಾಸಗೀಕರಣ ಮಾಡಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರ ಕ್ರಮವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ಯುವಿಸಿಇ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಈಗ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡುವ ಮೂಲಕ ರಾಜ್ಯದಲ್ಲಿ ಉಳಿದಿರುವ ಕೆಲವೇ ಸರ್ಕಾರಿ ಕಾಲೇಜುಗಳನ್ನೂ ಸಹ ಖಾಸಗೀಕರಣ ಮಾಡಿ ಬಡವರ ಮಕ್ಕಳಿಗೆ ಎಂಜಿನಿಯರಿಂಗ್ ಓದು ಲಭ್ಯವಿಲ್ಲದಂತೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಅಶ್ವತ್ಥನಾರಾಯಣ ಹೊರಟಿದ್ದಾರೆ. ಇದು ಬಿಜೆಪಿ ಸರ್ಕಾರದ ಬಡವರ ವಿರೋಧಿ ನೀತಿಯಾಗಿದೆ’ ಎಂದು ವಾಗ್ದಾಳಿ ನಡೆಸಿದೆ.
‘ಕನ್ನಡಿಗರ ಹೆಮ್ಮೆಯ ವಿಶ್ವೇಶ್ವರಯ್ಯ ಕಾಲೇಜು ವಿಶ್ವವಿದ್ಯಾಲಯವನ್ನು ಖಾಸಗೀಕರಣ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ಕ್ರಮ ಖಂಡನೀಯ. ಸರ್ ಎಂ ವಿಶ್ವೇಶ್ವರಯ್ಯನವರು ಕಟ್ಟಿದ ರಾಜ್ಯದ ಮೊದಲ ಎಂಜಿನಿಯರಿಂಗ್ ಕಾಲೇಜು ಇದಾಗಿದ್ದು ರಾಜ್ಯದ ಎಲ್ಲಾ ವರ್ಗದ ಮಕ್ಕಳಿಗೂ ಎಂಜಿನಿಯರಿಂಗ್ ಓದಲು ಇದು ಆಸರೆಯಾಗಿತ್ತು’ ಎಂದು ಕಾಂಗ್ರೆಸ್ ತಿಳಿಸಿದೆ.
ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಶಯ ಹೊಂದಿದ್ದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿಗೆ ಈಗ ಆರ್ಥಿಕ ಸಂಕಷ್ಟ ಎದುರಾಗಿದೆ.
1964ರಿಂದ ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಈ ಕಾಲೇಜಿಗೆ 2022ರ ಮಾರ್ಚ್ 25ರಿಂದ ಸ್ವಾಯತ್ತತೆ ನೀಡಿದ್ದರೂ, ರಾಜ್ಯ ಸರ್ಕಾರ ಅನುದಾನ ನೀಡಲು ಹಿಂದೇಟು ಹಾಕುತ್ತಿದೆ. ಇದರಿಂದ, ಕಾಲೇಜು ಅತಂತ್ರ ಸ್ಥಿತಿಗೆ ಸಿಲುಕಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಬಡವರ್ಗದ ವಿದ್ಯಾರ್ಥಿಗಳೇ ಪ್ರವೇಶ ಪಡೆಯುವ ಈ ಕಾಲೇಜಿಗೆ ಅನುದಾನ ಒದಗಿಸದೆ ಸ್ವಯಂ ಹಣಕಾಸು ನಿರ್ವಹಣೆಯ ಸಂಸ್ಥೆಯನ್ನಾಗಿ ಮಾಡುವ ಯೋಜನೆ ಇದಾಗಿದೆ ಎಂದು ದೂರಲಾಗಿದೆ. ಸದ್ಯದ ಗೊಂದಲಗಳಿಂದಾಗಿ ಮಾರ್ಚ್ ತಿಂಗಳ ವೇತನವೂ ಪ್ರಾಧ್ಯಾಪಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗೆ ದೊರೆಯುವುದು ಕಷ್ಟಸಾಧ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.