ಬೆಂಗಳೂರು: ದೇಶದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಹಿಂಜರಿತದ ಕಾರ್ಮೋಡವು ರಾಜ್ಯದ ಜವಳಿ ವ್ಯಾಪಾರದ ಮೇಲೆಯೂ ನಿಧಾನವಾಗಿ ಆವರಿಸಲು ಆರಂಭಿಸಿದೆ. ಬೆಂಗಳೂರಿನ ಹೃದಯಭಾಗದಲ್ಲಿ ಇರುವ ಚಿಕ್ಕಪೇಟೆಯಲ್ಲಿ ಇರುವ ಬಟ್ಟೆ ವ್ಯಾಪಾರಿಗಳೂ ಇದರ ಬಿಸಿಯನ್ನು ಅನುಭವಿಸಲಾರಂಭಿಸಿದ್ದಾರೆ.
ಜನರ ಕೈಯಲ್ಲಿ ದುಡ್ಡು ಓಡಾಡದೆ, ಖರೀದಿಸುವ ಶಕ್ತಿ ಕಡಿಮೆಯಾಗಿದೆ. ಇದರಿಂದ ಉತ್ಪನ್ನಗಳ ಬೇಡಿಕೆಯೂ ತಗ್ಗುತ್ತಿದೆ. ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ, ವಿಜಯಪುರ, ಅಥಣಿ ಮಾತ್ರವಲ್ಲದೆ, ಹೊರ ರಾಜ್ಯಗಳಾದ ತಮಿಳುನಾಡು, ಕೇರಳಕ್ಕೂ ಇಲ್ಲಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಜವಳಿ ರಫ್ತಾಗುತ್ತಿತ್ತು. ಆದರೆ, ನೋಟು ರದ್ದತಿ, ಜಿಎಸ್‌ಟಿಯ ಅಡ್ಡಪರಿಣಾಮಗಳು ಇಲ್ಲಿನ ಖರೀದಿ-ಮಾರಾಟದ ಚಟುವಟಿಕೆಗಳನ್ನು ಕಡಿಮೆಯಾಗುವಂತೆ ಮಾಡಿವೆ. ರಫ್ತು ವಹಿವಾಟು ಶೇ 35ರಷ್ಟು ಕಡಿಮೆಯಾಗಿದೆ.
ಇದೇ ವರ್ಷದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಜವಳಿ ವ್ಯಾಪಾರದಲ್ಲಿ ಶೇ 20ರಷ್ಟು ಇಳಿಕೆಯಾಗಿದೆ. ಹೀಗಾಗಿ, ಚಿಕ್ಕಪೇಟೆಯಲ್ಲಿ ಮೊದಲಿದ್ದಷ್ಟು ಜನಜಂಗುಳಿ, ವಾಹನ ದಟ್ಟಣೆ ಕಾಣುತ್ತಿಲ್ಲ. ಧಾವಂತದಲ್ಲಿ ಹೆಜ್ಜೆ ಹಾಕುವ ಅಗತ್ಯವೂ ಇಲ್ಲ. ವ್ಯಾಪಾರ ಕಡಿಮೆಯಾಗಿರುವುದರಿಂದ ಮಳಿಗೆಗಳ ವೆಚ್ಚ ನಿರ್ವಹಣೆ ಕಷ್ಟವಾಗುತ್ತಿದೆ. ಕೆಲಸಗಾರರ ಸಂಖ್ಯೆ ತಗ್ಗಿಸುವ ಮೂಲಕ ಹೊರೆ ಇಳಿಸಿಕೊಳ್ಳಲಾಗುತ್ತಿದೆ.
ಕಳೆದ ಒಂದು ವರ್ಷಕ್ಕೆ ಹೋಲಿಸಿದರೂ, ಸದ್ಯ, ಗ್ರಾಹಕರಿಲ್ಲದೆ ಬಣಗುಡುತ್ತಿದ್ದ ಬಟ್ಟೆ ಅಂಗಡಿಗಳೇ ಹೆಚ್ಚಾಗಿ ಕಂಡುಬಂದವು. ತಳ್ಳುಗಾಡಿಯಲ್ಲಿ ಸರಕು ಸಾಗಿಸುವ ಪ್ರಮಾಣವೂ ಕಡಿಮೆಯಾಗಿದೆ. ಎರಡೂ ದಿನ ಮಾರುಕಟ್ಟೆಯಲ್ಲಿ ಓಡಾಡಿದಾಗಲೂ ಬಟ್ಟೆ ಅಂಗಡಿ ಮುಂದೆ ನಿಂತು ಗ್ರಾಹಕರನ್ನು ಕರೆಯುತ್ತಿದ್ದವರ ದನಿಯಲ್ಲಿ ಉತ್ಸಾಹವೇ ಕಂಡು ಬರಲಿಲ್ಲ. ಅವರ ಮುಖದಲ್ಲಿ ಅದೇನೋ ದುಗುಡ ಮನೆಮಾಡಿರುವುದು ಕಂಡುಬಂದಿತು. ’ಯಾಕೆ ಅಂಗ್ಡಿಗೆ ಬರೋದು ಬೇಡ್ವಾ? ಮಾಮೂಲಿನಂತೆ ಕರಿತಾನೇ ಇಲ್ಲ‘ ಎಂದು ಹಾಗೇ ಮಾತಿಗೆ ಎಳೆದಾಗಲೂ ಅಷ್ಟೇನೂ ಉತ್ಸುಕತೆ ತೋರಿಸಲಿಲ್ಲ.
‘ಹೇಗಿದೆ ವ್ಯಾಪಾರ ಅಂತ ಕೇಳಿದಾಗಲೂ, ‘ಅದನ್ನೇನು ಕೇಳ್ತಿರಾ. ತಕ್ಕಮಟ್ಟಿಗೆ ನಡೀತಿದೆ ಅಷ್ಟೆ’ ಎಂದು ನಿರುತ್ಸಾಹದಿಂದ ನುಡಿದರು.
ಕೆಲವು ಮಳಿಗೆಯವರಂತೂ ತುಟಿ ಬಿಚ್ಚಲಿಕ್ಕೇನೆ ಸಿದ್ಧರಿರಲಿಲ್ಲ.
‘ಸಣ್ಣಪುಟ್ಟ ಮಳಿಗೆಗಳಲ್ಲಿ ವ್ಯಾಪಾರ ಕಡಿಮೆಯಾಗುತ್ತಿದೆ. ಇರುವವರಿಗೇ ವ್ಯಾಪಾರ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಹೊಸ ಕಾಂಪ್ಲೆಕ್ಸ್ ಗಳಿಗೆ ಬೇಡಿಕೆ ಇಲ್ಲ. ಪೇಟೆಯಲ್ಲಿ ಈಗ ಮೊದಲಿನ ಪರಿಸ್ಥಿತಿ ಇಲ್ಲ. ಹೊಸದಾಗಿ ಕೆಲಸ ಅರಸಿ ಬರುವವರಿಗೆ ಅವಕಾಶ ದೊರೆಯುತ್ತಿಲ್ಲ’ ಎಂದು ಚಿಕ್ಕಪೇಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಟ್ರೇಡ್ ಆ್ಯಕ್ಟಿವಿಸ್ಟ್ ಸಹ ಆಗಿರುವ ಸಜ್ಜನ್ ರಾಜ್ ಮೆಹ್ತಾ ಅವರು ಪರಿಸ್ಥಿತಿಯನ್ನು ವಿವರಿಸಿದರು.
’ಪ್ರತಿ ವರ್ಷ ವ್ಯಾಪಾರದಲ್ಲಿ ಪ್ರಗತಿ ಇರುತ್ತದೆ. ಮೊದಲೆಲ್ಲಾ ಶೇ 25 ರಿಂದ ಶೇ 30ರವರೆಗೆ ಬೆಳವಣಿಗೆ ಆಗುತ್ತಿತ್ತು. ಆದರೆ, ನೋಟು ರದ್ದತಿ, ಜಿಎಸ್‌ಟಿ ಜಾರಿಗೆ ಬಂದ ಬಳಿಕ ಆ ರೀತಿಯ ಬೆಳವಣಿಗೆಯೇ ಇಲ್ಲವಾಗಿದೆ. ಹೀಗಾಗಿ ಹಿಂದಿನ ವರ್ಷ ನಡೆಸಿರುವಷ್ಟಾದರೂ ವಹಿವಾಟು ಈ ವರ್ಷ ನಡೆಸಬೇಕು ಎನ್ನುವ ಲೆಕ್ಕಾಚಾರ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ‘ ಎಂದರು.
’ಅರ್ಧದಷ್ಟು ವ್ಯಾಪಾರ ಕಡಿಮೆಯಾಗಿದೆ. ನೋಟ್‌ಬ್ಯಾನ್ ಮಾಡಿದ ದಿನದಿಂದ ವ್ಯಾಪಾರಕ್ಕೆ ಗರ ಬಡಿದಿದೆ. ಯಾರೂ ಧಾರಾಳವಾಗಿ ಖರ್ಚು ಮಾಡುತ್ತಿಲ್ಲ’ ಎಂದು ಸಿದ್ಧ ಉಡುಪು ಮಾರಾಟ ಮಳಿಗೆಯ ಮಾಲೀಕರೊಬ್ಬರು ವಸ್ತುಸ್ಥಿತಿ ಬಿಚ್ಚಿಟ್ಟರು.
ಹಿಂದೆಂದೂ ಕಾಣದ ಪರಿಸ್ಥಿತಿ:’ವ್ಯಾಪಾರಸ್ಥರು ಬಹಳ ತೊಂದರೆಯಲ್ಲಿ ಇದ್ದಾರೆ. ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್ ಉದ್ಯಮಕ್ಕೆ ಇದುವರೆಗೆ ಈ ರೀತಿಯ ಸ್ಥಿತಿ ಎದುರಾಗಿರಲಿಲ್ಲ. ರಫ್ತು ವಹಿವಾಟಿನಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕವು ಈಗ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ‘ ಎಂದು ಕರ್ನಾಟಕ ಸಿದ್ಧ ಉಡುಪು ಮತ್ತು ಗಾರ್ಮೆಂಟ್ಸ್ ಒಕ್ಕೂಟದ ಹಿರಿಯ ಉಪಾಧ್ಯಕ್ಷ ಪಿ.ಎಚ್. ರಾಜ್ ಪುರೋಹಿತ್ ಹೇಳಿದರು.
’ಖರೀದಿ ವಹಿವಾಟು ಇದೇ ಬಗೆಯಲ್ಲಿ ಮಂದಗತಿಯಲ್ಲಿ ಮುಂದುವರಿದರೆ ಭವಿಷ್ಯದಲ್ಲಿ ಇನ್ನಷ್ಟು ಕಷ್ಟವಾಗುತ್ತದೆ. ಕರವಸ್ತ್ರ, ನೈಟಿ, ಅಂಡರ್ ಗಾರ್ಮೆಂಟ್‌ಗಳು ಚೀನಾ, ಬಾಂಗ್ಲಾ ಮತ್ತು ಇಂಡೊನೇಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿಗೆ ಬರುತ್ತಿವೆ. ಇದರಿಂದ ದೇಶಿ ತಯಾರಕರಿಗೆ ಹೊಡೆತ ಬೀಳುತ್ತಿದೆ. ಇಲ್ಲಿಯೇ ತಯಾರಾದ ಉತ್ಪನ್ನಗಳು ಮಾರಾಟವಾಗದೇ ಉಳಿಯುತ್ತಿವೆ.
ಪೈಪೋಟಿ ಹೆಚ್ಚಾಗಿದೆ:ಜನರ ಅಭಿರುಚಿ ಬದಲಾಗಿದೆ. ಈಗ ಬಟ್ಟೆಯಲ್ಲಿ ಆಯ್ಕೆಗಳು ಹೆಚ್ಚಾಗಿವೆ. ಸೀರೆ ಬಳಸುವವರಿಗಿಂತಲೂ ಪ್ಯಾಂಟ್-ಶರ್ಟ್, ಲೆಗ್ಗಿನ್ಸ್, ನೈಟಿ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಸೀರೆ ವ್ಯಾಪಾರ ಕಡಿಮೆಯಾಗಿದೆ.ಬಟ್ಟೆ ಹೊಲಿಸಿ ಹಾಕುವವರ ಸಂಖ್ಯೆ ಕಡಿಮೆ. ರೆಡಿಮೇಡ್‌ಗೆ ಮೊದಲ ಆದ್ಯತೆ.ವ್ಯಾಪಾರ ಸ್ವಲ್ಪ ಕಡಿಮೆ ಆಗಿದೆ. ಆದರೆ ಅದನ್ನು ಆರ್ಥಿಕ ಹಿಂಜರಿತ ಎಂದಷ್ಟೇ ಹೇಳಲು ಆಗುವುದಿಲ್ಲ. ಕಾರಣಗಳು ಬೇಕಾದಷ್ಟಿವೆ. ರೆಡಿಮೇಡ್ ಬಟ್ಟೆಗಳಿಂದಾಗಿ ಟೆಕ್ಸ್‌ಟೈಲ್ಟ್ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಸರಕುಗಳ ತಯಾರಿಕೆ ಮತ್ತು ಮಳಿಗೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು, ಬೀದಿ ಬದಿಯಲ್ಲಿ ಕಡಿಮೆ ಬೆಲೆಗೆ ಬಟ್ಟೆ ಮಾರಾಟ ಮಾಡುತ್ತಿರುವುಸು ಸಹ ವ್ಯಾಪಾರದಲ್ಲಿ ಇಳಿಕೆ ಆಗಲು ಕಾರಣಗಳಾಗಿವೆ‘ ಎನ್ನುವುದು ಚಿಕ್ಕಪೇಟೆಯಲ್ಲಿ ಕಳೆದ 30 ವರ್ಷಗಳಿಂದ ಸಗಟು ವ್ಯಾಪಾರ ನಡೆಸುತ್ತಿರುವ ಹಂಸ ಟೆಕ್ಸ್ ಟೈಲ್ಸ್ ಮಾಲಿಕ ಬಿ.ಎಂ ಹೆಬ್ಬಾರ್ ಅವರ ಅಭಿಪ್ರಾಯ.
ರಫ್ತಿಗೆ ಉತ್ತೇಜನ ಅಗತ್ಯ
‘ನಮ್ಮ ಉತ್ಪನ್ನಗಳನ್ನು ರಫ್ತು ಮಾಡಲು ಪೂರಕವಾದ ವಾತಾವರಣ ಇಲ್ಲ. ಮಂಗಳೂರು ಬಂದರು ನಮಗೆ ಹತ್ತಿರದಲ್ಲಿದೆ. ಆದರೆ, ಅಲ್ಲಿಗೆ ಹೋಗಲು ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲ. ರೈಲು, ರಸ್ತೆ ಮಾರ್ಗಗಳ ಅಭಿವೃದ್ಧಿ ಆಗಬೇಕಿದೆ. ರಸ್ತೆಯೊಂದನ್ನೇ ನೆಚ್ಚಿಕೊಳ್ಳಲು ಆಗುವುದಿಲ್ಲ. ಮಳೆಗಾಲದಲ್ಲಿ ರಸ್ತೆ ಸಂಚಾರವೇ ಸ್ಥಗಿತವಾಗುತ್ತದೆ. ಹೀಗಾಗಿ ಚೆನ್ನೈಗೆ ಕಳುಹಿಸಬೇಕಾಗುತ್ತದೆ. ಸರಕು ಸಾಗಣೆಗೆ ಅನುಕೂಲ ಆಗುವಂತೆ ರೈಲು ಸಂಪರ್ಕ ಕಲ್ಪಿಸಬೇಕು. ಇದರಿಂದ ರಫ್ತು ಹೆಚ್ಚಾಗುತ್ತದೆ’ ಎಂದು ಮೆಹ್ತಾ ಹೇಳುತ್ತಾರೆ.
ಜಿಎಸ್‌ಟಿಯದ್ದೂ ಸಮಸ್ಯೆ
’ಜಿಎಸ್‌ಟಿ ದರವು ಮಾರಾಟಕ್ಕೆ ಅಡ್ಡಿಯುಂಟು ಮಾಡಿದೆ.ಫ್ಯಾಬ್ರಿಕ್‌ಗೆ ಶೇ 5ರಷ್ಟು ಜಿಎಸ್‌ಟಿ ಹಾಕಿರುವುದು , ₹ 1,000ದ ಮೇಲಿನ ಖರೀದಿಗೆ ಶೇ 12ರಷ್ಟು ತೆರಿಗೆ ಭರಿಸಬೇಕಾಗಿರುವುದರಿಂದ ಖರೀದಿ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ.₹ 10,000 ಸಾವಿರದ ಖರೀದಿಗೆ ₹ 1,200 ತೆರಿಗೆ ಕಟ್ಟಬೇಕು ಎಂದರೆ ಗ್ರಾಹಕರು ಅದಕ್ಕೆ ಒಪ್ಪುತ್ತಿಲ್ಲ. ಮಳಿಗೆಗಳು ಹೆಚ್ಚಿಗೆ ಇರುವುದರಿಂದ ಪೈಪೋಟಿ ಜಾಸ್ತಿಯಾಗಿದೆ. ವ್ಯಾಪಾರ ನಡೆಸುವುದ ಕಷ್ಟವಾಗುತ್ತಿದೆ‘ ಎಂದು ಚಿಕ್ಕಪೇಟೆಯ ಲಾಲ್ ಬಿಲ್ಡಿಂಗ್‌ನಲ್ಲಿ ಸಿದ್ಧ ಉಡುಪುಗಳ ಮಾರಾಟ ಮತ್ತು ರಫ್ತು ವಹಿವಾಟು ನಡೆಸುವ ಛೋಪ್ರಾ ಟ್ರೇಡರ್ಸ್‌ನ ಮಾಲಿಕ ರವೀಂದ್ರ ಛೋಪ್ರಾ ಮಾಹಿತಿ ನೀಡಿದರು.
’ಒಂದು ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ ಶೇ 12ರಷ್ಟು ಜಿಎಸ್‌ಟಿ ಇದೆ. ಇದು ವ್ಯಾಪಾರಕ್ಕೆ ಪೆಟ್ಟು ನೀಡಿದೆ. ಇದನ್ನು ಶೇ 5ಕ್ಕೆ ಇಳಿಕೆ ಮಾಡಿದರೆ ಚೇತರಿಕೆಗೆ ನೆರವಾಗಲಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿರುವುದು ಸಹ ವ್ಯಾಪಾರವನ್ನು ಮತ್ತಷ್ಟು ಇಳಿಕೆ ಕಾಣುವಂತೆ ಮಾಡಿದೆ’ ಎಂದು ಮೆಹ್ತಾ ತಿಳಿಸಿದರು.
ಬೇಡಿಕೆಗಳೇನು?
* ಕೆಲವು ತಿಂಗಳವರೆಗೆ ತೆರಿಗೆ ಪಾವತಿ ಮುಂದೂಡಿಕೆ
* ಕಡಿಮೆ ದಾಖಲೆಪತ್ರಗಳೊಂದಿಗೆ ಸುಲಭವಾಗಿ ಸಾಲ ಸಿಗುವಂತೆ ಮಾಡುವುದು
* ಉದ್ಯಮ ಮತ್ತು ಕಾರ್ಮಿಕರು ಇಬ್ಬರಿಗೂ ಅನುಕೂಲ ಆಗುವಂತೆ ಕಾರ್ಮಿಕ ಕಾಯ್ದೆ ರೂಪಿಸಬೇಕು.
* ಚೇತರಿಕೆಗೆ ಪೂರಕವಾದ ಉತ್ತೇಜನಾ ಕೊಡುಗೆ
* ರಫ್ತು ಮಾಡವವರಿಗೆ ಉತ್ತೇಜನ ಅಗತ್ಯ
ಸಮಸ್ಯೆಗಳು?
* ಗರಿಷ್ಠ ಜಿಎಸ್‌ಟಿ
* ಆಮದು ಅಗ್ಗವಾಗಿರುವುದು
* ಸದ್ಯದ ಮಟ್ಟಿಗೆ, ಪ್ರವಾಹದಿಂದಾಗಿ ಕಚ್ಚಾ ಸರಕುಗಳು ಸಮಯಕ್ಕೆ ಸರಿಯಾಗಿ ಸಿಗದೇ ಇರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.