ನವದೆಹಲಿ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಸೋಮವಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.
‘ಸಿದ್ದರಾಮಯ್ಯ ಕುಟುಂಬವು ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಲೋಕಾಯುಕ್ತದ ಮೈಸೂರು ಜಿಲ್ಲಾ ಘಟಕದ ಪೊಲೀಸರು ನ್ಯಾಯಾಲಯದ ಆದೇಶದಂತೆ ಶನಿವಾರ ಎಫ್‌ಐಆರ್ ದಾಖಲಿಸಿದ್ದರು. ಅದನ್ನು ಆಧಾರವಾಗಿ ಟ್ಟುಕೊಂಡು ಇ.ಡಿ ಬೆಂಗಳೂರು
ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ‘ (ಇಸಿಐಆರ್) ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ಠಾಣೆಗಳು ಮತ್ತು ಪೊಲೀಸ್ ಇಲಾಖೆಯ ವ್ಯಾಪ್ತಿಯಲ್ಲಿರುವ ತನಿಖಾ ಸಂಸ್ಥೆಗಳು ಅಪರಾಧ ಪ್ರಕರಣಗಳ ತನಿಖೆಗೂ ಮುನ್ನ ಎಫ್‌ಐಆರ್ ದಾಖಲಿಸಲಾಗುತ್ತದೆ. ಅದೇ ಮಾದರಿಯಲ್ಲಿ ಇ.ಡಿ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುವಾಗ ಇಸಿಐಆರ್ ದಾಖಲಿಸಿ, ಮುಂದುವರಿಯುತ್ತದೆ.
ಸಿದ್ದರಾಮಯ್ಯ ಹಾಗೂ ಇತರ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಕ್ಕೆ ಶೋಧ ಕಾರ್ಯಾಚರಣೆ ನಡೆಸಬಹುದು.
ತನಿಖೆಗೆ ಹಾಜರಾಗುವಂತೆ ಸಿದ್ದರಾಮಯ್ಯ ಹಾಗೂ ಇತರ ಆರೋಪಿಗಳಿಗೆ ಇ.ಡಿ. ನೋಟಿಸ್ ಜಾರಿಗೊಳಿಸಬಹುದು.
ವಿಚಾರಣೆಗೆ ಹಾಜರಾಗಲು ಆರೋಪಿಗಳು ಕಾಲಾವಕಾಶ ನೀಡುವಂತೆ ಇ.ಡಿ.ಗೆ ಮನವಿ ಸಲ್ಲಿಸಬಹುದು.
ಪ್ರಕರಣ ಪ್ರಶ್ನಿಸಿ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಬಹುದು.
ಪ್ರಬಲ ಪುರಾವೆ ಸಿಕ್ಕರೆ ಮುಖ್ಯಮಂತ್ರಿ ಬಂಧನವೂ ಆಗಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.